Brahman, the leader
599
—
602
599
ತಿರುಗಿಸಲಿ ವಿಧಿರಾಯನಿಚ್ಛೆಯಿಂ ಯಂತ್ರವನು ।
ಚರಿಕೆ ತಾರಾಗ್ರಹಗಳಿಷ್ಟವೋದಂತೆ ॥
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ ।
ಸ್ಥಿರಚಿತ್ತ ನಿನಗಿರಲಿ - ಮಂಕುತಿಮ್ಮ ॥ ೫೯೯ ॥
ನಿನ್ನ ನಿಯಂತ್ರಿಸುವ ಆ ವಿಧಿರಾಯನು, ತನ್ನ ಇಚ್ಚೆಯಂತೆ ನಿನ್ನ ಬದುಕಿನ ಚಕ್ರವನ್ನು ಹೇಗಾದರೂ ತಿರುಗಿಸಲಿ ಮತ್ತು ನಿನ್ನ ಜಾತಕದ ರೀತ್ಯಾ ನಕ್ಷತ್ರ ಗ್ರಹಗಳು ನಿನ್ನ ಬದುಕಿನ ಗತಿಯನ್ನು ಬದಲಾಯಿಸುತ್ತಾ ಇರಲಿ, ನಿನ್ನ ಕರ್ಮಕ್ಕೆ ನಿಯಂತ್ರಕರಾದ ದೇವತೆಗಳು ಅಟ್ಟಹಾಸದಿಂದ ಅಥವಾ ಪರಿಹಾಸದಿಂದ "ನೋಡಿದೆಯಾ ಇವನನ್ನು ಹೇಗೆ ಆಡಿಸುತ್ತಿದ್ದೇವೆ" ಎಂದು ಕುಹಕದ ನಗೆ ನಗಲಿ. ಏನೇ ಆದರೂ ನಿನ್ನ ಮನಸ್ಸು ದೃಢವಾಗಿರಲಿ ವಿಚಲಿತವಾಗದೆ ಇರಲಿ ಎಂದು ಒಂದು ಉಪದೇಶವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
600
ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।
ಪದ ಕುಸಿಯೆ ನೆಲವಿಹುದು - ಮಂಕುತಿಮ್ಮ ॥ ೬೦೦ ॥
ಒಂದು ಕುದುರೆಯನ್ನು ಕಟ್ಟಿ ಎಳೆಯಲ್ಪಡುವ, ನಾಲ್ಕು ಜನ ಕುಳಿತುಕೊಳ್ಳಬಹುದಾದ ಬಂಡಿಗೆ, "ಜಟಕಾ" ಎಂದು ಕರೆಯುತ್ತಿದ್ದರು. ಆ ಕಾಲಕ್ಕೆ ಸಾಮಾನ್ಯವಾಗಿ ಮುಸ್ಲಿಮರು ಅದನ್ನು ಓಡಿಸುವ ಕೆಲಸದಲ್ಲಿ ತಮ್ಮನ್ನು ಅಧಿಕವಾಗಿ ತೊಡಗಿಸಿಕೊಳ್ಳುತ್ತಿದ್ದರು. ಹಾಗಾಗಿ ಅದನ್ನು ಓಡಿಸುವವರಿಗೆ ‘ ಸಾಹೇಬ’ ಎಂದು ಕರೆಯುತ್ತಿದ್ದರು. ಅದು ಅಪಭ್ರಂಶವಾಗಿ "ಜಟಕಾ ಸಾಬಿ" ಎಂದೂ ಸಂಬೋಧಿಸಲ್ಪಡುತ್ತಿದ್ದರು.ಇದನ್ನೇ ಒಂದು ದೃಷ್ಟಾಂತವಾಗಿ ಇಟ್ಟುಕೊಂಡು, " ನಮ್ಮ ಬದುಕೇ ಒಂದು ಜಟಕಾ ಬಂಡಿ, ಅದನ್ನೆಳೆದುಕೊಂಡು ಹೋಗುವ ನಾವೇ ಕುದುರೆಗಳು. ಈ ಬದುಕೆಂಬ ಜಟಕಾ ಬಂಡಿಯನ್ನು ಓಡಿಸುವವನೇ ವಿಧಿ, ಎಂದರೆ ಪರಮಾತ್ಮ. ಬಂಡಿಗೆ ಕಟ್ಟಿದ ಕುದುರೆಗೆ ಆ ಬಂಡಿ ಓಡಿಸುವವನು ಹೇಳಿದಲ್ಲಿಗೆ ಹೋಗಬೇಕು. ಅದು ಮದುವೆಗಾದರೂ ಆಗಬಹುದು ಅಥವಾ ಸ್ಮಶಾನಕ್ಕಾದರೂ ಆಗಬಹುದು. ಬದುಕೆಂಬ ಜಟಕಾ ಬಂಡಿಯನ್ನು ಎಳೆಯುವ ಕುದುರೆಗಳಾದ ನಮಗೆ, ಬದುಕ ಬಂಡಿಯನ್ನು ಎಳೆದೂ ಎಳೆದೂ ಸುಸ್ತಾಗಿ ಕಾಲು ಸೋತು ಕುಸಿದರೆ ವಿಶ್ರಮಿಸಿಕೊಳ್ಳಲು ನೆಲವುಂಟು ಎಂದು ಬದುಕಿನ ಓಟದ ಸತ್ಯವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
601
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ।
ದೊರತುದ ಹಸಾದವೆಂದುಣ್ಣು ಗೊಣಗಿಡದೆ ॥
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ ।
ಹೊರಡು ಕರೆ ಬರಲ್ ಅಳದೆ - ಮಂಕುತಿಮ್ಮ ॥ ೬೦೧ ॥
ಬದುಕಿನಲ್ಲಿ ನಿನಗೆ ಸಿಕ್ಕ ಕೆಲಸವನ್ನು " ಇದು ಸಣ್ಣದು- ಇದು ಸರಿಯಲ್ಲ " ಎನ್ನದೆ ಮನವಿಟ್ಟು ಮಾಡು ಮತ್ತು ಆ ಕೆಲಸದಿಂದ ನಿನಗೆ ದೊರೆತ ಫಲವನ್ನು ಗೊಣಗಾಡದೆ, ಆ ಪರಮಾತ್ಮನ ಪ್ರಸಾದವೆಂದು ಬಗೆದು ಸ್ವೀಕರಿಸು. ನಿನ್ನ ಮೇಲೆ ಹೊರಿಸಿದ ಲೋಕದ ಭಾರದ ಭಾಗವನ್ನು ಭರಿಸುವಾಗ ಪಾರಮಾರ್ಥಿಕ ಭಾವವನ್ನು ಬಿಡದೆ ಬದುಕಿ, ಅಂತಕನ ಕರೆ ಬಂದಾಗ ಅತ್ತು, ಬೇಸರಿಸದೆ ಹೊರಡು, ಎಂದು ಬದುಕನ್ನು ಹೇಗೆ ಬಾಳಬೇಕು ಎನ್ನುವ ಉಪದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
602
ಮಾಯೆಯೆಂಬಳ ಸೃಜಿಸಿ, ತಾಯನಾಗಿಸಿ ಜಗಕೆ ।
ಆಯಸಂಗೊಳುತ ಸಂಸಾರಿಯಾಗಿರುವ ॥
ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ ।
ಹೇಯವದರೊಳಗೇನೊ - ಮಂಕುತಿಮ್ಮ ॥ ೬೦೨ ॥
” ಸುಮ್ಮನೊಬ್ಬಂಟಿ ಯೆಂತಿಹುದು” ” ಹೊಮ್ಮುವೆನು ಕೋಟಿರೂಪದಲಿ ನಾನು” ಎಂದು ಆ ಪರಮಬ್ರಹ್ಮ ಎಣಿಸಿದನಂತೆ ‘ಆ ಏಳಸಿಕೆಯೇ ಮಾಯೆ " ಎಂದು ಗುಂಡಪ್ಪನವರು ಮುಕ್ತಕ ೭೪ ರಲ್ಲಿ ಬರೆಯುತ್ತಾರೆ. ಅದನ್ನೇ ಮುಂದುವರೆಸುತ್ತಾ ಈ ಮಾಯೆಯನ್ನು ಸೃಷ್ಟಿಸಿ ಅದನ್ನು ಆ ಜಗತ್ತಿಗೆ ತಾಯಿಯಾಗಿಸಿ, ತಂದೆಯ ರೂಪದಲಿ ಆ ಪರಮಾತ್ಮ, ಜಗತ್ಸಂಸಾರಿಯಾಗಿದ್ದಾನೆ. ನಾವೆಲ್ಲಾ ಅವನ ಈ ಮಾಯಾ ಸಂಸಾರದ ವಾಸಿಗಳು ಮತ್ತು ಅವನ ಅನುಯಾಯಿಗಳು. ಹಾಗಿರುವಾಗ ಈ ಜಗತ್ತಿನಲ್ಲಿ ಇದ್ದೂ ಈ ಜಗತ್ತನ್ನು ಅಸಹ್ಯಪಟ್ಟುಕೊಳ್ಳುವುದು ಸರಿಯೇನೋ? ಎಂದು ಒಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.