Kagga Logo

Scheme of penance

489

493

489

ಕಣ್ಣಿರದೆ ರವಿಯೇನು? ರವಿಯಿರದೆ ಕಣ್ಣೇನು? ।
ಅನ್ಯೋನ್ಯ ಸಹಕೃತಿಯಿನುಭಯ ಸಾರ್ಥಕತೆ ॥
ನಿನ್ನಾತ್ಮ ಜಗದಾತ್ಮಕಂತು ಸಂಬಂಧವವು ।
ವಹ್ನಿಸ್ಫುಲಿಂಗಗಳೊ - ಮಂಕುತಿಮ್ಮ ॥ ೪೮೯ ॥

ಸೃಷ್ಟಿಯ ಪರಸ್ಪರ ನಿರ್ಭರತೆಯನ್ನು ಮುಂದುವರೆಸುತ್ತಾ, ನೋಡುವ ಶಕ್ತಿಯಿಲ್ಲದೆ ಬೆಳಕಿದ್ದರೇನು ಬಿಟ್ಟರೇನು? ಬೆಳಕಿಲ್ಲದಿದ್ದರೆ ಕಣ್ಣಿದ್ದರೆಷ್ಟು ಬಿಟ್ಟರೆಷ್ಟು, ಇವೆರಡರ ಅನ್ಯೋನ್ಯತೆ ಮತ್ತು ಸಹಕಾರವೇ, ಆತ್ಮ ಮತ್ತು ಪರಮಾತ್ಮ ಸಂಬಂಧದ ಸ್ವರೂಪ, ಬೆಂಕಿಯಿದ್ದಾಗ ಕಿಡಿಯಿರುವಂತೆ ಎಂದು ಪ್ರತಿವಸ್ತುವಿಗೂ ಇರುವ ಕಾರಣ,ಕಾರ್ಯ,ಕರ್ಮ ಮತ್ತು ಫಲದ ಸ್ವರೂಪವನ್ನು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

490

ಬಹಿರದ್ಭುತವ ಮನುಜನಂತರದ್ಭುತವರಿತು ।
ಗ್ರಹಿಸುವಂತಾಗಿಸಲು ಪೂರ್ವಾನುಭವಿಗಳ್ ॥
ಬಹುಪರಿಯುಪಾಯಗಳ ನಿರವಿಸಿಹರದಕೇಕೆ ।
ಗಹಗಹಿಸುವೆಯೊ, ಮರುಳೆ? - ಮಂಕುತಿಮ್ಮ ॥ ೪೯೦ ॥

ನಮ್ಮ ಪೂರ್ವಜರು ತಮ್ಮ ಅನುಭವದಿಂದ, ಸೃಷ್ಟಿಯಲ್ಲಿ ನಮಗೆ ಹೊರಗೆ ಕಾಣುವ ಅದ್ಭುತಗಳನ್ನು ಅಂತರಂಗದಲ್ಲಿ ಅರಿತುಕೊಳ್ಳಲು ಹಲವಾರು ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅದನ್ನು ಅರಿಯುವ ಮುನ್ನ ಅಥವಾ ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನೇ ಮಾಡದೆ ಅದನ್ನು ಕಂಡು ಕುಹಕವಾಡುವಂತೆ ಗಹಗಹಿಸಿ ಏಕೆ ನಗುತ್ತೀಯೆ,ಹುಚ್ಚಾ ಎಂದು ಸತ್ಯವರಿಯದೆ ಒಂದು ವಿಷಯದ ಬಗ್ಗೆ ಕುಹಕವಾಡುವ ಮನಗಳನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

491

ಅಂಬುಧಿಯ ಮಡಕೆಯಲಿ, ಹೊಂಬಿಸಿಲ ಕಿಟಿಕಿಯಲಿ ।
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ॥
ಬಿಂಬದೊಳಗಮಿತ ಸತ್ತ್ವವ ಪಿಡಿದಿಡುವ ಭಕ್ತಿ- ।
ಯಿಂಬು ಕಿಂಚಿನ್ಮತಿಗೆ - ಮಂಕುತಿಮ್ಮ ॥ ೪೯೧ ॥

ಸಾಗರವನ್ನು ಒಂದು ಪುಟ್ಟ ಮಡಕೆಯಲ್ಲಿ ಅಥವಾ ಸೂರ್ಯನ ಹೊಂಬಿಸಿಲನ್ನು ತನ್ನ ಪುಟ್ಟ ಗುಡಿಸಲಿನ ಕಿಟಕಿಯಲ್ಲಿ ತುಂಬಿಕೊಳ್ಳುವ ಪ್ರಯತ್ನಪಡುವ ಬಡವನಂತೆ ಮಹತ್ತಾದ ಪರತತ್ವವನ್ನು ಒಂದು ಪುಟ್ಟ ಮೂರ್ತಿಯಲ್ಲಿ ಕಾಣುವುದೇ ಭಕ್ತಿ ಎಂದು ಮಹತ್ತಾದ ವಿಷಯವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.

492

ಬಹಿರಂತರೈಕ್ಯವನು ನೆನಪಿಗಾಗಿಸಲೆಂದು ।
ವಿಹಿತಮ್ ಆಚಮನಾರ್ಘ್ಯ ಪೂಜೆ ನೈವೇದ್ಯ ॥
ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ ।
ಸಹಭಾವವದಕೆ ಸರಿ - ಮಂಕುತಿಮ್ಮ ॥ ೪೯೨ ॥

ಹೊರ ಮತ್ತು ಒಳಗಿನ ಚೇತನವು ಒಂದೇ ಎಂದು ನಮಗೆ ನೆನಪು ಮಾಡಿಕೊಡಲು ವಿಧಿಸಲ್ಪಟ್ಟ ಕ್ರಮವೇ, ಆಚಮನ ಅರ್ಘ್ಯ ಮತ್ತು ನೈವೇಧ್ಯಗಳಿಂದ ಮಾಡುವಂತಹ ಪೂಜೆ. ಈ ಪೂಜಾಕ್ರಮದಿಂದ ನಮ್ಮ ಒಳಗಿರುವ ಮತ್ತು ಹೊರಗಿರುವ ಚೇತನಗಳ ಏಕತೆ ಮತ್ತು ಐಕ್ಯತೆಯನ್ನು ಅರಿತು ಎರಡರಲ್ಲೂ ಸಮನ್ವಯವನ್ನು ತಾಳುವುದಕ್ಕೆ ಸರಿಯಾದ ಉಪಾಯವೇ ಪೂಜೆ ಎನ್ನುತ್ತಾರೆ ಈ ಮುಕ್ತಕದಲ್ಲಿ.

493

ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ ।
ಮಹಿಮೆಯಲ್ಲೇನೆಂದು ಸಂಶಯಿಸಬೇಡ ॥
ವಿಹಿತಗೈದವರಾರು ವಸತಿಂ ದೈವಕ್ಕೆ? ।
ಮಹಿಮೆ ಮನಸೋತೆಡೆಯೊ - ಮಂಕುತಿಮ್ಮ ॥ ೪೯೩ ॥

ಪರಮಾತ್ಮ ಸರ್ವ ವ್ಯಾಪಿ. "ಬಹಳ ಜನ ಕೈ ಮುಗಿಯಲು ಹೋಗುವ ಪುಣ್ಯತೀರ್ಥದಲ್ಲಿ ಅಥವಾ ಪುಣ್ಯಕ್ಷೇತ್ರದಲ್ಲಿ ಮಾತ್ರ ಪರಮಾತ್ಮನ ಮಹಿಮೆ ಇದೆಯೇನು?" ಎಂದು ಸಂಶಯಪಡಬೇಡ. ಆ ದೈವಕ್ಕೆ ಇಂತಹ ಕಡೆಯೇ ಇರಬೇಕು ಅಥವಾ ಇರಬಹುದು ಎಂದು ನಿಗದಿ ಪಡಿಸಿದವರಾರು? ಮಾನವರು ದೈವಕ್ಕೆ ಮನಸೋತೆಡೆಯಲ್ಲಾ ಆ ದೈವದ ಮಹಿಮೆ ಇರುವುದು ಎಂದು ಮನುಜರ ಭಕ್ತಿಯ ಪರಿಪರಿ ವಿಧಗಳನ್ನು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.