Art
464
—
468
464
ಸ್ರವಿಸುವುದು ಜೀವರಸ ಹೃದಯಗರ್ತದ ತಳದಿ ।
ಕಿವಿಗಾ ರಹಸ್ಯದಲಿ ಕಾವ್ಯಗಾನಗಳಿಂ ॥
ಭುವನದಾಚಿನ ರಹಸ್ಯದ ಕೀರ್ತಿ ವೇದಗಳ ।
ರವದಿನೆಂದಾರ್ಷಮತ - ಮಂಕುತಿಮ್ಮ ॥ ೪೬೪ ॥
ಕಾವ್ಯವೋ, ಕವನವೋ,ಗಾಯನವೋ ಅಥವಾ ಯಾವುದಾದರೂ ಒಂದು ವಾದ್ಯದ ಸಂಗೀತವೋ ನಾವು ಏಕಾಂತದಲ್ಲಿದ್ದಾಗ ನಮ್ಮ ಕಿವಿಗಳಿಗೆ ಬಿದ್ದರೆ ನಮ್ಮ ಹೃದಯಗಳಿಂದ ಜೀವರಸ ಒಸರುತ್ತದೆ. ಇದು ಈ ಜಗತ್ತಿನ ವಿಷಯವಾದರೆ, ಈ ಭೂಮಿಯಿಂದಾಚಿನ ಜ್ಞಾನವು, ರಹಸ್ಯವಾಗಿ ವೇದಗಳಾಗಿ ಶಬ್ದರೂಪದಿ ನಮಗೆ ಇಳಿದುಬಂದಿದೆ ಎನ್ನುವುದು ಋಷಿಗಳ ಅಭಿಮತ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
465
ಸ್ವರರಾಗಗೀತಿಗಳು ನಾಟ್ಯಾಭಿನೀತಿಗಳು ।
ಕರೆದೇಳಿಸುವುವು ಮನಸಿನಲಿ ನಿದ್ರಿಸುವಾ ॥
ಪರಿಪರಿಯ ಭಾವಗಳ ಗೂಢಸ್ವಭಾವಗಳ ।
ಪರಮೇಷ್ಠಿ ಟೀಕು ಕಲೆ - ಮಂಕುತಿಮ್ಮ ॥ ೪೬೫ ॥
ಸುಮ್ಮನಿರುವ ಅಥವಾ ಶಾಂತವಾಗಿರುವ ಮನಸ್ಸನ್ನು ಕರೆದು ಎಬ್ಬಿಸಿ ಸ್ವರ ರಾಗ ಗೀತೆಗಳ ಕೇಳುವ ಮತ್ತು ಕೇಳಿ ಆನಂದಿಸುವ, ನಾಟ್ಯ, ಅಭಿನಯ ಮುಂತಾದವುಗಳ ನೋಡುವ ಮತ್ತು ಹಾಗೆ ಕೇಳಿ ನೋಡಿದ್ದನ್ನು ಪರಿಪರಿಯಾಗಿ ಆನಂದಿಸುವ ಮಾನವನ ಹಲವಾರು ಗುಪ್ತ ಮತ್ತು ಸುಪ್ತ ಭಾವಗಳು ಆ ಪರಮಾತ್ಮನ ಸೃಷ್ಟಿಯನ್ನೇ ಟೀಕಿಸುವ ಅಥವಾ ಅಣಕವಾಡುವ ಕಲೆಯಂತೆ ಇದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
466
ವ್ಯಸನಕಾರಣವೊಂದು ಹಸನಕಾರಣಾವೊಂದು ।
ರಸಗಳೀಯೆರಡಕಿಂತಾಳವಿನ್ನೊಂದು ॥
ಭೃತವಿಶ್ವಜೀವಿತಗಭೀರತೆಯ ದರ್ಶನದ ।
ರಸವದದ್ಭುತಮೌನ - ಮಂಕುತಿಮ್ಮ ॥ ೪೬೬ ॥
ಈ ಜಗತ್ತಿನ ಸೌಂದರ್ಯಗಳು, ಕೆಲವರಿಗೆ ವ್ಯಸನಕ್ಕೆ ಕಾರಣವಾದರೆ,ಮತ್ತೆ ಕೆಲವು ಹರುಷಕ್ಕೆ ಕಾರಣವಾಗುತ್ತವೆ. ಆದರೆ ಈ ಎರಡೂ ರಸಗಳಿಗಿಂತ ಆಳವಾದ ಇನ್ನೊಂದು ಅನುಭವವಿದೆ. ಈ ವಿಶ್ವದ ಗಂಭೀರತೆಯ ವಿಚಿತ್ರವನ್ನು ನೋಡಿದರೆ ಮನದಲ್ಲಿ ಒಂದು ಗಾಢ ಮೌನ ಆವರಿಸುತ್ತದೆ. ಈ ಮೌನ ರಸದ ಅನುಭವ ಬಹಳ ಅದ್ಭುತ ಎಂದು ಪ್ರಕೃತಿ ಸೌಂದರ್ಯವನ್ನು ಅನುಭವಿಸುವಲ್ಲಿ ಮಾನವನ ಚಿತ್ರ ವಿಚಿತ್ರವಾದ ಪ್ರತಿಕ್ರಿಯೆಯ ಬಗ್ಗೆ ನಮಗೆ ವಿವರಿಸಿದ್ದಾರೆ ಅ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
467
ಗಣನೆಗೆಟುಕದ ಗುಣಗಳಾತ್ಮದವವರ್ಣ್ಯಗಳು ।
ಮನದ ದೇಹದ ಜೀವದೆಲ್ಲ ಕರಣಗಳಾ ॥
ಅನುಭವದ ಮುಕರದೊಳ್ ಪ್ರತಿಫಲಿಸೆ ತನ್ನದೊಂ - ।
ದಣುವದುವೆ ಸುಂದರವೊ - ಮಂಕುತಿಮ್ಮ ॥ ೪೬೭ ॥
ವರ್ಣಿಸಲು ಆಗದ ಮತ್ತು ಎಣಿಸಲು ಆಗದ ಆತ್ಮದ ಗುಣಗಳು ಮನಸ್ಸಿನ, ದೇಹದ, ಜೀವದ ಇಂದ್ರಿಯಗಳಿಂದ ಪಡೆದ ಅನುಭವಗಳನ್ನು ಮತ್ತು ಅದರಿಂದ ಪಡೆದ ಆನಂದವನ್ನು ಕನ್ನಡಿಯಂತಹ ಮುಖದ ಮೂಲಕ ಪ್ರತಿಫಲಿಸಿದಾಗ ಆ ಅನುಭವದ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
468
ಲಾವಣ್ಯವಾತ್ಮಗುಣವದರಿಂದೆ ಲೋಕಜನ ।
ದೇವನನು ಕಮನೀಯ ವಿಗ್ರಹಂಗಳಲಿ ॥
ಭಾವಿಸುತ ತಮ್ಮಿಷ್ಟಭೋಗಗಳನರ್ಪಿಸುವ ।
ಸೇವೆಯಿಂ ನಲಿಯುವರು - ಮಂಕುತಿಮ್ಮ ॥ ೪೬೮ ॥
ಆತ್ಮದ ಗುಣ ಬಹಳ ಸುಂದರ. ಇಂತಹ ಸುಂದರ ಭಾವದಿಂದ ಸುಂದರ ವಿಗ್ರಹಗಳಲ್ಲಿ ಆ ಪರಮಾತ್ಮನನ್ನು ಭಾವಿಸುತ್ತಾ, ಆ ಪರಮಾತ್ಮನಿಗೆ ತಮಗಿಷ್ಟವಾದ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸುವ ಸೇವೆಯನ್ನು ಮಾಡುತ್ತಾ, ಲೋಕದ ಜನರು ನಲಿಯುತ್ತಾರೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.