Begging for a boon
499
—
503
499
ದೇವಮಂದಿರ ಭಜನೆ ಪೂಜೆ ಪ್ರಸಾದಗಳು ।
ಜೀವನದಲಂಕಾರ, ಮನಸಿನುದ್ಧಾರ ॥
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- ।
ದಾವುದಾದೊಡಮೊಳಿತು - ಮಂಕುತಿಮ್ಮ ॥ ೪೯೯ ॥
ದೇವಸ್ಥಾನಕ್ಕೆ ಹೋಗುವುದು, ಭಜನೆ ಮಾಡುವುದು, ಪೂಜೆ, ನೈವೇಧ್ಯ, ಪ್ರಸಾದ ಎಲ್ಲವೂ ನಮ್ಮ ಜೀವನಕ್ಕೆ ಒಂದು ಅಲಂಕಾರವಿದ್ದಂತೆ, ಮನಸ್ಸಿನ ಉದ್ಧಾರದ ಮಾರ್ಗವಷ್ಟೇ. ಇವೆಲ್ಲವನ್ನೂ ಮಾಡಿ ನಮ್ಮ ಮನಸ್ಸು ಬುದ್ಧಿಗಳನ್ನು ಈ ಕ್ಷಣಿಕ ಜಗತ್ತಿನ ಅಂಟಿನಿಂದ ಬಿಡಿಸಿಕೊಂಡು ನಮ್ಮ ಭಾವ ಮತ್ತು ಆಲೋಚನೆಗಳಲ್ಲಿ ಒಂದಿಷ್ಟು ಔನ್ನತ್ಯವನ್ನು ಪಡೆದರೆ ಒಳಿತು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ
500
ದೇವನೇನತಿಶಯಿತಮಾನಿಸನೆ ಭೋಗಕ್ಕೆ? ।
ಹೂವುಣಿಸು ಮುಡುಪೊಡವೆಯವನಿಗಂ ಬೇಕೆ? ॥
ಆವುದೊಳ್ಳಿತೊ ತನಗೆ ನರನದನು ಪರಮಂಗೆ ।
ನೈವೇದಿಪುದು ಸಾಜ - ಮಂಕುತಿಮ್ಮ ॥ ೫೦೦ ॥
ನಾವು ಪೂಜೆಮಾಡುವ ಆ ದೇವನು ಅತಿಶಯದ ಮನುಷ್ಯನೇನು. ನಾ ಮಾಡುವ ಹೂವಿನಲಂಕಾರ, ಕಟ್ಟಿಡುವ ಮುಡುಪುಗಳು, ನಾ ತೊಡಿಸುವ ಒಡವೆ ವಸ್ತ್ರಗಳು ಅವನಿಗೆ ಬೇಕೆ? ತಮಗೆ ಏನು ಬೇಕೋ, ಯಾವುದು ಹಿತವೋ ಅದನ್ನು ಆ ದೇವನಿಗೆ ಅರ್ಪಿಸುವುದು ಮಾನವನ ಸಹಜ ಗುಣ ಎಂದು ಭಕ್ತಿಯ ಒಂದು ಆಯಾಮವನ್ನು ಇಲ್ಲಿ ವಿಚಾರಕ್ಕೆ ಇಟ್ಟಿದ್ದಾರೆ ನಮಗೆ ಈ ಮುಕ್ತಕದಲ್ಲಿ
501
ಯುಕ್ತಿಸಾಮ್ರಾಜ್ಯದಲಿ ಭಕ್ತಿ, ಬಡ ಪರದೇಶಿ ।
ಶಕ್ತಿ ಚತುರತೆಯುಡುಗಿ ನೀನು ಸೋತಂದು ॥
ಉತ್ಕ್ರಮಣದರೆಮನದಿ ದೈವವನು ಪಿಡಿದೇನು? ।
ಭಕ್ತಿ ರಕ್ತದಿ ಪರಿಗೆ - ಮಂಕುತಿಮ್ಮ ॥ ೫೦೧ ॥
ನಮ್ಮ ಅತಿ ಬುದ್ಧಿವಂತಿಕೆ ಉಪಯೋಗಿಸಿ ನಾವು ನಡೆಸುವ ಜೀವನದಲ್ಲಿ ಹಲವಾರು ಚತುರತೆಗಳನ್ನು ಬಳಸಿ ಬದುಕಬಹುದು. ಹಾಗೆ ಬದುಕುವಾಗ, ದೈವ ಭಕ್ತಿಯೆನ್ನುವುದು ನಮ್ಮಲ್ಲಿ ಸೊರಗುತ್ತದೆ, ಬಡವಾಗುತ್ತದೆ. ದೇಹದ ಶಕ್ತಿಯು ಅಡಗಿ ನಾವು ಸೊರಗಿದಾಗ ‘ನಮ್ಮದೆಲ್ಲ ಮುಗಿಯಿತು, ಹೇ ಪರಮಾತ್ಮ ನೀನೆ ಗತಿ’ ಎಂದು ಸಾಯುವ ಸಮಯದಲ್ಲಿ ಭಕ್ತಿ ತೋರಿದರೆ ಏನೂ ಪ್ರಯೊಜನವಿಲ್ಲ. ಭಕ್ತಿಯನ್ನುವುದು ನಮ್ಮ ದೇಹದಲ್ಲಿ ರಕ್ತ ಹರಿದಂತೆ ನಮ್ಮ ಮನಸ್ಸಿನಲ್ಲಿ ಸದಾಕಾಲ ಪ್ರಹಿಸುತ್ತಿರಬೇಕು ಎಂದು ಭಕ್ತಿ ನಮ್ಮಲ್ಲಿ ಹೇಗಿರಬೇಕು ಎನ್ನುವುದನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕ್ದಲ್ಲಿ.
502
ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- ।
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ॥
ಇಷ್ಟವಾತನೊಳುದಿಸುವುವಂತೆ, ಚೋದಿಪುದೆಂತು? ।
ಕಷ್ಟ ನಮಗಿಹುದಷ್ಟೆ - ಮಂಕುತಿಮ್ಮ ॥ ೫೦೨ ॥
ಬೃಹತ್ತಾದ ಈ ಜಗತ್ತಿನಲ್ಲಿ ನಾವು ಒಂದು ಧೂಳ ಕಣದ ಲಕ್ಷದ ಒಂದು ಭಾಗವೂ ಅಲ್ಲ. ಆದರೆ ಅವನೋ, ಪರಮಾತ್ಮ, ಸೃಷ್ಟಿಯನ್ನೇ ಮಾಡುವ ಶಕ್ತಿಯುಳ್ಳವನು ಮತ್ತು ಬ್ರಹ್ಮಾಂಡಕ್ಕಿಂತ ಹಿರಿದಾದವನು. ಹಾಗಿರುವಾಗ ನಮ್ಮನ್ನು ಸೃಷ್ಟಿಸಿದ ಅವನಿಗೆ ನಮ್ಮ ಅವಶ್ಯಕತೆಗಳು ಮತ್ತು ನಮ್ಮ ಇಷ್ಟಗಳನ್ನು ಅರಿತುಕೊಂಡು ಎಲ್ಲವನ್ನೂ ನೀಡಲು ಗೊತ್ತಿಲ್ಲವೇನು? ಆದರೆ ಹಾಗೆ ನಮಗೆ ನೀಡುವ ಇಷ್ಟವನ್ನು ಅವನಲ್ಲಿ ಉಂಟಾಗುವಂತೆ ಮಾಡುವುದೇ ನಮಗಿರುವ ಕಷ್ಟ ಎಂದು ನಮ್ಮ ಪ್ರಾರ್ಥನೆ ಪೂಜೆಗಳ ಫಲ ಸ್ವರೂಪವನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
503
ಜೀವಸತ್ತ್ವದಪಾರಭಂಡಾರವೊಂದಿಹುದು ।
ಸಾವಕಾರನದೃಷ್ಟನ್ ಅದನಾಳುತಿಹನು ॥
ಅವಶ್ಯಕದ ಕಡವನವನೀವುದುಂಟಂತೆ! ।
ನಾವೊಲಿಪುದೆಂತವನ? - ಮಂಕುತಿಮ್ಮ ॥ ೫೦೩ ॥
ಜಗತ್ತಿನ ಸಮಸ್ತ ಜೀವಕೋಟಿಗೆ ಏನೇನು ಬೇಕೋ ಅವೆಲ್ಲವೂ ಒಳಗೊಂಡಂತೆ ಈ ಜಗತ್ತು ಸತ್ವಭರಿತವಾಗಿದೆ. ಈ ಸತ್ವಕ್ಕೆಲ್ಲ ಒಡೆಯ, ಅಧಿಪತಿ ಆ ಪರಮಾತ್ಮ. ನಾವು ಕೇಳಿ ಬಯಸಿದ್ದನ್ನು ಕೊಡಲು ಅವನಿಗೆ ಸಾಧ್ಯವಿದೆ. ಆದರೆ ಅವನಿಂದ ನಮಗೆ ಬೇಕಾದ್ದನ್ನು ಪಡೆಯಲು ಅವನನ್ನು ಒಲಿಸುವುದು ಹೇಗೆ ಎನ್ನುವುದೇ ನಮ್ಮ ಪ್ರಶ್ನೆ ಎಂದು ಒಂದು ಗಹನವಾದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.