Worship
494
—
498
494
ಹರಿಭಜಕರೊಳು ಭಯದಿನೊಗೆದುದೆನಿಬರ ಭಕುತಿ? ।
ವರದ ಮೇಲಣ ಭಕ್ತಿಯೆನಿಬರದು ನೋಡೆ? ॥
ಬರಿಯ ಸಂತೋಷದನುರಾಗರಸ ನಿಜಭಕ್ತಿ- ।
ಪರಮದಾಕರ್ಷೆಯದು - ಮಂಕುತಿಮ್ಮ ॥ ೪೯೪ ॥
ಹರಿಭಕ್ತರಲ್ಲಿ ‘ಭಯ’ದಿಂದ ‘ಭಕ್ತಿ’ ಯನ್ನು ತೋರುವವರು ಮತ್ತು ಬೇಡಿಕೆಗಳನ್ನು ಮುಂದಿಟ್ಟು, ಆ ಬೇಡಿಕೆಗಳು ಈಡೇರಲೆಂದು ಭಕ್ತಿ ತೋರುವವರು, ಮತ್ತು ‘ ನೀ ನನಗೆ ಇದ ಕೊಟ್ಟರೆ, ನಾ ನಿನಗೆ ಅದ ಕೊಡುವೆ ಎಂದು ಆ ದೈವದೊಂದಿಗೆ ವ್ಯಾಪಾರದ ಭಕ್ತಿ ತೋರುವವರೇ ಹೆಚ್ಚಾಗಿದ್ದಾರೆ. ಆದರೆ ಕೇವಲ ಆನಂದದ ಮತ್ತು ಅನುರಾಗದ ಭಾವದಿಂದ ‘ನಿರಪೇಕ್ಷಿ ‘ಯಾಗಿ ತೋರುವುದೇ ನಿಜವಾದ ಭಕ್ತಿ ಎಂದು ಅರುಹುತ್ತಾರೆ ನಮಗೆ ಈ ಮುಕ್ತಕದಲ್ಲಿ.
495
ಅರುಣೊದಯಪ್ರಭೆಯ, ಗಿರಿಶೃಂಗದುನ್ನತಿಯ ।
ವರುಣಾಲಯಾಯತಿಯ ನಿರುಕಿಸಿದೊಡಹುದೇಂ? ॥
ಬೆರಗು, ಬರಿಬೆರಗು, ನುಡಿಗರಿದೆನಿಪ್ಪಾನಂದ ।
ಪರಮಪೂಜೆಯುಮಂತು - ಮಂಕುತಿಮ್ಮ ॥ ೪೯೫ ॥
ಮೂಡುತ್ತಿರುವ ಸೂರ್ಯನ ಬೆಳಕನ್ನು, ಮುಗಿಲನ್ನು ಮುಟ್ಟುವಂತೆ ನಿಂತಿರುವ ಗಿರಿಗಳ ಎತ್ತರವನ್ನು, ಅಳತೆಗೆ ಎಟುಕದ ಕಡಲ ವಿಸ್ತಾರವ ನೋಡಿದಾಗ ಅವುಗಳ ನಿಜ ಸೌಂದರ್ಯವು ನಮ್ಮನ್ನು ಬೆರಗಾಗಿಸಿ ನಮ್ಮಲ್ಲಿ ಮಾತಿಗೆ ಎಟುಕದಂತ ಒಂದು ಪ್ರಶಾಂತ,ಮೂಕ ಆದರೂ ಆನಂದದ ಭಾವವು ಬಂದು ನಿಲ್ಲುವುದಿಲ್ಲವೇ? ಹಾಗೆಯೇ ಪರಮಾತ್ಮನ ಪೂಜೆಯೂ ಆಗಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
496
ಬೆರಗಾಗಿಪುವುವೆಲ್ಲ ಪಿರಿತನದ ನೋಟಗಳು ।
ಬೆರಗೆ, ಮೈಮರೆವೆ, ಸೊಲ್ಲಣಗುವುದೆ ಸೊಗಸು ॥
ಬೆರಗು ಚಿತ್ತವ ನುಂಗಲೊಗೆವ ಶಾಂತಿಯ ಕಾಂತಿ ।
ಪರಮನರ್ಚನೆಗೆ ವರ - ಮಂಕುತಿಮ್ಮ ॥ ೪೯೬ ॥
ಜಗತ್ಸೃಷ್ಟಿಯ ಹಿರಿದಾದ ನೋಟಗಳೆಲ್ಲ ನಮ್ಮನ್ನು ಬೆರಗಾಗಿಸುತ್ತವೆ. ಆ ಬೆರಗು ನಮ್ಮನ್ನು ಮೈಮರೆಯುವಂತೆ ಮಾಡಿದಾಗ ನಾವು ಮೂಕಸ್ಮಿತರಾಗುವುದೇ ಸೊಗಸು. ನಾವು ಹಾಗೆ ಬೆರಗಾದಾಗ ನಮ್ಮ ಮನಸ್ಸನ್ನು ಆವರಿಸುವ ಪ್ರಭೆಯ ಅಥವಾ ಕಾಂತಿಯ ಶಾಂತತೆಯೇ ನಮಗೆ ಆ ಪರಮಾತ್ಮನನ್ನು ಪೂಜಿಸಲು ಸಿಕ್ಕ ‘ವರ’ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.
497
ಸುತೆಯ ಪೋಷಿಸಿ ಬೆಳಸಿ, ಧನಕನಕದೊಡನವಳನ್- ।
ಇತರಗೃಹಕಿತ್ತು ನೀಂ ಕೇಳ್ವ ಮುಯ್ಯೇನು? ॥
ಪ್ರತಿಫಲವು ಬೇರೇಕೆ? ಸುಕೃತಕದು ತಾನೆ ಫಲ ।
ಹಿತ ಮನದ ಪಾಕಕದು - ಮಂಕುತಿಮ್ಮ ॥ ೪೯೭ ॥
ತನ್ನ ಮಗಳನ್ನು ಪೋಷಿಸಿ, ಬೆಳೆಸಿ, ದೊಡ್ದವಳನ್ನಾಗಿಸಿ, ಸೂಕ್ತ ವಯಸ್ಸಿನಲ್ಲಿ ಧನ ಕನಕಗಳ ಸಹಿತ ವಿಜೃಂಭಣೆಯಿಂದ ವಿವಾಹ ಮಾಡಿ ಅನ್ಯರ ಮನೆಗೆ ಕಳುಹಿಸಿಕೊಡುವಾಗ, ತಂದೆ ಪ್ರತಿಫಲವಾಗಿ ಅಪೇಕ್ಷೆ ಪಡುವುದೇನು? ಮಾಡಿದ ಕೆಲಸ ಸರಾಗವಾಗಿ ನಡೆದರೆ ಅದೇ ಒಳ್ಳೆಯ ಫಲವಲ್ಲವೇ? ಹಾಗೆಯೇ (ಪರಮಾತ್ಮನ ಪೂಜೆಯಿಂದ) ಮನಸ್ಸು ಹಿತವಾಗಿ ಪಕ್ವವಾದರೆ ಸಾಕಲ್ಲವೇ ಬೇರೇನು ಬೇಕು? ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
498
ಸಂಗೀತ ತಲೆದೂಗಿಪುದು, ಹೊಟ್ಟೆ ತುಂಬೀತೆ? ।
ತಂಗದಿರನೆಸಕ ಕಣ್ಗಮೃತ, ಕಣಜಕದೇಂ? ॥
ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ ।
ಪೊಂಗುವಾತ್ಮವೆ ಲಾಭ - ಮಂಕುತಿಮ್ಮ ॥ ೪೯೮ ॥
ಸಂಗೀತವನ್ನು ಆಲಿಸಿದರೆ ಮನಸ್ಸಿಗೆ ಸಂತೋಷವಾಗುತ್ತದೆ, ಹೊಟ್ಟೆ ತುಂಬುತ್ತದೆಯೇ? ಇಲ್ಲ, ಹುಣ್ಣಿಮೆಯ ಬೆಳದಿಂಗಳು ಕಣ್ಣುಗಳಿಗೆ ಹಿತವಾಗಿರುತ್ತದೆ, ಮನೆಗೆ ದವಸ ದಾನ್ಯ ತಂದೀತೆ? ಇಲ್ಲ, ಹಾಗಾಗಿ ಸುಕೃತವನ್ನು ಎಸಗುವಾಗ ವಸ್ತುರೂಪದ ಪ್ರತಿಫಲವನ್ನು ಅಪೇಕ್ಷಿಸಬೇಡ. ಅಂತಹ ಒಳ್ಳೆಯ ಕೆಲಸ ಮಾಡುವುದರಿಂದ, ಕೇವಲ ಆತ್ಮಾನಂದವನ್ನು ಪಡೆಯಬೇಕು ಎಂದು ಸೂಚನೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.