Devotion is natural
484
—
488
484
ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ ।
ಎತ್ತಲೋ ಸಖನೊರ್ವನಿಹನೆಂದು ನಂಬಿ ॥
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು ।
ಭಕ್ತಿಯಂತೆಯೆ ನಮದು - ಮಂಕುತಿಮ್ಮ ॥ ೪೮೪ ॥
ಕತ್ತಲಲ್ಲಿ ಭ್ರಮಿಸಿ ಏನನ್ನೋ ಕಂಡಂತಾಗಿ ಹೆದರಿದ ನಾಯಿ, ತನ್ನನ್ನು ಕಾಯುವ ಅಥವಾ ಕಾಪಾಡುವ ಯಾರೋ ಒಬ್ಬ ಸ್ನೇಹಿತನಿರುವನೆಂದು, ಎಲ್ಲಿರುವನೆಂದು ಅರಿಯದಿದ್ದರೂ, ಕತ್ತೆತ್ತಿ ಮೋಳಿಡುತ, ಬೊಗುಳಿ, ಹಾರಾಡಿ ಪರದಾಡುವುದು. ನಮ್ಮ ಭಕ್ತಿಯೂ ಸಹ ಇದೆ ರೀತಿಯದೆಂದು ಹೇಳುತ್ತಾರೆ ನಮ್ಮ ಗುಂಡಪ್ಪನವರು.
485
ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ ।
ನಂಬಿಯುಂ ನಂಬದಿರುವಿಬ್ಬಂದಿ ನೀನು ॥
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು ।
ಸಿಂಬಳದಿ ನೊಣ ನೀನು - ಮಂಕುತಿಮ್ಮ ॥ ೪೮೫ ॥
ಪ್ರಹ್ಲಾದನ ತಂದೆ ಹಿರಣ್ಯಕಶಿಪು ‘ಹರಿ’ಯನ್ನು ನಂಬಲಿಲ್ಲ,ದ್ವೇಷಿಸಿದ ಮತ್ತು ತಾನೇ ದೇವರೆಂದ. ಅವನ ಮಗ ಪ್ರಹ್ಲಾದ ‘ಹರಿ’ ಸರ್ವೋತ್ತಮನೆಂದ. ತಂದೆಯ ದ್ವೇಷ ಮತ್ತು ಮಗನ ಭಕ್ತಿ ಅಥವಾ ನಂಬಿಕೆ ಸಂಪೂರ್ಣವಾಗಿತ್ತು. ಹಾಗಾಗಿ ನಂಬದ ತಂದೆಯನ್ನು ಕಂಬದಿಂದ ಒದಗಿ ಮತ್ತು ಮಗನಿಗೆ ದರ್ಶನ ಭಾಗ್ಯದಿಂದ ಮುಕ್ತಿಯನ್ನು ಪ್ರಸಾದಿಸಿದ. ಆದರೆ ನಾವೋ ನಂಬಿಯೂ ನಂಬದಂತೆ ‘ಎಡಬಿಡಂಗಿ’ ಸ್ಥಿತಿಯಲ್ಲಿ, ಸಿಂಬಳದಲ್ಲಿ ಏನೋ ಸಿಗುವುದೆಂಬ ಆಸೆಯಿಂದ ಹೋಗಿ ಅದರೊಳಗ ಅಂಟಿಕೊಂಡು ಹೊರ ಬರಲಾರದ ನೊಣದಂತೆ ಇದ್ದೇವೆ ಎಂದು ನಮ್ಮ ಭಕ್ತಿಯ ಪರಿಯನ್ನು ಕುಹಕವಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
486
ತನಗಿಂತ ಹಿರಿದ, ಭುವನಕ್ಕಿಂತ ಹಿರಿದೊಂದ- ।
ನನುಭವದ ಹಿಂದೆ, ಸೃಷ್ಟಿಯ ನೆರಳ ಹಿಂದೆ ॥
ಆನುಮಿತಿಸಿ ಮನುಜನಾ ಹಿರಿದನೆಳಸುವನೆಯ್ದೆ ।
ಮನುಜನೊಳಹಿರಿಮೆಯದು - ಮಂಕುತಿಮ್ಮ ॥ ೪೮೬ ॥
ತನಗಿಂತ ಹಿರಿದಾದದ್ದು ಈ ಭೂಮಿಗಿಂತ ಹಿರಿದಾದದ್ದು ಮತ್ತು ಇವೆಲ್ಲದರ ಅನುಭವಕ್ಕಿಂತ ಒಂದು ಹಿರಿದಾದ ಅನುಭವ ಈ ಸೃಷ್ಟಿಯ ಹಿಂದೆ ಇದೆ ಮತ್ತು ಈ ಜಗತ್ತು ಅಂತಹ ಹಿರಿದಾದ ಒಂದು ಶಕ್ತಿಯ ನೆರಳು ಮಾತ್ರ ಎಂದು ಅರಿತ ಮಾನವನು ಆ ಪರಮಾತ್ಮನ ಸೃಷ್ಟಿಯಲ್ಲಿ ಭಿನ್ನವಾಗಿ ತನ್ನ ಹಿರಿಮೆಯನ್ನು ಮೆರೆದಿದ್ದಾನೆ ಎಂದು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಉಲ್ಲೇಖಿಸಿದ್ದಾರೆ.
487
ನರರವೊಲೆ ಸುರರುಮಲೆದಲೆದು ಮರೆಯಾಗಿಹರು ।
ಭರತದೇಶದೊಳಮೈಗುಪ್ತ ಯವನರೊಳಂ ॥
ಸುರ ನಾಮ ರೂಪಗಳಸಂಖ್ಯಾತ, ನಿಜವೊಂದು ।
ತೆರೆ ಕೋಟಿ ಕಡಲೊಂದು - ಮಂಕುತಿಮ್ಮ ॥ ೪೮೭ ॥
ಆತ್ಮದ ಗುಣಗಳು ಅಸಂಖ್ಯವಾದವು. ಎಣಿಸಲಾಗದ್ದು ಮತ್ತು ವರ್ಣಿಸಲು ಅಸಾಧ್ಯ. ದೇಹ ಮನಸ್ಸು ಬುದ್ಧಿಗಳೇ ಆ ಗುಣಗಳ ಗ್ರಹಣೆಗೆ ಕಾರಣಗಳು ಅಥವಾ ಸಾಧನಗಳು. ಬದುಕಿನ ಅನುಭವದ ಕನ್ನಡಿಯಲ್ಲಿ ಪ್ರತಿಫಲಿಸುವ ಆತ್ಮದ ಒಂದೊಂದೂ ಗುಣವೂ ತನ್ನದೇ ಆದ ಸೌಂದರ್ಯವನ್ನು ಹೊಂದಿರುತ್ತದೆ ಎಂದು ಆತ್ಮ ಸೌಂದರ್ಯದ ರೂಪವನ್ನು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
488
ಜೀವಿ ಬೇಡಿದಿರೆ ದೈವವನು ಕೇಳುವರಾರು? ।
ದೈವ ಗುಟ್ಟಿರಿಸದಿರೆ ಜೀವಿಯರಸುವುದೇಂ? ॥
ಜೀವ ದೈವಂಗಳ ಪರಸ್ಪರಾನ್ವೇಷಣೆಯೆ ।
ಲಾವಣ್ಯ ಸೃಷ್ಟಿಯಲಿ - ಮಂಕುತಿಮ್ಮ ॥ ೪೮೮ ॥
ಜೀವಿ ‘ಕಾಪಾಡು’ಎಂದು ಬೇಡದ್ದಿದರೆ ಆ ದೇವರನ್ನು ಕೇಳುವವರಾರು ಅಥವಾ ಅ ದೈವವೆಂಬ ವಸ್ತು ನಿಗೂಢವಾಗಿಲ್ಲದಿದ್ದರೆ, ಜೀವಿ ಹುಡುಕುವುದೇನನ್ನು? ಹಾಗಾಗಿ ಜೀವನದಲ್ಲಿ ಈ ದೈವ ಮತ್ತು ಜೀವಯ ಪರಸ್ಪರ ನಿರ್ಭರತೆಯೇ ಈ ಸೃಷ್ಟಿಗೆ ಒಂದು ಮೆರಗನ್ನು ಕೊಟ್ಟಿದೆ ಎಂದು ಒಂದು ಕಡು ಸತ್ಯವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.