Kagga Logo

Maturing by worldly life

603

608

603

ಧರಣಿಗೋಳವು ಮೂಸೆ; ಜೀವಗಳನದರೊಳಗೆ ।
ಪರಿಶುದ್ಧಿಗೊಳಿಸುವುದು ಸಂಸಾರತಾಪ ॥
ಪರಿಪರಿಯ ಬಂಧುಧರ್ಮದಿನ್ ಅಹಂಮತಿ ಕರಗೆ ।
ಹರಡಿ ಹಬ್ಬುವುದಾತ್ಮ - ಮಂಕುತಿಮ್ಮ ॥ ೬೦೩ ॥

ಇಡೀ ಜಗತ್ತೇ ಒಂದು ಲೋಹಗಳನ್ನು ಕಾಯಿಸಿ, ಕರಗಿಸಿ, ಶುದ್ಧೀಕರಿಸುವ ಪಾತ್ರೆ. ನಾವೆಲ್ಲಾ ಬದುಕನ್ನು ಪಡೆದು ಅದರೊಳಕ್ಕೆ ಬಿದ್ದಿದ್ದೇವೆ. ಪರಿಪರಿಯಾದ ಬಂಧಗಳ ಧರ್ಮಗಳನ್ನು ಪಾಲಿಸುತ್ತಾ ನಾವಿರುವಾಗ, ಸಂಸಾರದ ತಾಪ, ನಮ್ಮನ್ನು ಅದರೊಳಗೆ ಕಾಯಿಸಿ, ಕಲ್ಮಷಗಳನ್ನು ಸುಟ್ಟು ಪರಿಶುದ್ಧಗೊಳಿಸುತ್ತದೆ. ಹಾಗೆ ಪರಿಶುದ್ಧಗೊಂಡ ನಮ್ಮಲ್ಲಿ ಅಹಂಕಾರವು ನಶಿಸಿದರೆ, ಭೇದಗಳು ಅಳಿಸಿ ಜಗದಾತ್ಮತೆಯ ಭಾವ ಅರಳಿದರೆ ನಾವು ವಿಶ್ವಮಾನವರಾಗುತ್ತೇವೆ ಎನ್ನುವ ಭಾವವನ್ನು ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

604

ಹೊಸಹೊಸಬನಾಗುವನನುಕ್ಷಣಂ ಮಾನವನು ।
ವಸುಧೆಯಾ ಮೂಸೆಯಲಿ ಪುಟಪಾಕವಾಂತು ॥
ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ ।
ಕಸವೆಲ್ಲ ಕಳೆದವನು - ಮಂಕುತಿಮ್ಮ ॥ ೬೦೪ ॥

ಮಾನವನು ಈ ಜಗತ್ತಿನ ಬದುಕಿನ ಮೂಸೆಯಲ್ಲಿ ಮತ್ತೆ ಮತ್ತೆ ಕಾಯಿಸಲ್ಪಟ್ಟು, ಶುದ್ಧೀಕರಿಸಲ್ಪಟ್ಟು ‘ಅಪರಂಜಿ’ ಯಂತೆ, ಕಸವನ್ನೆಲ್ಲ ಕಳೆದುಕೊಂಡು, ಸತ್ವವನ್ನು ತುಂಬಿಕೊಂಡು, ಹೊಸತನವನ್ನು ಮೆರೆಯುತ್ತಾ ಶುದ್ಧನಾಗುತ್ತಾನೆ. ಅವನು ರಸಮೂರ್ತಿಯಾಗಿ ಸತ್ವವನ್ನು ಬೆಳಗುತ್ತಾ, ಸಂಕುಚಿತತೆ ಕಳೆದು, ಜಗತ್ತಿನಲ್ಲಿ ಏಕಾತ್ಮ ಭಾವದಿಂದ ಬೆಳಗುತ್ತಾನೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

605

ಉದರಶಿಖಿಯೊಂದುಕಡೆ, ಹೃದಯಶಿಖಿಯೊಂದುಕಡೆ ।
ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? ॥
ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ ।
ಪುದಿಯದಾತ್ಮಾರ್ಣವದಿ - ಮಂಕುತಿಮ್ಮ ॥ ೬೦೫ ॥

ಹೊಟ್ಟೆಯ ಶಾಖ ಒಂದು ಕಡೆ, ಹೃದಯದ ಶಾಖವೊಂದುಕಡೆ. "ಇವೆರಡು ಶಾಖಗಳ ನಡುವೆ ಕಲ್ಲಾದ ಆತ್ಮ ಮೃದುವಾಗುವುದೆಂತು? ಜೀವನದ ಬೇಗೆಯಲ್ಲಿ ಬೆಂದು ಕರಗದ ಆತ್ಮ ಜಗದಾತ್ಮಸಾಗರವ ಸೇರುವುದೆಂತು? " ಎಂದು ಹೇಳುತ್ತಾ, ಆತ್ಮ ತನ್ನ ಬೇಧಗಳನ್ನು ಕಳೆದುಕೊಂಡು ವೈಶಾಲ್ಯವನ್ನು ಪಡೆಯಬೇಕಾದರೆ ಕರಗಬೇಕು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

606

ತ್ರಾಸಿನಲಿ ಕಪ್ಪೆಗಳ ಸರಿಕೂಡಿಸುವ ಚತುರಿ ।
ಸಂಸ್ಕೃತಿ ದ್ವಂದ್ವಗಳ ಸಮತೂಗಲರಿವಂ ॥
ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ ।
ಸಾಸವೀ ಗೃಹಧರ್ಮ - ಮಂಕುತಿಮ್ಮ ॥ ೬೦೬ ॥

ಒಬ್ಬ ಗೃಹಸ್ಥ ತನ್ನ ದಾಯತ್ವವನ್ನು ನಿರ್ವಹಿಸಲು ಪಡುವ ಪರದಾಟದ ಚಿತ್ರಣವನ್ನು ನೀಡುತ್ತಾ, ತಕ್ಕಡಿಯಲ್ಲಿ ಕಪ್ಪೆಗಳನ್ನು ಸಮರ್ಪಕವಾಗಿ ತೂಗಬಹುದಾದ, ಎರಡು ಸಂಸ್ಕೃತಿಗಳ ಅಥವಾ ಒಂದೇ ಸಂಸ್ಕೃತಿಯಲ್ಲಿರುವ ದ್ವಂದ್ವಗಳ ನಡುವೆ ಸಮತೋಲನವನ್ನು ಕಾಯಬಲ್ಲ, ಮತ್ತು ಅಕ್ಕಪಕ್ಕದಲ್ಲಿ ಬೀಸುಕತ್ತಿಗಳು ತೂಗುತ್ತಿರುವಾಗ, ಅವುಗಳನ್ನು ತಪ್ಪಿಸಿಕೊಂಡು ಹಗ್ಗದ ಮೇಲೆ ನಡೆಯುವ ಚತುರತೆಯೆಂತೆಯೇ ಗೃಹಧರ್ಮವನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಸಾಹಸಕ್ಕೂ ಬೇಕಾಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

607

ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು ।
ವ್ಯಾಮೋಹಕೆಡೆಗೊಟ್ಟೊಡದು ನಿಗಳವಹುದು ॥
ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ? ।
ಆಮಿಷದ ತಂಟೆಯಿದು - ಮಂಕುತಿಮ್ಮ ॥ ೬೦೭ ॥

ದಾಂಪತ್ಯದಲ್ಲಿ ಸಾಮರಸ್ಯವಿರಬೇಕು. ಇಲ್ಲದಿದ್ದರೆ ಅದು ವೃದ್ಧಿಯಾಗುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಪರಸ್ಪರ ಅತಿಶಯದ ಪ್ರೇಮವಿರಬೇಕು. ಪ್ರೇಮದ ಸ್ಥಾನದಲ್ಲಿ ವ್ಯಾಮೋಹವಿದ್ದರೆ ಅದು ನಮಗೆ ಬಂಧನದ ಸಂಕೋಲೆಗಳಾಗಿ ಬದುಕು ಕ್ಲಿಷ್ಟವಾಗಿ ಪರಿಣಮಿಸುತ್ತದೆ. ಅಂತಹ ಸ್ಥಿತಿಯಲ್ಲಿ ಸಾಮರಸ್ಯವನ್ನು ಕಾಣಲು ಸಾಧ್ಯವಿಲ್ಲ. ಈ ರೀತಿ ನಮಗೆ ಮೋಹ ಅಥವಾ ವ್ಯಾಮೋಹ ಉಂಟಾಗುವುದಕ್ಕೆ ನಮ್ಮ ಮನದಲ್ಲುಂಟಾಗುವ ಆಸೆಗಳೇ ಕಾರಣ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

608

ಕೈಕಯಿಯವೊಲು ಮಾತೆ, ಸತ್ಯಭಾಮೆವೊಲು ಸತಿ ।
ಸಾಕಿ ಸಂತಸವೆರೆಯೆ ಸಂಸಾರ ಲೀಲೆ ॥
ಬೇಕು ಮತ್ಸರ ಮಮತೆ ಮೋಹಂಗಳಾವೇಶ ।
ಲೋಕನಾಟಕಕಾಗ - ಮಂಕುತಿಮ್ಮ ॥ ೬೦೮ ॥

ಕೈಕೇಯಿಯಂತಹ ತಾಯಿ ಇರಬೇಕು ಮತ್ತು ಸತ್ಯಭಾಮೆಯಂತಹ ಹೆಂಡತಿ ಇರಬೇಕು. ಅವರಂತೆ ಪ್ರೀತಿ ತೋರಿದರೆ ಮಾತ್ರ ನಡೆಯುವುದು ಸಂಸಾರದ ಲೀಲಾವಿನೋದ. ಈ ಜಗನ್ನಾಟಕದ ಲೀಲೆಗೆ ಮೋಹ, ಮಮತೆ, ಮತ್ಸರ ಮುಂತಾದವುಗಳು ಬೇಕು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.