Kagga Logo

Poet-king

469

473

469

ಸೌಂದರ್ಯವೊಂದು ದೈವರಹಸ್ಯ, ಸೃಷ್ಟಿವೊಲು ।
ನಿಂದಿರ್ಪುದದರಾಶೆಯಿನೆ ಜೀವಿತಾಶೆ ॥
ಅಂದುವುದು ಕಣ್ಣಿಗದು ಸಂಸ್ಕೃತಿಗೆ ತಕ್ಕಂತೆ ।
ಚೆಂದದರಿವೆ ತಪಸ್ಸೊ - ಮಂಕುತಿಮ್ಮ ॥ ೪೬೯ ॥

‘ಒಂದು ವಸ್ತುವು ಸುಂದರವಾಗಿ ಏಕೆ ಇದೆ?’ ಎನ್ನುವುದು ದೇವ ರಹಸ್ಯ. ಆ ಸೌಂದರ್ಯವನ್ನು ನೋಡಲು ಪಡೆಯಲು ಮತ್ತು ಅನುಭವಿಸಲು ಮಾನವನಲ್ಲಿ ಇರುವ ಬಯಕೆಯೇ ಅವನ ಬದುಕಿನಾಸೆಗೆ ಅಧಾರ. ಪ್ರತಿಯೊಂದು ವಸ್ತುವಿನ ಅಂದ ಅಥವಾ ಸೌಂದರ್ಯಾನುಭವ ಆಯಾ ವ್ಯಕ್ತಿಯ ಸಂಸ್ಕೃತಿ, ಸಂಸ್ಕಾರಗಳಿಗೆ ಅನುಗುಣವಾಗಿರುತ್ತದೆ. ಆದರೆ ಒಂದು ವಸ್ತುವಿನ ನಿಜ ಸೌಂದರ್ಯವನ್ನು ಅರಿಯುವುದೇ ತಪಸ್ಸು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

470

ವಿವಿಧರಸಗಳ ಭಟ್ಟಿ, ಸೌಂದರ್ಯಕಾಮೇಷ್ಟಿ ।
ಕವಿಜಗತ್ಸೃಷ್ಟಿಯದು, ಕಲೆಗನಾಕೃಷ್ಟಿ ॥
ಗವಿಯೊಳಗಣ ಪ್ರಕೃತಿಯಂತ್ರ ವೈಚಿತ್ರ್ಯವದು ।
ತಪಸೊಂದೆ ಪಥವದಕೆ - ಮಂಕುತಿಮ್ಮ ॥ ೪೭೦ ॥

ಹಲವಾರು ರಸಗಳನ್ನು ಭಟ್ಟಿ ಇಳಿಸಿದಂತೆ ಮನಸ್ಸಿನಲ್ಲಿ ಸೌಂದರ್ಯೋಪಾಸನೆಯ ಒಂದು ಯಜ್ಞ ನಡೆಯುತ್ತದೆ. ಕವಿಯ ಕಾವ್ಯ, ಕವನ, ಕವಿತೆ ಮುಂತಾದವುಗಳಿಂದ, ಕಲಾವಿದನ ಸೃಷ್ಟಿಯಾದ ಚಿತ್ರ, ಶಿಲ್ಪ, ನೃತ್ಯ, ಗಾಯನ ಮುಂತಾದವುಗಳ ಸೆಳೆತದಿಂದ ಮತ್ತು ಮನವೆಂಬ ಗುಹೆಯಲ್ಲಿ ಸ್ವಾಭಾವಿಕವಾಗಿ ನಡೆಯುವ ಮಂಥನದಿಂದ ಭಾವರಸೋತ್ಪತ್ತಿಯಾಗಿ, ಆ ಭಾವಗಳೇ ಸೌಂದರ್ಯಾನುಭವದ ಯಜ್ಞಕ್ಕೆ ಹವಿಸ್ಸಾಗುತ್ತದೆ. ಆ ರೀತಿಯ ಅನುಭವಕ್ಕೆ ತಪಸ್ಸೊಂದೇ ಮಾರ್ಗವೆಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.

471

ಮಂದಿರದ ಶಿಲ್ಪಿ ಯಂತ್ರಗಳ ಯೊಜಕ ರಾಜ್ಯ - ।
ಸಂಧಾನಿ ವಿಜ್ಞಾನಿಯುದ್ಯೊಗದಾನಿ ॥
ಮಂದಿಮುಂದಾಳು ಜನಬಾಂಧವ್ಯಪೋಷಕನು ।
ಸೌಂದರ್ಯಕರರಿವರು - ಮಂಕುತಿಮ್ಮ ॥ ೪೭೧ ॥

ಮಂದಿರವನ್ನು ನಿರ್ಮಿಸುವ ಶಿಲ್ಪಿ, ಯಂತ್ರಗಳನ್ನು ಸೃಷ್ಟಿಸುವ ವಿಜ್ಞಾನಿ ಆ ಯಂತ್ರಗಳನ್ನು ಕೈಗಾರಿಕೆಗಾಗಿ ಉಪಯೋಗಿಸುವ ಉದ್ಯಮಿ, ಸಮಾಜದ ವ್ಯವಸ್ಥೆಗೆ ರಾಜ್ಯಬಾರ ಕ್ರಮವನ್ನು ಅನುಸಂಧಾನ ಮಾಡುವ ರಾಜಕಾರಣಿ, ಉದ್ಯಮಗಳನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ಕೊಡುವವ, ಜನರನ್ನು ಹುರಿದುಂಬಿಸಿ ಕಾರ್ಯೋನ್ಮುಖರನ್ನಾಗಿಸುವ ಜನನಾಯಕರು ಮತ್ತು ಜನರಲ್ಲಿ ಪರಸ್ಪರ ಬಾಂಧವ್ಯವನ್ನು ಹೆಚ್ಚಿಸುವವರು, ಇವರೆಲ್ಲರೂ ಈ ಜಗತ್ತಿನಲ್ಲಿ ಸೌಂದರ್ಯವನ್ನು ಉಂಟುಮಾಡುವವರು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

472

ಕವಿ ಚಿತ್ರಕೋವಿದನು ಪರತತ್ತ್ವಶೋಧಕನು ।
ವಿವಿಧ ವಾದನ ಗೀತ ನೃತ್ಯ ಕುಶಲಿಗಳು ॥
ನವನವತೆಯಂ ಮನಸಿಗೀವೆಲ್ಲ ಕಲೆಗಾರ- ।
ರವರಿಂದ ಸುಂದರತೆ - ಮಂಕುತಿಮ್ಮ ॥ ೪೭೨ ॥

ಕವಿ, ಚಿತ್ರ ಕಲಾವಿದ, ಪರತತ್ವವನು ಶೋಧಿಸಿ ಸತ್ವ ಗ್ರಾಹಕ ಮತ್ತು ತತ್ವ ಪ್ರಚಾರಕನು, ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರು, ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ನಿಪುಣತೆಯನ್ನು ಪಡೆದ ಕುಶಲಿಗಳು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರವನ್ನು ಮಾಡಿ, ಹೊಸವಿಚಾರಗಳನ್ನು ನಮಗೆ ನೀಡಿ ಆನಂದವನ್ನು ನೀಡುವರು, ಇವರ ಸೃಷ್ಟಿಯೂ ಸಹ ‘ಸುಂದರತೆ’ಯನ್ನು ಜಗತ್ತಿಗೆ ನೀಡುತ್ತದೆ ಎಂದು ಜಗತ್ತಿನಲ್ಲಿ ಹಲವಾರು ಜನ ತಮ್ಮ ಕಲ್ಪನೆ ಮತ್ತು ಕುಶಲತೆಯಿಂದ ಬದುಕಿನ ಸುಂದರತೆಗೆ ತಮ್ಮ ಕಾಣಿಕೆಯನ್ನು ನೀಡುತ್ತಾರೆ ಎನ್ನುವ ಭಾವವನ್ನು ಈ ಮುಕ್ತಕದಲ್ಲಿ ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು.

473

ಪಾರಿಜಾತವ ಕಂಡು ನಿಡುಸುಯ್ದು, ಪದಗಳಿಂ ।
ಶೌರಿಕಥೆಯನು ಹೆಣೆದು ತೃಪ್ತನಹನು ಕವಿ ॥
ಊರಿನುದ್ಯಾನಕದ ತರಿಸಿ ಬೆಳಸುವ ಕಾರ್ಯ- ।
ಧೀರನಲ ರಾಜ್ಯಕನು - ಮಂಕುತಿಮ್ಮ ॥ ೪೭೩ ॥

ಶ್ರೀ ಕೃಷ್ಣನ ಭಾರ್ಯೆ ರುಕ್ಮಿಣಿಗೆ ನಾರದನು ತಂದುಕೊಟ್ಟ, ದೇವಲೋಕದ ಪಾರಿಜಾತ ಪುಷ್ಪವನ್ನು ಕಂಡು ಅಸೂಯೆಗೊಂಡ ಸತ್ಯಭಾಮೆಯನ್ನು ಮೆಚ್ಚಿಸಲು ಶ್ರೀ ಕೃಷ್ಣ ಆ ದೇವಲೋಕದ ಪಾರಿಜಾತ ವ್ರುಕ್ಷವನ್ನೇ ಕದ್ದು ತಂದ ಕತೆಯನ್ನು ಕವಿ ತನ್ನ ಕಲ್ಪನೆಯಿಂದ ಹೆಣೆದಿದ್ದಾನೆ. ಹೀಗೆ ಕವಿ ತನ್ನ ಕಲ್ಪನೆಯಲ್ಲಿ ಬರುವ ಎಲ್ಲವನ್ನೂ ಕಾವ್ಯದಲ್ಲಿ ಸಾಜವನ್ನು ಸುಂದರವಾಗಿಸುವ ಸದುದ್ದೇಶದಿಂದ ತುಂಬಿದಾಗ ಅವನು ಮಹಾಕವಿಯಾಗುತ್ತಾನೆ. ಜನರು ಅದರಲ್ಲಿ ಶ್ರದ್ಧೆಯನ್ನಿಟ್ಟಾಗ, ರಾಜನು ಅದನ್ನು ಕಾರ್ಯರೂಪಕ್ಕೆ ತಂದಾಗ ಅವನು ಧೀರನಾಗುತ್ತಾನೆ ಎಂದು ಉಲ್ಲೇಖಮಾದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.