Truth comes from fulfillment
479
—
483
479
ಸತ್ಯವೆಂಬುದದೇನು ಸೈನಿಕನ ಜೀವನದಿ? ।
ಕತ್ತಿಯವನಿಗೆ ಸತ್ಯವದರಿಂದೆ ಧರ್ಮ ॥
ಭುಕ್ತಿಸುಪ್ತಿಗಳ ವಿಭವಂಗಳವನಿಗೆ ಮಿಥ್ಯೆ ।
ಸಾರ್ಥಕತೆಯಿಂ ಸತ್ಯ - ಮಂಕುತಿಮ್ಮ ॥ ೪೭೯ ॥
ಸೈನಿಕನ ಜೀವನದಲ್ಲಿ ಸತ್ಯವೆಂಬುದು ಏನು? ಅವನಿಗೆ ಕತ್ತಿಯೇ ಅವನಿಗೆ ಸತ್ಯ ಮತ್ತು ಅದರಿಂದಲೇ ಅವನು ತನ್ನ ಧರ್ಮವನ್ನು ನಿರ್ವಹಿಸುತ್ತಾನೆ. ಆ ಸತ್ಯದ ಬಲದಿಂದ ಅವನು ತನ್ನ ಧರ್ಮವನ್ನು ನಿರ್ವಹಿಸುವಾಗ ಅವನಿಗೆ ಅನ್ನಾಹಾರಗಳ,ಆರಾಮ ನಿದ್ರೆಗಳ, ಮತ್ತು ಸುಖ ಆನಂದಗಳ ಪರಿವೆಯಿರುವುದಿಲ್ಲ ಮತ್ತು ಅವುಗಳೆಲ್ಲಾ ಅವನಿಗೆ ಮಿಥ್ಯವಾಗಿ ಕಾಣುತ್ತದೆ. ಅವನು ಸತ್ಯದ ಬಲದಿಂದಲೇ ತನ್ನ ಧರ್ಮ ನಿರ್ವಹಣೆಯಿಂದ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಂಡು ಜೀವನದ ಸತ್ಯವನ್ನು ಕಾಣುತ್ತಾನೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
480
ಕ್ಲೇಶ ನೂರಾಗಿರೆಯುಮಾಶೆಗಳ ಪುನರುದಯ ।
ಬೇಸರದ ನುಡಿಯೊಳಂ ಲೇಸುಗಳ ನೆನಪು ॥
ಆಶೆ ಸಾಯ್ತೆಂದೊಡಂ ಚೆಲುವೆನಲು ಕಣ್ಣಲೆತ ।
ಮಾಸವೀ ಜೀವಗುಣ - ಮಂಕುತಿಮ್ಮ ॥ ೪೮೦ ॥
ನೂರಾರು ಕಷ್ಟಗಳನ್ನು ಅನುಭವಿಸುತ್ತಿದ್ದರೂ, ಮತ್ತು ಆ ಕಷ್ಟಗಳು ‘ಆಸೆ’ ಯ ಕಾರಣದಿಂದಲೇ ಸಂದಿವೆ ಎಂದು ಅರಿವಿದ್ದರೂ, ಮತ್ತೆ ಮತ್ತೆ ಮನದೊಳಗೆ ಆಸೆಗಳ ಬುಗ್ಗೆಗಳು ಏಳುತ್ತವೆ. ಇಂದಿನ ಕಷ್ಟಗಳ ಅನುಭವದಿಂದ ನಾವು ಆಡುವ ಬೇಸರದ ನುಡಿಗಳ ಮಧ್ಯೆ ಹಿಂದೆ ಅನುಭವಿಸಿದ ಸುಖ ಸಂತೋಷಗಳ ಸುಂದರ ನೆನಪು ಬರುತ್ತವೆ. ಇಷ್ಟೆಲ್ಲಾ ಕಷ್ಟ ಸುಖಗಳನ್ನು ಅನುಭವಿಸಿ ‘ ಏನೋ ಸ್ವಲ್ಪ ಜ್ಞಾನ ಬಂದಿದೆ’ ‘ ಮನದೊಳಗಿನ ‘ಆಸೆ ಸತ್ತಿದೆ’ ಎನ್ನುವಾಗಲೇ ಮತ್ತೆ ಸುಂದರವಾದದ್ದು ಎದುರಾದರೆ ಕಣ್ಣು ಸೆಳೆಯುತ್ತದೆ ಮತ್ತು ಮನಸ್ಸುಅದರ ಕಡೆಗೆ ವಾಲುತ್ತದೆ ಎಂದು ಹೇಳುತ್ತಾ ‘ ಇವು ಜೀವದ ಸ್ವಭಾವ, ಇವು ಅಳಿಸಿಹೋಗಲು ಸಾಧ್ಯವಿಲ್ಲ"ಎಂದು ಜಗತ್ತು ಮತ್ತು ಜೀವದ ಪರಸ್ಪರ ಸಂಬಂಧವನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
481
ನಿಶಿ ಹಿಂದೆ, ನಿಶಿ ಮುಂದೆ, ನಡುವೆ ಮಿಸುಕಾಟ ಬಾಳ್ ।
ನಿಶಿ ಕೆಲವರಿಗೆ ಸೊನ್ನೆ , ಕೆಲವರಿಗೆ ಗುಟ್ಟು ॥
ಮಸಕಿನಲಿ ಭೂತವೊಂದಿಹುದು ದಿಟವಾದೊಡದ- ।
ರುಸಿರು ಸೋಕದೆ ನಿನ್ನ? - ಮಂಕುತಿಮ್ಮ ॥ ೪೮೧ ॥
ನಮ್ಮ ಈ ಜನ್ಮದ ಹಿಂದೆ ಏನಿತ್ತೋ ಮತ್ತು ಈ ಜನ್ಮದ ನಂತರ ಏನೋ ನಮಗೆ ಅರಿವಿಲ್ಲ. ಇವೆರಡರ ನಡುವೆ ನಮ್ಮ ಮಿಸುಕಾಟ, ಓಡಾಟ, ಪರದಾಟಗಳು. ಕೆಲವರಿಗೆ ಹಿಂದೆ ಏನೋ ಇತ್ತು ಮತ್ತು ಮುಂದೆಯೂ ಏನೋ ಇದೆ ಎಂದು ನಂಬಿಕೆ. ಮತ್ತೆ ಕೆಲವರಿಗೆ ಏನೂ ಇಲ್ಲ ಮತ್ತೆ ಕೆಲವರಿಗೆ ಅದೊಂದು ರಹಸ್ಯ ಎಂದು ನಂಬಿಕೆ.ಇಲ್ಲದ್ದು ನಮ್ಮ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಆದರೆ ಇದೆ ಎಂಬ ನಂಬಿಕೆ ಬಂದರೆ ಹಾಗೆ ಇರುವುದು ತನ್ನ ಪ್ರಭಾವವನ್ನು ನಮ್ಮ ಮೇಲೆ ಬೀರದೆ ಇರುತ್ತದೆಯೇ ಎಂದು ಜನ್ಮ ಜನ್ಮಾಂತರದ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
482
ಗುಹೆಯೆಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ ।
ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ॥
ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- ।
ರ್ವಹಿಸುವುದೆ ಜಾಣ್ಮೆಯಲ - ಮಂಕುತಿಮ್ಮ ॥ ೪೮೨ ॥
ಎಡಕ್ಕೆ ಒಂದು ಗುಹೆ ಮತ್ತು ಬಲಕ್ಕೆ ಒಂದು ಗುಹೆ. ಇವೆರಡರ ನಡುವೆ ಒಂದು ಬೆಟ್ಟ. ಇವೆರಡರ ನಡುವೆ ಕಣಿವೆಯೂ ಇದ್ದು ಅಲ್ಲೆಲ್ಲ ಓಡಾಡುವಾಗ ‘ಹುಲಿಯೋ, ಸಿಂಹವೋ’ ಬರುವ ಸಾಧ್ಯತೆಗಳಿದ್ದರೂ ‘ ಛೆ! ಅವೆಲ್ಲ ಇಲ್ಲಿ ಬರುವುದಿಲ್ಲ ಎಂಬ ನಂಬಿಕೆಯಿಂದ ನೀ ಇದ್ದೀಯೇನು’? ನಿನಗೆ ಗೊತ್ತಿಲ್ಲದ ರಹಸ್ಯದ ಭೂತ ನಿನ್ನ ಮೇಲೆ ಬಂದು ಎರಗಬಹುದು. ಹಾಗಾಗಿ ಅದು ಬಂದು ನಿನ್ನನ್ನು ಹಿಡಿಯದಂತೆ ಜಾಣ್ಮೆಯಿಂದ ಬದುಕನ್ನು ನಡೆಸಬೇಕು ಎಂದು ವಾಸ್ತವ ಮತ್ತು ನಮ್ಮ ನಂಬಿಕೆಗಳ ಮೇಲೆ ನಡೆಯುವ ನಮ್ಮ ಜೀವನಕ್ಕೆ ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
483
ಗಾಳಿಯನು ಗುದ್ದಿದರೆ ಮೈ ನೊಯ್ವುದೊಂದೆ ಫಲ ।
ಮೂಲಸತ್ತ್ವವ ಮರೆತ ಸಾಹಸಗಳಂತು ॥
ಮೇಳವಿಸೆ ಪೌರುಷಕೆ ದೈವಕೃಪೆಯಂದು ಫಲ ।
ತಾಳಿ ಬಾಳಾವರೆಗೆ - ಮಂಕುತಿಮ್ಮ ॥ ೪೮೩ ॥
ಹಾಗೆ ನಮಗೆ ಗೊತ್ತಿಲ್ಲದ ಅಥವಾ ಅರಿವಿಲ್ಲದ ಸಂಗತಿಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಒಂದು ಭ್ರಮೆಯಿಂದ ಏನನ್ನೋ ಸಾಧಿಸಬೇಕೆಂದು ಹೊರಟಾಗ, ಕೇವಲ ಗಾಳಿಯಲ್ಲಿ ಗುದ್ದಾಡಿ ಮೈ ನೋಯಿಸಿಕೊಂಡಂತೆ, ವ್ಯರ್ಥ ಪ್ರಯತ್ನವಾಗುತ್ತದೆ. ಅಂತಹ ಕೆಲಸಗಳನ್ನು ಮಾಡುವಾಗ ನಮ್ಮನ್ನು ಕ್ರಿಯಾಶೀಲತೆಗೆ ಪ್ರೇರೇಪಿಸುವ ಆ ಪರಮ ಶಕ್ತಿಯನ್ನು ಅರಿಯದೆ ಮಾಡಿದ ಕೆಲಸಗಳವು. ಎಂದು ನಮ್ಮ ಪ್ರಯತ್ನಕ್ಕೆ ಆ ಪರಮಾತ್ಮನ ಕೃಪೆಯ ಜೊತೆಯಾಗುತ್ತದೆಯೋ ಅಂದು ನಾವು ಸಫಲರಾಗುತ್ತೇವೆ. ಅಲ್ಲಿಯ ತನಕ ತಾಳ್ಮೆಯಿಂದ ಬಾಳಬೇಕು ಎಂದು ಆದೇಶವನ್ನು ಮಾಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.