Rain of new goodness
504
—
508
504
ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ ।
ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ॥
ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ ।
ಮುಗಿಲವೊಲು ದೈವಕೃಪೆ - ಮಂಕುತಿಮ್ಮ ॥ ೫೦೪ ॥
ಗಗನವು ಸೂರ್ಯನ ಪ್ರತಾಪದಿಂದ ಶಾಖ ಹೆಚ್ಚಾಗಿ ಇಡೀ ಧರೆಗೆ ಒಂದು ಬಿಸಿಯ ಹೊದಿಕೆಯಂತಾಗಿ, ಭೂಮಿಯ ಮೇಲಿನ ಎಲ್ಲಾ ಕೆರೆಗಳು ಆ ಶಾಖದಿಂದ ಒಲೆಗಳಂತಾಗಿ ನೀರೆಲ್ಲ ಬತ್ತಿ, ಜಗತ್ತಿನ ಉಸಿರೆಲ್ಲ ಹೊಗೆಯಂತೆ ಧಗಧಗಿಸುವಾಗ, ರಾತ್ರಿಯಲ್ಲಿ ಎಲ್ಲಿಂದಲೋ ಮೋಡಗಳೆಲ್ಲ ಒಂದುಗೂಡಿ ಧರೆಯನ್ನು ತಂಪಾಗಿಸಲು ಮಳೆಯ ಸುರಿಸುವಂತೆ, ಕಷ್ಟಗಳ ಸರಮಾಲೆಗಳಲ್ಲಿ ಸಿಕ್ಕು, ನಮಗೆ ಜೀವನವು ದುರ್ಭರವಾಗಿ, ಬದುಕಿನಲ್ಲಿ ತಾಪ ಹೆಚ್ಚಾಗಿ, ಅನ್ಯ ದಾರಿಯಿಲ್ಲದೆ ಕಂಗಾಲಾಗಿ ನಾವು ನಿಂತಾಗ, ನಮಗೆ ಆ ದೈವದ ಕೃಪೆ ಬರುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
505
ದೈವಕೃಪೆಯೆನುವುದೇಂ? ಪರಸತ್ತ್ವನವವೃಷ್ಟಿ ।
ಜೀವಗುಣ ಪಕ್ವಪಟ್ಟಂತದರ ವೇಗ ॥
ಭಾವಚೋದನೆಗಳಲಿ ಬಾಹ್ಯಸಾಧನೆಗಳಲಿ ।
ತೀವಿ ದೊರೆಕೊಳುವುದದು - ಮಂಕುತಿಮ್ಮ ॥ ೫೦೫ ॥
ದೇವರ ಕೃಪೆ ಎಂದರೆ ಏನು? ಪ್ರತಿನಿತ್ಯ ನವ ನವೀನ ರೀತಿಯಲ್ಲಿ ನಮಗೆ ಸಿಗುವ ಅವನ ಕೃಪೆಯಷ್ಟೆ. ಜೀವಿ ತನ್ನ ಅಂತರಂಗದ ಭಾವದಲ್ಲಿ ಮತ್ತು ಬಾಹ್ಯ ನಡವಳಿಕೆಗಳಲ್ಲಿ ಎಷ್ಟು ಬೇಗ ಪಕ್ವಗೊಂಡರೆ, ಅಷ್ಟೇ ವೇಗದಲ್ಲಿ ಅವನಿಗೆ ಆ ‘ಪರಮಾತ್ಮನ ಕೃಪಾಧಾರೆ’ ಸುರಿದು ತುಂಬಿಕೊಳ್ಳುವುದು ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
506
ದೊರೆಗೆ ನೀಂ ಬಿನ್ನಯಿಸೆ ನೂರೆಂಟು ಬಯಕೆಗಳ ।
ಸರಿ ತನಗೆ ತೋರ್ದೆನಿತನ್ ಅದರೊಳವನೀವಂ ॥
ಅರಿಕೆಯೆಲ್ಲವನಡಸದಿರೆ ದೊರೆಯೆ ಸುಳ್ಳಹನೆ? ।
ಕರುಣೆ ನಿರ್ಬಂಧವೇಂ? - ಮಂಕುತಿಮ್ಮ ॥ ೫೦೬ ॥
ರಾಜನಿಗೆ ನೀನು ನಿನ್ನ ನೂರೆಂಟು ಬಯಕೆಗಳನ್ನು ಅರಿಕೆಮಾಡಿದರೆ, ಅವನಿಗೆ ಯಾವುದು ಸರಿಯೆಂದು ತೋರುವುದೋ ಅದನ್ನು ನೀಡುವನು. ನೀ ಕೇಳಿದ್ದೆಲ್ಲ ಕೊಡಲಿಲ್ಲವೆಂದರೆ ಅವನು ರಾಜನೇ ಅಲ್ಲವೆಂದು ಹೇಳಲು ಸಾಧ್ಯವೇ? ಹಾಗೆಯೇ ಪರಮಾತ್ಮನ ಕರುಣೆಯೂ ಸಹ ಎಂದು ಭಗವದ್ಕೃಪಾವಿಧಾನವನ್ನು ನಮಗೆ ಅರುಹಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.
507
ದಂಡನಿರ್ಣಯದಿ ನೀಂ ಕ್ಷಮಿಸೆನಲ್ ನ್ಯಾಯಪತಿ ।
ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್ ॥
ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು ।
ಕುಂದಿಸಲಿಕಾಗದೇಂ? - ಮಂಕುತಿಮ್ಮ ॥ ೫೦೭ ॥
‘ನನ್ನ ಶಿಕ್ಷೆ ಕಡಿಮೆ ಮಾಡಿ ಎಂದು’ ಬೇಡಿದರೆ ನ್ಯಾಯಾಧಿಪತಿಯು ಅಪರಾಧಿಯ ಹಿಂದಿನ ಸದ್ವರ್ತನೆ ಮತ್ತು ಹಿಂದೆ ಅವನು ಅನುಭವಿಸಿರುವ ದುಃಖವನ್ನು ಪರಿಗಣಿಸಿ, ತಂದೆ ತನ್ನ ಸುತನು ಸರಿ ಮಾರ್ಗದಲ್ಲಿರಲೆಂದು ಶಿಕ್ಷೆ ಕಡಿಮೆ ಮಾಡುವಂತೆ, ಶಿಕ್ಷೆಯ ತೀವ್ರತೆ ಮತ್ತು ಕಠಿಣತೆಯನ್ನು ಕಡಿಮೆಮಾಡಲಾರನೆ? ಎಂದು ಪ್ರಶ್ನಿಸುತ್ತಾ ಪರಮಾತ್ಮನ ಕೃಪೆಯಿಂದ ನಾವು ನಮ್ಮ ಪೂರ್ವ ಕರ್ಮ ಮತ್ತು ಅದರ ಪರಿಣಾಮಗಳ ತೀವ್ರತೆಯನ್ನು ಹೇಗೆ ಕಡಿಮೆಮಾಡಿಕೊಳ್ಳಬಹುದು ಎಂಬ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
508
ತಕ್ಕಡಿಯ ದೈವ ಪಿಡಿದದರೊಂದು ತಟ್ಟೆಯಲಿ ।
ಒಕ್ಕುವುದು ಬಿಡದೆ ಜೀವಿಯ ಪಾಪಚಯವ ॥
ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ ।
ಭಕ್ತಿ ಪಶ್ಚಾತಾಪ - ಮಂಕುತಿಮ್ಮ ॥ ೫೦೮ ॥
ನಾವು ಮಾಡಿದ ಕೃತ್ಯಗಳನ್ನು ಒಳ್ಳೆಯ ಮತ್ತು ಕೆಟ್ಟದ್ದೆಂದು ವಿಂಗಡಿಸಿ, ಒಂದು ತಕ್ಕಡಿಯಲ್ಲಿ ಒಂದು ತಟ್ಟೆಗೆ ಸತ್ಕರ್ಮಗಳನ್ನೂ ಮತ್ತೊಂದು ತಟ್ಟೆಗೆ ಪಾಪಕರ್ಮಗಳನ್ನೂ ಹಾಕಿ ಆ ದೈವ ‘ತುಲನೆ’ ಮಾಡುತ್ತದಂತೆ. ಸುಕೃತಗಳ ಫಲ ಸುಖದ ರೂಪದಲ್ಲಿ ಮತ್ತು ಪಾಪ ಕರ್ಮಗಳ ಫಲ ಕಷ್ಟಗಳ ರೂಪದಲ್ಲಿ ನಮಗೆ ಸಿಗುತ್ತದೆ. ಈಗಾಗಲೇ ಗಂಟು ಕಟ್ಟಿಕೊಂಡ ಪಾಪ ಕ್ರಮಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಅವುಗಳು ನಮ್ಮ ಮೇಲೆ ಭೀರುವ ಪ್ರಭಾವ ಮತ್ತು ಪರಿಣಾಮಗಳ ತೀವ್ರತೆಯನ್ನು ಭಕ್ತಿ ಮತ್ತು ಪಶ್ಚಾತ್ತಾಪಗಳಿಂದ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದೇ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಅಂತರ್ಯ.