Kagga Logo

Divine actions

594

598

594

ಬಿಡುವಿಲ್ಲದೀ ಜೀವಿತಾಪಣದ ಸರಕೆಣಿಸೆ ।
ಕಡೆಯೆಂದು? ಮುಗಿಯದಿಹ ಲಾಭನಷ್ಟಗಳ ॥
ಕಡತದೊಳ್ ಅದೆಂದಿನಾ ಲೆಕ್ಕವೇ ತೀರ್ಮಾನ? ।
ಬಿಡು ಲಾಭದಾತುರವ - ಮಂಕುತಿಮ್ಮ ॥ ೫೯೪ ॥

ಬಿಡುವಿಲ್ಲದೆ ನಡೆಯುವ ಈ ಜಗತ್ತಿನ ಮಾರುಕಟ್ಟೆಯಲ್ಲಿ, ನಮಗೆ ನಮ್ಮ ಸರಕನ್ನ ಎಣಿಸಿ ಕಡೆಗೆ ಇಳಿಸಿ "ಇಂದಿನ ವ್ಯಾಪಾರ ಮುಗಿಯಿತು" ಎಂದು ಅಂದಿನಲಾಭ ನಷ್ಟಗಳ ಲಾಭ ನಷ್ಟಗಳ ಲೆಕ್ಕಾ ಹಾಕಲಾಗುವುದೆ? ಸಾಧ್ಯವಿಲ್ಲ, ಹಾಗಾಗಿ ನೀನು ನಿನ್ನ ಜೀವನವೆಂಬ ವ್ಯಾಪಾರದಲ್ಲಿ ಲಾಭದ ಆಸೆಯನ್ನು ಬಿಡು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

595

ಎನಿತು ನೀಂ‌ಗೆಲಿದೆಯೆಂದೆನರು ಬಲ್ಲವರೆಂದು- ।
ಮೆನಿತು ನೀಂ ಪೋರ್ದೆ ಯೆನಿತನು ಪೊತ್ತೆಯೆನುವರ್ ॥
ಗಣನೆ ಸಲುವುದು ತೋರ್ದ ಪೌರುಷಕೆ, ಜಯಕೆಲ್ಲ ।
ದಿನದಿನದ ಗರಡಿಯಿದು - ಮಂಕುತಿಮ್ಮ ॥ ೫೯೫ ॥

ಅರಿತವರು, ನೀ ಏನನ್ನು ಅಥವಾ ಎಷ್ಟು ಗೆದ್ದೆಯೆಂದು ಕೇಳುವುದಿಲ್ಲ, ನೀ ಎಷ್ಟುಹೋರಾಡಿದೆ ಎಂದೋ ಅಥವಾ ನೀ ಎಷ್ಟು ಭಾರವನ್ನು ಹೊತ್ತೆ ಎಂಬುದನ್ನು ನೋಡುತ್ತಾರೆ. ಏಕೆಂದರೆ ಬದುಕಿನ ಹೋರಾಟದಲ್ಲಿ ನಾವೆಷ್ಟು ಧೈರ್ಯದಿಂದ, ತಾಳ್ಮೆಯಿಂದ ಹೋರಾಡಿದ್ದೇವೆ ಎನ್ನುವುದೇ ಗಣನೆಗೆ ಬರುವುದು. ನಾವು ಪಡೆದ ಜಯಕ್ಕೆ ಅಲ್ಲ. ಈ ಜಗತ್ತಿನ ಹೋರಾಟ ಒಂದು ಪ್ರತಿ ನಿತ್ಯದ ಗರಡಿಮನೆಯಂತೆ. ಪ್ರತಿ ನಿತ್ಯ ವ್ಯಾಯಾಮ ಮಾಡಬೇಕು, ಪ್ರತಿ ನಿತ್ಯವೂ ಕುಸ್ತಿ ಮಾಡಬೇಕು. ಇಲ್ಲಿ ಎಷ್ಟು ಕಸರತ್ತು ಮಾಡಿದ್ದೇವೆ ಎನ್ನುವುದೇ ಮುಖ್ಯವಾಗುತ್ತದೆ ಹೊರತು ಗೆಲುವಲ್ಲ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

596

ಗರಡಿಯ ಸಾಮಿಂದೆ ನೀನೆದುರಾಳ ಗೆಲ್ಲದೊಡೇಂ? ।
ಬರದಿಹುದೆ ನಿನಗನಿತು ಕಾಯಾಂಗಪಟುತೆ? ॥
ವರ ಸದ್ಯಕಿಲ್ಲದೊಡೆ ಬರಿದಾಗುವುದೆ ಪೂಜೆ? ।
ಪರಿಶುದ್ಧ ಮನವೆ ವರ - ಮಂಕುತಿಮ್ಮ ॥ ೫೯೬ ॥

ನೀನು ಗರಡಿಯ ಸಾಮನ್ನು ಮಾಡಿ, ಕುಸ್ತಿಯಲ್ಲಿ ಎದುರಾಳಿಯಮೇಲೆ ಗೆಲ್ಲದಿದ್ದರೆ ಏನಂತೆ, ನಿನ್ನ ದೇಹವಂತೂ ಗಟ್ಟಿಯಾಗುವುದಲ್ಲವೆ? ಪೂಜೆ ಮಾಡಿದ ಕೂಡಲೇ ವರ ಸಿಗದಿದ್ದರೆ, ಪೂಜೆಯನ್ನು ವ್ಯರ್ಥವೆನ್ನುತ್ತೀಯೇನು? ಗರಡಿ ಸಾಮಿಂದ ದೇಹ ಗಟ್ಟಿಯಾಗುವುದು ಹೇಗೆ ಸಂದ ಫಲವೋ ಹಾಗೆ ಮನಸ್ಸು ಶುದ್ಧವಾಗುವುದೇ ಪೂಜೆಯಿಂದ ಸಲ್ಲುವ ಉತ್ತಮ ಫಲವೆಂದು, ಜಗತ್ತಿನ ಬದುಕಿನಲ್ಲಿ ನಮ್ಮೆಲ್ಲರ ಹೋರಾಟದ ಫಲಶೃತಿಯ ರೂಪವನ್ನು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

597

ಬಿತ್ತ ಮಳೆಗಳವೋಲು ಯತ್ನ ದೈವಿಕ ನಮಗೆ ।
ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು ॥
ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ ।
ಗೊತಿಲ್ಲ ಫಲದ ಬಗೆ - ಮಂಕುತಿಮ್ಮ ॥ ೫೯೭ ॥

ಸಕಾಲಕ್ಕೆ ಬಿತ್ತುವ ಬೀಜ ಮತ್ತು ಬರುವ ಮಳೆಯಿಂದಾಗಿ ಬೆಳೆ ಬರಬೇಕು. ಸಕಾಲಕ್ಕೆ ಸರಿಯಾದ ಬೀಜವನ್ನು ಬಿತ್ತುವುದು ನಮ್ಮ ಯತ್ನ, ಸಕಾಲಕ್ಕೆ ಸರಿಯಾದ ಹದದಲ್ಲಿ ಬರುವ ಮಳೆ ದೈವ ಕೃಪೆಯಿಂದಾಗಬೇಕು. ನಾಮ್ಮ ಪ್ರಯತ್ನ ಮತ್ತು ದೈವ ಕೃಪೆಗಳು ಸೇರಿದರೆ ಬೆಲೆ ಹುಲುಸಾಗಿ ಬೆಳೆಯುತ್ತದೆ. ನಮ್ಮ ಪ್ರಯತ್ನವನ್ನು ಮಾಡದಿದ್ದರೆ ಅದು ನಮ್ಮ ಕರ್ತವ್ಯ ಲೋಪ. ದೈವ ಕೃಪೆಯಾಗದಿದ್ದರೆ ದೈವ ಮುನಿಸಿಕೊಂಡಿದೆ ಎಂದೇ ತಿಳಿಯಬೇಕು. ಹಾಗಾಗಿ ನಮಗೆ ನಮ್ಮ ಕೆಲಸಕಾರ್ಯಗಳಿಗೆ ಸೂಕ್ತ ಫಲ ಸಿಗುವುದೋ ಇಲ್ಲವೋ ಎಂಬ ಅರಿವಿಲ್ಲ ಎಂದು ಉಲ್ಲೇಖಮಾದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

598

ಬದುಕು ಕದನವೆಂದಂಜಿ ಬಿಟ್ಟೋಡುವನು ।
ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ॥
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ- ।
ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ ॥ ೫೯೮ ॥

ಜೀವನವನ್ನು ಒಂದು ಕದನವೆಂದು, ಅದಕ್ಕೆ ಹೆದರಿ ಬಿಟ್ಟು ಓಡಿಹೋಗುವವನು ವಿಧಿಯ ವಿನ್ಯಾಸದಿಂದ ಹೊರಗುಳಿಯಲು ಸಾಧ್ಯವೇ? ಹಾಗೆ ಹೆದರಿ ಹೋದರೆ ವಿಧಿಯು ವಿಧಿಸಿದ ಕರ್ಮವ ಸವೆಸದೆ ಈ ಬದುಕಿನಿಂದ ಹೋಗಲು ಸಾಧ್ಯವೇ? ಹಾಗಾಗಿ ಮನಸ್ಸಿನಲ್ಲಿ ಧೈರ್ಯವನ್ನು ತುಂಬಿಕೊಂಡು, ವಿವೇಕವನ್ನೇ ಆಯುಧವನ್ನಾಗಿಸಿಕೊಂಡು, ಬಂದದ್ದನ್ನೆಲ್ಲಾ ಎದುರಿಸುತ್ತೇನೆ ಮತ್ತು ಸಹಿಸುತ್ತೇನೆ ಎಂದು ಗಟ್ಟಿಯಾಗಿ ನಿಂತರೆ, ಭವ ಸಾಗರವನ್ನು ಈಜಲು ನಮ್ಮ ಪ್ರಯತ್ನಕ್ಕೆ ಆ ವಿಧಿಯೂ ಸಹ ಸಹಾಯಮಾಡುತ್ತದೆ, ಎಂದು ನಮಗೆ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.