Kagga Logo

Let life ripen

584

588

584

ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ ।
ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು ॥
ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು।
ಒಲ್ಲನವನ್ ಅರೆನಚ್ಚ - ಮಂಕುತಿಮ್ಮ ॥ ೫೮೪ ॥

ಜಗತ್ತಿನ ಎಲ್ಲ ಕೆಲಸದ ಹೊರೆಯನ್ನು ಹೊರುವ ಅಧಿಕಾರ ನಿನಗಿಲ್ಲ. ಆದರೆ ನಿನಗೆ ಹೊರೆಯೇ ಇಲ್ಲವೆಂದಲ್ಲ!!!! ನೀನು ಮಾಡಲೇ ಬೇಕಾದ ಕರ್ತವ್ಯದ ಹೊರೆ ನಿನಗಿದೆ. ನಿನ್ನ ಕೈಲಾದಷ್ಟನ್ನು ನಿಷ್ಠೆಯಿಂದ ಮಾಡು ಮತ್ತು ಮಿಕ್ಕದ್ದನ್ನು ನಿನ್ನನ್ನು ಪಾಲಿಸುವ ಆ ದೈವದಲ್ಲಿ ದೃಢ ನಂಬಿಕೆ ಇಟ್ಟು ಬಿಟ್ಟುಬಿಡು. ನಂಬಿಕೆ ಪೂರ್ಣವಾಗಿರಲಿ. ಏಕೆಂದರೆ ಅವನು ಅರೆಬರೆ ನಂಬಿಕೆಯನ್ನು ಒಪ್ಪುವುದಿಲ್ಲ.

585

ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? ।
ಸಲಿಸದೊಂದನುಮೊಂದನುಂ ದೈವ ಬಿಡದು ॥
ಹೊಲಸೆಲ್ಲವೆಲ್ಲ ಪಾಳ್, ಬಾಳ್ಗೆ ತಳಹದಿಯಿಲ್ಲ ।
ಗಲಿಬಿಲಿಯಿದೆನಬೇಡ - ಮಂಕುತಿಮ್ಮ ॥ ೫೮೫ ॥

ಆ ದೈವ ತಾನು ನಮ್ಮಿಂದ ಏನನ್ನು ಮಾಡಿಸಬೇಕೆಂದಿದೆಯೋ ಅದನ್ನು ಮಾಡಿಸದೆ ಬಿಡದು, ನಾವು ‘ ನಾನು ‘ ಮಾಡುತ್ತೇನೆ ಎಂದು ಎಷ್ಟು ಹೋರಾಡಿ, ಹೆಣಗಾಡಿದರೂ ಏನೂ ಪ್ರಯೋಜನವಿಲ್ಲ. ಹಾಗಿರುವಾಗ ನಮ್ಮ ಮತ್ತು ಈ ದೈವ ಅಥವಾ ವಿಧಿಯ ನಡುವಿನ ಹೋರಾಟದಲ್ಲಿ ಸೋತು, ಒಂದು ಅಯೋಮಯ ಸ್ಥಿತಿಯಲ್ಲಿ " ಛೆ! ಈ ಬದುಕಿನಲ್ಲಿ ನಾವಂದುಕೊಂಡದ್ದನ್ನು ಮಾಡಲಾಗುವುದೇ ಇಲ್ಲ. ಈ ಬಾಳಿಗೆ ತಳಹದಿಯಿಲ್ಲ, ಈ ಬಾಳೆಲ್ಲ ಹೊಲಸು" ಎಂದು ಹೇಳಬೇಡ ಎಂದು ನಮ್ಮ ಬದುಕು ಮತ್ತು ದೈವದ ನಡುವಿನ ಸಮನ್ವಯದ ಅವಶ್ಯಕತೆಯನ್ನು ಸೂಚಿಸಿದ್ದಾರೆ ನಮಗೆ ಈ ಮುಕ್ತಕದಲ್ಲಿ.

586

ಕೆಂಡಮುಸುಡಿಯ ದೈವವೆಲ್ಲವನು ದಹಿಸುತಿರೆ ।
ದಂಡಧರನತ್ತಲ್ಲೆಲ್ಲವನು ಕೆಡಹುತಿರೆ ॥
ಮೊಂಡುಘಾಸಿಯ ಲಾಭ ಪಿಂಡಮಾತ್ರವು ತಾನೆ? ।
ಭಂಡಬಾಳಲೆ ನಮದು? - ಮಂಕುತಿಮ್ಮ ॥ ೫೮೬ ॥

ಜಗತ್ತಿನ ಪ್ರತಿ ಜೀತಿಯನ್ನೂ ಆ ಯಮನು ಕೆಡವಿ ಬೀಳಿಸುತ್ತಿರುವಾಗ ಮತ್ತು ಹಾಗೆ ಬಿದ್ದ ಪ್ರತಿಯೊಂದನ್ನೂ ಅಗ್ನಿದೇವನು ದಹಿಸಿಬೂದಿ ಮಾಡುತ್ತಿರುವಾಗ ಜಗತ್ತಿನಲ್ಲಿ ಬದುಕುವಾಗ ಮೊಂಡುತನಮಾಡಿ, ಪೆಟ್ಟು ತಿಂದು ಕೇವಲ ತುತ್ತು ಹಿಟ್ಟಿಗಾಗಿ ಹೋರಾಡುವ ನಮ್ಮದು ಕೇವಲ ಬಂಡ ಬಾಳು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

587

ಅಹುದು ಬಾಳ್ ಭಂಡತನವಿಹದಿ ಬಾಳ್ ಮುಗಿಯುವೊಡೆ ।
ಕಹಿಯೊಗರು ಕಾಯಿ, ಮಿಡಿತನದೊಳದು ಮುಗಿಯೆ ॥
ಸಿಹಿಯಹುದು ಕಾಯಿ ಹಣ್ಣಾಗೆ, ಜೀವಿತವಂತು ।
ಮಹಿಮೆಗೊಳುವುದು ಮಾಗೆ - ಮಂಕುತಿಮ್ಮ ॥ ೫೮೭ ॥

ಒಂದು ಮರದಲ್ಲಿ ಬಿಟ್ಟ ಕಾಯಿ ಮಾಗದೆ, ಹಣ್ಣೇ ಆಗದೆ ಉದುರಿಹೋದರೆ ಅದು ಮಧ್ಯಂತರವಾಗಿ ಮುಗಿದುಹೋದ ಬಾಳಾಗುತ್ತದೆ. ಪರಿಪೂರ್ಣ ಸಾರ್ಥಕ ಬದುಕಿಗೆ ಅದು ಮಾಗಿ ಹಣ್ಣಾದರೆ, ಅದರೊಳಗೆ ಸವಿ ಸೇರಿ, ಸಿಹಿಯಾಗುತ್ತದೆ. ನಮ್ಮ ಜೀವಿತವೂ ಸಹಾ ಹಾಗೆಯೇ, ಬಂಡತನದ ಬಾಳಲ್ಲೇ ಅಂತ್ಯವಾಗದೆ, ಅನುಭವಿಸಿ, ಕಲಿತು, ಪಕ್ವವಾಗಬೇಕು, ಎಂದು ಬಾಳಿನ ಸಾರ್ಥಕ್ಯಕ್ಕೊಂದು ಮಾರ್ಗವನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

588

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು ।
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ? ॥
ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ ।
ಗಟ್ಟಿತನ ಗರಡಿ ಫಲ - ಮಂಕುತಿಮ್ಮ ॥ ೫೮೮ ॥

ಜಟ್ಟಿಯಾದವನು ಮಲ್ಲ ಯುದ್ದದಲ್ಲಿ ಸೋತರೆ, ಅವನು ಮಲ್ಲನಾಗುವತನಕ ಮಾಡಿದ ಸಾಮು ಮತ್ತು ಅಭ್ಯಾಸಗಳು ಮತ್ತು ಕಲಿತ ಪಟ್ಟು ವರಸೆಗಳೆಲ್ಲಾ ವ್ಯರ್ಥವೆನ್ನುತ್ತೀಯೇನು? ಅವನು ಸೋತಿದ್ದರೂ ಅವನನ್ನು ಒಮ್ಮೆ ಮುಟ್ಟಿ ನೋಡು ಅವನ ಮೈ ಕಬ್ಬಿಣದಂತೆ ಗಟ್ಟಿಯಾಗಿರುತ್ತದೆ. ಅವನಿಗೆ ಆ ಗಟ್ಟಿತನ ಬಂದದ್ದು ಆ ಗರಡಿಯ ಸಾಮು ಮತ್ತು ವ್ಯಾಯಾಮದಿಂದ ಅಲ್ಲವೇ? ಹಾಗಾಗಿ ಸೋಲು ಗೆಲುವಲ್ಲ, ಗಟ್ಟಿತನವೇ ಗರಡಿಯ ಸಾಮಿನ ಮತ್ತು ಅಭ್ಯಾಸದ ಫಲ, ಎಂದು ಒಂದು ಉಪಮೆಯ ಮೂಲಕ ನಾವು ಬದುಕಿನಲ್ಲಿ ಸೋಲಬಹುದು ಅಥವಾ ಗೆಲ್ಲಬಹುದು ಆದರೆ ನಾವು ಪಕ್ವವಾಗುವುದೇ ನಮ್ಮ ಜೀವನದ ಫಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.