Worldly tapas
609
—
612
609
ಆವ ಜೀವದ ಪಾಕವಾವನುಭವದಿನಹುದೊ! ।
ಆವ ಪಾಪಕ್ಷಯವದಾವ ಪುಣ್ಯದಿನೋ! ॥
ಕಾವಿರದೆ ಪಕ್ವವಿಹ ಜೀವವಿಳೆಯೊಳಗಿರದು ।
ನೋವೆಲ್ಲ ಪಾವಕವೊ - ಮಂಕುತಿಮ್ಮ ॥ ೬೦೯ ॥
ಜಗತ್ತೆಂಬುದು ಒಂದು ಮೂಸೆ. ಆ ಮೂಸೆಯನ್ನು ಕಾಯಿಸುವುದೇ ತಾಪತ್ರಯಗಳು ಮತ್ತು ಅದರೊಳಗೆ ಕಾದು ಶುದ್ಧವಾಗುವುದೇ ಜೀವ ಅಥವಾ ಆತ್ಮ ಎಂದು ಈ ಹಿಂದಿನ ಮುಕ್ತಕಗಳಲ್ಲಿ ಹೇಳಿದ್ದಾರೆ. ಆದರೆ ಬದುಕಿನ ಈ ಮೂಸೆಯಲ್ಲಿ ನಾವು ಅನುಭವಿಸುವ ಯಾವ ಕರ್ಮ, ನಮಗೆ ನಮ್ಮ ಪಾಪಗಳನ್ನು ತೊಳೆದುಕೊಳ್ಳಲು, ಎಂದು ಮತ್ತು ಹೇಗೆ ಒದಗುತ್ತದೆ ಎಂದು ಅರ್ಥವಾಗುವುದಿಲ್ಲ. ನಾವು ಮಾಡುವ ಯಾವ ಕೆಲಸದಿಂದ ನಮಗೆ ಪುಣ್ಯವುಂಟಾಗುತ್ತದೋ ಗೊತ್ತಿಲ್ಲ. ಆದರೆ ಕಾಯದೆ,ಸುಲಭವಾಗಿ ಪಕ್ವವಾಗುವ ಜೀವಗಳು ಈ ಜಗತ್ತಿನಲ್ಲಿರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾ. ನಾವು ಅನುಭವಿಸುವ ನೋವುಗಳೇ ನಮ್ಮನ್ನು ಶುದ್ಧೀಕರಿಸುವ ಅಗ್ನಿ ಎಂದು ಜೀವಿಗಳ ಸಂಸ್ಕಾರದ ಪರಿಯನ್ನು ವಿಮರ್ಶಿಸಿದ್ದಾರೆ ಮಾನ್ಯ ಗುಂಡಪ್ಪನವರು.
610
ಕ್ಷುತ್ತುಮಮತೆಗಳು ಜೀವಕೆ ಕುಲಿಮೆಸುತ್ತಿಗೆಗಳ್ ।
ಉತ್ತಮವದೆನಿಪುವುವು ಕಿಟ್ಟಗಳ ಕಳೆದು ॥
ಚಿತ್ತ ಸಂಸ್ಕಾರಸಾಧನವಯ್ಯ ಸಂಸಾರ ।
ತತ್ತ್ವ ಪ್ರವೃತ್ತಂಗೆ - ಮಂಕುತಿಮ್ಮ ॥ ೬೧೦ ॥
ಕಮ್ಮಾರನ ಕುಲಿಮೆಯಲ್ಲಿ ಲೋಹವನ್ನು ಕಾಯಿಸಿದಾಗ ಕಲ್ಮಶಗಳು ಕಳೆದ ಮತ್ತು ಶುದ್ಧವಾದ ಲೋಹವನ್ನು ಸುತ್ತಿಗೆಗಳಿಂದ ಬಡಿದಾಗ ಅದು ಬಯಸಿದ ಆಕಾರವನ್ನು ಪಡೆಯುವಂತೆ, ಬದುಕಿನಲ್ಲೂ, ದೇಹದ ಹಸಿವಿನ ಅವಶ್ಯಕತೆಯಾದ ಆಹಾರವನ್ನು ಪಡೆಯುವ ಪ್ರಯತ್ನ ಮತ್ತು ಭೌದ್ಧಿಕ ಹಸಿವನ್ನು ಪೂರೈಸುವ ಮಮತೆ ಮುಂತಾದವುಗಳ ಸುಳಿಯಲ್ಲಿ ಬಿದ್ದು, ಹಾದು, ಅನುಭವವನ್ನು ಪಡೆದು, ಪರತತ್ವವನ್ನು ಮನೋಗತಮಾಡಿಕೊಳ್ಳಲು ಈ ಸಂಸಾರದ ಕಶ್ಮಲಗಳನ್ನು ತೊಳೆದುಕೊಳ್ಳಲು ಮಾರ್ಗವೇ ಈ ಸಂಸಾರ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
611
ಮನೆಯೆ ಮಠವೆಂದು ತಿಳಿ, ಬಂಧು ಬಳಗವೆ ಗುರುವು ।
ಅನವರತಪರಿಚರ್ಯೆಯವರೊರೆವ ಪಾಠ ॥
ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ ।
ಮನಕೆ ಪುಟಸಂಸ್ಕಾರ - ಮಂಕುತಿಮ್ಮ ॥ ೬೧೧ ॥
ಜ್ಞಾನಕ್ಕಾಗಿ ಅಲೆಯದೆ, ಮನೆಯನ್ನೇ ಮಠವೆಂದು ತಿಳಿ. ನಿನ್ನ ಮನೆಗೆ ಬಂದುಹೋಗುವ ಬಂಧು ಮಿತ್ರರೇ ನಿನ್ನ ಗುರುಗಳು. ನಿರಂತರವಾಗಿ ಅವರೊಂದಿಗಿನ ನಿನ್ನ ಪರಿಚಯ ಮತ್ತು ಅವರಿಗೆ ನೀನು ಮಾಡುವ ಸೇವೆಯೇ ನೀನು ಕಲಿಯುವ ಪಾಠ. ನಿನಗೆ ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಲ್ಪಿಸುವ ಸೇತುವೆಯೇ ಈ ಸಂಸಾರ. ಈ ಸಂಸಾರದಲ್ಲಿ ಕಲಿತ ಪಾಠಗಳೇ ಮನಕ್ಕೆ ಪಟುತ್ವವನ್ನು ನೀಡಿ ನಿನ್ನನ್ನು ಸಂಸ್ಕಾರವಂತನನ್ನಾಗಿಸುತ್ತದೆ ಎಂದು ಬದುಕಿನಲ್ಲಿ ಬದುಕುವುದರಿಂದಲೇ ಕಲಿಯುವ ಪಾಠವನ್ನು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
612
ಕಾಷಾಯವೇಂ ತಪಸು ಗೃಹಲೋಕನಿರ್ವಾಹ ।
ವೇಷತಾಳದ ತಪಸು, ಕಠಿನತರ ತಪಸು ॥
ಲೇಸಿನಿಂದದು ಸಾಗೆ ಬೇಕು ಶಮ ದಮ ಸಮತೆ ।
ಆಸಿಧಾರವ್ರತವೊ - ಮಂಕುತಿಮ್ಮ ॥ ೬೧೨ ॥
ಕಾವಿ ಬಟ್ಟೆಗಳನ್ನು ಧರಿಸಿ ಕಾಡಿನಲ್ಲಿ ಕುಳಿತರೆ ಮಾತ್ರ ತಪಸ್ಸಾಗುತ್ತದೇನು? ಸಂಸಾರ ನಿರ್ವಹಣೆಯಲ್ಲಿ ಆಗುವುದಿಲ್ಲವೇನು? ತಪಸ್ವಿಯ ವೇಷವನ್ನು ಧರಿಸದಿದ್ದರೂ ಗೃಹ ನಿರ್ವಹಣೆ ಮಾಡುವುದೂ ಸಹ ಒಂದು ತಪಸ್ಸು, ಬಹಳ ಕಠಿಣ ತಪಸ್ಸು. ಅದು ಚೆನ್ನಾಗಿ ನಡೆಯಬೇಕಾದರೆ ಮಾನವರು ಶಮ ದಮದ ಸಮತೆಯನ್ನು ಕಾಯ್ದುಕೊಳ್ಳಬೇಕು. ಈ ಗೃಹ ನಿರ್ವಹಣೆ ಅಥವಾ ಸಂಸಾರವನ್ನು ತೂಗಿಸುವುದು ಕತ್ತಿಯ ಅಲಗಿನ ಮೇಲಿನ ನಡೆಯಂತೆ ಎಂದು ಸಂಸಾರ ನಿರ್ವಹಣೆಯೂ ಸಹ ಒಂದು ತಪಸ್ಸು ಎನ್ನುವ ವಿಚಾರವನ್ನು ದೃಢಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.