Victory of humans over death
474
—
478
474
ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ ।
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ? ॥
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ? ।
ಬಿದ್ದ ಮನೆಯನು ಕಟ್ಟೊ - ಮಂಕುತಿಮ್ಮ ॥ ೪೭೪ ॥
ಕೊಳೆಯಾದ ಇಳೆಯನ್ನು ಮಳೆಯಿಂದ ಮತ್ತೆ ಮತ್ತೆ ತೊಳೆಯುವ ಆ ಆಕಾಶದಂತೆ, ಬೆಳೆಯನ್ನು ಕೊಯ್ದ ನಂತರವೂ ಮತ್ತೆ ಮತ್ತೆ ಬೆಳೆ ಬೆಳೆಯುವ ಈ ಧರೆಯಂತೆ, ಕೆಳಗೆ ಬಿದ್ದಿರುವುದನ್ನು ಎತ್ತಿ ನಿಲ್ಲಿಸುವುದೇ ಮಾನವನ ನಿರಂತರ ಕ್ಷಮತೆ. ಹಾಗಾಗಿ ಬಿದ್ದ ಮನೆಯನ್ನು ಎತ್ತಿ ಕಟ್ಟೋ ಎಂದು ಆದೇಶಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
475
ಗೌರವಿಸು ಜೀವನವ, ಗೌರವಿಸು ಚೇತನವ ।
ಆರದೋ ಜಗವೆಂದು ಭೇದವೆಣಿಸದಿರು ॥
ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ ।
ದಾರಿಯಾತ್ಮೊನ್ನತಿಗೆ - ಮಂಕುತಿಮ್ಮ ॥ ೪೭೫ ॥
ನಿನ್ನ ಜೀವನವನ್ನು ಗೌರವಿಸು, ಆ ಜೀವನಕ್ಕೆ ಮೂಲವಾದ ಚೇತನವನ್ನು ಗೌರವಿಸು. ಇದು ಯಾರದೋ ಜಗತ್ತು, ನಾನೇನೂ ಇಲ್ಲಿ ಶಾಶ್ವತವಾಗಿ ಇರುವುದಿಲ್ಲವಲ್ಲ ಎಂದು ಬದುಕನ್ನು ಗೌಣವೆಂದೆಣಿಸಬೇಡ. ಈ ಬದುಕಿನಲ್ಲಿ ನಾವು ಹೋರಾಡುವುದೇ ಸಮೃದ್ಧಿಗೋಸ್ಕರ. ಈ ಹೋರಾಟ ನಮಗೆ ಆತ್ಮೋನ್ನತಿಗೆ ದಾರಿಯಾಗಿದೆ ಎಂದು ಬಹಳ ಗಹನವಾದ ತತ್ವವನ್ನು ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ ಅರುಹಿದ್ದಾರೆ.
476
ಜೀವನೋದ್ಯಮವೆಲ್ಲ ತೋಟದುದ್ಯೋಗವೆನು ।
ಭಾವಬುದ್ಧಿಗಳ ಕೃಷಿಯಿಂದೊಗೆದ ಫಲದಿಂ ॥
ತೀವುತಿರೆ ನಗೆ ಹೊಳಪು ಮೊಗಮೊಗದೊಳಂ ಜಗದಿ ।
ಸೇವೆಯದು ಬೊಮ್ಮಂಗೆ - ಮಂಕುತಿಮ್ಮ ॥ ೪೭೬ ॥
ಸಕಲ ಚರಾಚರಗಳ ಜಗತ್ತಿನ ಜೀವನವು ಆ ಪರಮಾತ್ಮನ ತೋಟ ಅಥವಾ ಉದ್ಯಾನವನ. ನಾವೆಲ್ಲಾ ಅವನು ಬೆಳೆಸಿದ ನಡೆದಾಡುವ ಗಿಡಗಳು. ನಮ್ಮ ಭಾವಗಳ ಮಂಥನದಿಂದ ಈ ಉದ್ಯಾನವನ್ನು ಕೃಷಿಗೈದಾಗ, ‘ಆನಂದ’ದ ರೂಪದಲ್ಲಿ ಸುಫಲ ಲಭ್ಯವಾಗಿ ಪ್ರತೀ ಜೀವಿಯ ಮುಖದಲ್ಲೂ ನಗೆ ಮತ್ತು ಸಂತೋಷದ ಹೊಳಪು ತುಂಬಿ ತುಳುಕ್ಕುತ್ತಿದ್ದರೆ, ಆ ಕೃಷಿಯೇ ನಾವೆಲ್ಲಾ ಮಾಡುವ ‘ಪರಮಾತ್ಮನ ಸೇವೆ’ ಯೆಂದಾಗುತ್ತದೆ ಎಂದು ಪರಮಾತ್ಮನ ಸೇವೆಯ ಮತ್ತೊಂದು ವಿಧಾನವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
477
ಹೂವ ತಳೆದ ಗುಲಾಬಿಯಿಂದ ಮನಕಹುದೇನು? ।
ನೋವೋ? ಸಂತಸವೊ? ನೋಡಾಮುಳ್ಳು ಬಾಳ್ಗೆ ॥
ಹೂವೆ ದಿವ್ಯಕಿರೀಟವದುವೆ ಕಾಲಕಟಾಕ್ಷ ।
ಜೀವನದ ತಿರುಳಷ್ಟೆ - ಮಂಕುತಿಮ್ಮ ॥ ೪೭೭ ॥
ಸುಂದರವಾದ ಹೂವನ್ನು ತಳೆದ ಗುಲಾಬಿ ಗಿಡದಿಂದ ನಾವು ಅರಿಯುವುದು ಅಥವಾ ಅನುಭವಿಸುವುದು, ನೋವೋ ನಲಿವೋ ಸಂತಸವೋ?. ನೋಡಿ, ಗಿಡದ ಮುಳ್ಳನ್ನು ಬಾಳಿಗೆ ಹೋಲಿಸಿಕೊಂಡರೆ, ಗಿಡದ ಶಿಖರದಲ್ಲಿ ತಳೆಯುವ ಆ ಸುಂದರ ಹೂವನ್ನು ನಾವು ನಡೆದು ಬಂದ ಕಾಲವು ನಮಗೆ ಜೀವನದ ಅಂತ್ಯದಲ್ಲಿ ಕರುಣಿಸುವ ಶಾಂತಿ ನೆಮ್ಮದಿ ಅಥವಾ ಸುಖಕ್ಕೆ ಹೋಲಿಸಿಕೊಳ್ಳಬೇಕು. ಜೀವನದ ತಿರುಳು ಅಥವಾ ಸಾರವು ಅಷ್ಟೇ ಎಂದು ಜೀವನಾನುಭವವನ್ನು ನಾವು ಹೇಗೆ ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
478
ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ।
ಜಗಿದ ಮುಳ್ಳಿರಿತಗಳ ಸೈರಿಸೆ ಗುಲಾಬಿ ॥
ನಗುವುದೊಂದರೆನಿಮಿಷ ನಗಲು ಬಾಳ್ಮುಗಿಯುವುದು ।
ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ ॥ ೪೭೮ ॥
ಆ ಗುಲಾಬಿ ತೋಟದ ಮಾಲಿ, ನೆಲ ಅಗೆದು ಸಸಿಯ ನೆಟ್ಟು, ಅದಕ್ಕೆ ಗೊಬ್ಬರವ ಕೊಟ್ಟು ನೀರೆರೆದು, ಸೈರಣೆಯಿಂದ ಆ ಗಿಡದ ಮುಳ್ಳುಗಳಿಂದ ಚುಚ್ಚಿಸಿಕೊಂಡು, ಪ್ರೀತಿಯಿಂದ ಆ ಗಿಡವನ್ನು ಬೆಳೆಸಿದರೆ ಒಂದು ದಿನ ಹೂ ಬಿಟ್ಟು, ಅಲ್ಪಕಾಲವಾದರೂ ಜಗಕೆ ಸಂತಸವನ್ನು ಕೊಡುತ್ತಾ ನಲಿದಾಗ, ಮಾಲಿಯ ಅಷ್ಟೂ ದುಡಿತಕ್ಕೂ ಒಂದು ಸಾರ್ಥಕ್ಯದ ಭಾವ ಮೂಡುತ್ತದೆ, ಎಂದು ಜಗತ್ತಿನಲ್ಲಿ ‘ಆನಂದ’ವನ್ನು ಅನುಭವಿಸುವ ಪರಿಯ ಮತ್ತೊಂದು ಕೋನವನ್ನು ನಮಗೆ ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು, ನಮಗೆ ಈ ಮುಕ್ತಕದಲ್ಲಿ.