Kagga Logo

Courage is victory

589

593

589

ಪರಿ ಪರಿ ಪರೀಕ್ಷೆಗಳು, ಪರಿಭವದ ಶಿಕ್ಷೆಗಳು ।
ಗರಡಿಯ ವ್ಯಾಯಾಮ ಮನಬುದ್ಧಿಗಳಿಗೆ ॥
ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ ।
ಬಿರಿದ ನನೆ ಫಲಕೆ ಮನೆ - ಮಂಕುತಿಮ್ಮ ॥ ೫೮೯ ॥

ಗರಡಿಯ ಮನೆಯಲ್ಲಿ ಜಟ್ಟಿಗೆ ವ್ಯಾಯಾಮವಾದಂತೆ, ನಮಗೆ ಬದುಕಿನಲ್ಲಿ ಪರಿ ಪರಿಯಾದ ಪರೀಕ್ಷೆಗಳು, ಅ ಪರೀಕ್ಷೆಗಳಿಂದಾಗುವ ಸೋಲು, ಸೋಲಿನಿಂದಾಗಿ ಅನುಭವಿಸಬೇಕಾದ ವ್ಯಾಕುಲತೆಯ ಶಿಕ್ಷೆ, ಇವುಗಳೆಲ್ಲ ನಮ್ಮ ಮನಸ್ಸು ಬುದ್ಧಿಗಳಿಗೆ ಆಗುವ ವ್ಯಾಯಾಮದಂತೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಗಿಡದಲ್ಲಿನ ಒಂದು ಹೂ ಅರಳಿನಿಂತರೆ ಅದು ಮುಂಬರುವ ಹಣ್ಣಿಗೆ ನಾಂದಿಯಾದಂತೆ, ಬದುಕಿನಲ್ಲಿ ನಮಗೆ ಸಿಗುವ ಈ ಪೆಟ್ಟುಗಳಿಂದಲೇ ಮನಸ್ಸು ಬುದ್ಧಿಗಳು ಪಕ್ವವಾಗಿ, ಬಾಳಿನಲ್ಲಿ ನಮಗೆ ಜಯ ಸಿಗುತ್ತದೆ, ಎಂದು ನಮ್ಮ ಅನುಭವಗಳಿಂದ ಸಿಗುವ ಫಲದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

590

ಪುರುಷನ ಸ್ವಾತಂತ್ರ್ಯವವನ ತೋಳ್ಗಿರುವಷ್ಟು ।
ಪರಿಧಿಯೊಂದರೊಳದರ ಯತ್ನ ಕಡೆಯುಂಟು ॥
ತಿರುಗುವುದು ಮಡಿಸುವುದು ನಿಗುರುವುದು ನೀಳುವುದು ।
ತೊರೆದು ಹಾರದು ತೋಳು - ಮಂಕುತಿಮ್ಮ ॥ ೫೯೦ ॥

ಮನುಷ್ಯನ ಸ್ವಾತಂತ್ರ್ಯ, ಅವನ ಬಾಹುಗಳನ್ನು ಎಷ್ಟು ತಿರುಗಬಹುದೋ, ಎಷ್ಟು ಮಡಿಸಬಹುದೋ, ಎಷ್ಟು ನೆಟ್ಟಗಾಗಿಸಬಹುದೋ, ಎಷ್ಟು ನೀಟಬಹುದೋ, ಅಷ್ಟು. ಬಾಹುಗಳು ದೇಹಕ್ಕಂಟಿಕೊಂಡಿರುವುದರಿಂದ, ಅವನ ಬಾಹುಗಳ ಕಾರ್ಯ ಬಾಹುಳ್ಯಕ್ಕೆ ಒಂದು ಮಿತಿ ಇದೆ. ಆ ಬಾಹುಗಳು ದೇಹದಿಂದ ಬೇರ್ಪಟ್ಟು ಹಾರಲು ಸಾಧ್ಯವಿಲ್ಲ ಎಂದು ಹೇಳುತ್ತಾ, ಪ್ರತೀ ಮಾನವನ ಕಾರ್ಯಕ್ಷಮತೆ ಅಥವಾ ಸಾಮರ್ಥ್ಯಕ್ಕೆ ಒಂದು ಮಿತಿ ಇರುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

591

ಬದುಕು ಕದನದ ತೆರನೆ; ನೋಡೆ ಲೀಲೆ ಕದನ ।
ಮೊದಲುಮುಗಿವುಗಳಿರದ ಚಿತ್ರಲೀಲೆಯದು ॥
ಇದರೊಳೆಂದಿಗುಮಿರದು ಸೋಲ್ಗೆಲುವು ಕಡೆಯೆಣಿಕೆ ।
ಸದರದಾಟವೆ ಮುಖ್ಯ - ಮಂಕುತಿಮ್ಮ ॥ ೫೯೧ ॥

ಜೀವನ ಒಂದು ಹೋರಾಟದಂತೆ ಅಥವಾ ಯುದ್ಧದಂತೆ. ಆದರೆ ಅದನ್ನು ಸೂಕ್ಷ್ಮವಾಗಿ ನೋಡಿದರೆ ಪರಮಾತ್ಮನು ತನ್ನ ಸಂತೋಷಕ್ಕಾಗಿ ಸೃಷ್ಟಿಸಿದ ಪ್ರಕೃತಿ ಮತ್ತು ತನ್ನ ಶಕ್ತಿ ಮತ್ತು ಪ್ರಕೃತಿಗಳ ಸಮ್ಮಿಲನದಿಂದ ಸೃಷ್ಟಿಸಿಕೊಂಡ, ಕೋಟ್ಯಾಂತರ ರೂಪಗಳನ್ನು ಹೊತ್ತ ಜೀವಿಗಳ ‘ಜೀವನ’ ವೆನ್ನುವ, ಲೀಲಾ ವಿನೋದವೆಂದು ನಮಗೆ ತಿಳಿಯುತ್ತದೆ. ಇದೊಂದು ಅಂತ್ಯವಿಲ್ಲದ ಜಗನ್ನಾಟಕದ ಹೋರಾಟ. ಈ ಹೋರಾಟದಲ್ಲಿ ಸೋಲು ಅಥವಾ ಗೆಲುವು ಎಂಬುದೇ ಇಲ್ಲ. ಸರಸದಿಂದ ಬದುಕುವುದೇ ಇಲ್ಲಿ ಮುಖ್ಯ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.

592

ನರಜೀವನದ ರಣದಿ ವಿಧಿಯ ಬಲವೊಂದು ಕಡೆ ।
ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ ॥
ಉರುಬುತಿರೆ ಪುರುಷಂಗೆ ನಲುಮೆಯುಳಿತವೆ ಗೆಲವು।
ಪುರುಷತನವೇ ವಿಜಯ - ಮಂಕುತಿಮ್ಮ ॥ ೫೯೨ ॥

ಮನುಷ್ಯನ ಬದುಕಿನ ಹೋರಾಟದಲ್ಲಿ ವಿಧಿಯ ಬಲವು ಒಂದು ಕಡೆ ಇವನನ್ನು ಸೆಳೆಯುತ್ತಿದ್ದರೆ, ಮನುಷ್ಯ ತನ್ನ ಸಾಮರ್ಥ್ಯದಿಂದ ಬೆಳೆಸಿಕೊಂಡ ವಿವೇಕವು ಇವನಿಗೆ ಬೇರೆ ದಾರಿಯನ್ನು ತೋರುತ್ತಿರುತ್ತದೆ. ಹೀಗೆ ಇವನ ಹೋರಾಟದ ಓಟದಲ್ಲಿ ಅಥವಾ ಇವನ ಬದುಕಿನಲ್ಲಿ ಇವನು ಕಡೆಗೆ ತನ್ನ ಜೀವದಲ್ಲಿ ಸತ್ವವನ್ನು ಬೆಳೆಸಿಕೊಂಡು ಉಳಿಸಿಕೊಂಡರೆ ಅವನಿಗೆ ನಲುಮೆ ಎಂದರೆ ಸಂತೋಷವನ್ನು ಪಡೆದುಕೊಂಡರೆ ಅದೇ ಅವನಿಗೆ ಜಯ ಸಿಕ್ಕಂತೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

593

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ॥
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ - ಮಂಕುತಿಮ್ಮ ॥ ೫೯೩ ॥

"ನಾನು ಸೋತೆ, ನನ್ನಲ್ಲಿ ಇನ್ನು ಶಕ್ತಿಯಿಲ್ಲ, ನನ್ನಲ್ಲಿ ಶಕ್ತಿಯ ಒರತೆ ಬತ್ತಿ ಹೋಗಿದೆ, ಹಾಗಾಗಿ ನಾನು ಸತ್ತೆನೆಂದೇ ತಿಳಿಯುತ್ತೇನೆ" ಎಂದು ಬದುಕಿನ ಹೋರಾಟದಲ್ಲಿ ಹತಾಶೆಯನ್ನು ತಾಳಬೇಡ. ಸಾವು ಎನ್ನುವುದು ಕಡಲ ಮೇಲಿನ ಅಲೆಯಂತೆ, ಒಮ್ಮೆ ಮೇಲೆದ್ದರೆ ಒಮ್ಮೆ ಇಳಿಯುತ್ತದೆ ಮತ್ತು ಮತ್ತೆ ಮೇಲೇಳುತ್ತದೆ. ಹಾಗಾಗಿ ನಿರಾಶೆ ಹತಾಶೆಗಳಿಗೆ ಬಲಿಯಾಗಬೇಡ ಎಂಬ ಬುದ್ಧಿವಾದವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.