Burden that befits the back
579
—
583
579
ಬೆನ್ನಿನಗಲವನಳೆದು ಹೊರಗೆ ನೀನದನೊಡ್ಡು ।
ತನ್ನದೆನುವುದನು ವಿಧಿ ತಾನೆ ಕೊಳಲಿ ಬಿಡು ॥
ಬನ್ನ ನಿನಗೊದಗಲದನಾತ್ಮ ಶಿಕ್ಷಣವೆನ್ನು ।
ಮಾನ್ಯದೊಪ್ಪಂದವಿದು - ಮಂಕುತಿಮ್ಮ ॥ ೫೭೯ ॥
ಬದುಕಿನಲ್ಲಿ ಜೀವನದ ದೈನಂದಿನ ಕಾರ್ಯಕೆಲಸಗಳಲ್ಲಿ, ಎಷ್ಟು ಭಾರವನ್ನು ನಿನಗೆ ಹೊರಲು ಆಗುವುದೋ, ಅಷ್ಟನ್ನು ಮಾತ್ರ ಹೊತ್ತುಕೋ!! ನಿನ್ನ ಪೂರ್ವ ಕರ್ಮದನುಸಾರ ನಿನ್ನಿಂದ ಏನೇನು ಆಗಬೇಕೋ ಅದನ್ನೆಲ್ಲ ಆ ವಿಧಿ ಮಾಡಿಸಿಕೊಳ್ಳಲಿ ಬಿಡು. ಹಾಗೆ ಕರ್ಮ ಮಾಡುವಾಗ ಭಂಗವುಂಟಾದರೆ ಅದನ್ನು ಬದುಕಿನಲ್ಲಿ ನಿನಗೆ ಸಿಗುವ ಶಿಕ್ಷಣವೆಂದು ತಿಳಿ. ಅದೇ ಸರಿಯಾದ ಒಡಂಬಡಿಕೆ(compromise) ಎಂದು ಬದುಕನ್ನು ಬದುಕುವ ಮತ್ತೊಂದು ಪರಿಯನ್ನು ಉಪದೇಶಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
580
ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? ।
ತಿರುಕಹಾರುವನಾಗಿ ಮೀಸೆ ತಿರಿಚುವೆಯ? ॥
ಇರುವುದವನವನಿಗವನವನ ತಾಣದ ಧರ್ಮ ।
ಅರಿವೆ ಋತುಗತಿಯಂತೆ - ಮಂಕುತಿಮ್ಮ ॥ ೫೮೦ ॥
ನಾಟಕದಲ್ಲಿ ರಾಜನ ಪಾತ್ರ ಧರಿಸಿ ಮೀಸೆಯನ್ನು ಮರೆಯಬಹುದೇ? ಭಿಕ್ಷಾರ್ಥಿಯಾದ ಬಡ ಬ್ರಾಹ್ಮಣನ ವೇಷ ಧರಿಸಿದಪ್ಪ ದಪ್ಪ ಮೀಸೆಯನ್ನು ಇಟ್ಟುಕೊಂಡರೆ ಬಿಕ್ಷೆ ಸಿಕ್ಕೀತೆ?. ಜಗತ್ತಿನಲ್ಲಿರುವ ಪ್ರತಿಯೊಬ್ಬನಿಗೂ ಅವನವನದೇ ಆದಂತ ಒಂದು ಪಾತ್ರವಿರುತ್ತದೆ ಮತ್ತು ಆ ಪಾತ್ರಕ್ಕೊಂದು ಧರ್ಮವಿರುತ್ತದೆ. ಋತು ಬದಲಾದಂತೆ ನಮ್ಮ ಉಡುಗೆ ತೊಡುಗೆಗಳೂ ಬದಲಾಗುವುದಿಲ್ಲವೇ? ಹಾಗೆ ಸಮಯ ಸಂಧರ್ಭದ ಔಚಿತ್ಯಕ್ಕನುಸಾರವಾಗಿ ನಮ್ಮ ವೇಷ, ನಡೆ ನುಡಿ ಇರಬೇಕು ಎನ್ನವುದೇ ಈ ಮುಕ್ತಕದ ಹೂರಣ
581
ದೇವರದಿದೆಲ್ಲ ದೇವರಿಗೆಲ್ಲವೆಂದೊರಲು-।
ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ॥
ದಾವನ್ತ ಬಡುತ ತನ್ನಿಚ್ಛೆಯನೆ ಘೋಷಿಸುವ ।
ಭಾವವೆಂತಹ ಭಕುತಿ? - ಮಂಕುತಿಮ್ಮ ॥ ೫೮೧ ॥
ಈ ಜಗತ್ತೆಲ್ಲವೂ ಆ ದೇವರದು ಮತ್ತು ಇಲ್ಲಿರುವುದೆಲ್ಲವೂ ಆ ದೇವರಿಗಾಗಿಯೇ ಇದೆ ಎಂದು ವಟಗುಟ್ಟುತ್ತಾ ಯಾವುದನ್ನೂ ಅವನ ನಿರ್ಣಯಕ್ಕೆ ಬಿಡದೆ, ತಾನೇ ಎಲ್ಲದಕ್ಕೂ ದಾವಂತಪಡುತ್ತಾ, ತನ್ನದೇ ಆದ ನಿರ್ಣಯಗಳನ್ನು ಸದಾಕಾಲ ಘೋಷಿಸುತ್ತಾ ಇರುವುದು ಯಾವ ರೀತಿಯ ಭಕ್ತಿ ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
582
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ।
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ॥
ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು?।
ಒರಟು ಕೆಲಸವೊ ಬದುಕು - ಮಂಕುತಿಮ್ಮ ॥ ೫೮೨ ॥
ಬದುಕಿನಲ್ಲಿ ಮಾಡಿದ ಕೆಲಸ ಸರಿಯಾಗಲಿಲ್ಲ ಎಂದೋ ಅಥವಾ ಸಿಕ್ಕದ್ದು ಸರಿಯಿಲ್ಲ ಎಂದೋ ಕೊರಗುತ್ತಾ, ಬದುಕಿನ ಹಾಸಿಗೆಯಲ್ಲಿ ಮುಳ್ಳನ್ನು ಹರಡಿಕೊಳ್ಳಬೇಡ. ಯಾವುದೇ ಒಂದು ಕಡಿಮೆಯಾದರೂ ಅಥವಾ ಹೆಚ್ಚಾದರೂ ಏನೂ ವ್ಯತ್ಯಾಸವಾಗುವುದಿಲ್ಲ. ಆದರೂ ಇದನ್ನೇ ಕುರಿತು ತಲೆ ಕೆಡಿಸಿಕೊಂಡು ಬದುಕುವುದು ಒಂದು ಒರಟು ಕೆಲಸ ಎಂದು ಬದುಕಿನ ಪರಿಯ ಮತ್ತೊಂದು ಆಯಾಮವನ್ನು ನಮಗೆ ತೋರುತ್ತಾ ಶಾಂತಿಯ ಮತ್ತು ನೆಮ್ಮದಿಯ ಬದುಕಿಗೆ ಒಂದು ದಾರಿಯನ್ನೂ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
583
ಅಷ್ಟದಿಗ್ಗಜವೆ ನೀನ್? ಆದಿಶೇಷನೆ ನೀನು?।
ಕಷ್ಟಭಾರವಿದೆಂದು ನಿಟ್ಟುಸಿರ ಬಿಡುವೆ! ॥
ನಿಷ್ಠುರದ ನಿನ್ನ ಕನಿಕರ ಜಗಕೆ ಬೇಕಿಲ್ಲ ।
ಎಷ್ಟಾದರಷ್ಟೆ ಸರಿ - ಮಂಕುತಿಮ್ಮ ॥ ೫೮೩ ॥
ಬದುಕಿನ ಬವಣೆಯನ್ನು ಪಡುವಾಗ " ಅಯ್ಯೋ ಇದು ಕಷ್ಟ ಮತ್ತು ಇದು ಭಾರ" ಎಂದು ನಿಟ್ಟುಸಿರು ಬಿಡುವೆಯಲ್ಲಾ, ನೀನೇನು ಎಂಟು ದಿಕ್ಕುಗಳನ್ನು ಹೊತ್ತ ಆನೆಗಳಷ್ಟು ಭಾರವನ್ನೂ ಹೊತ್ತಿಲ್ಲ ಅಥವಾ ಆ ಆನೆಗಳನ್ನು ಹೊತ್ತ ಆದಿಶೇಷನಷ್ಟು ಭಾರವನ್ನೂ ಹೊತ್ತಿಲ್ಲವಲ್ಲ. ಸುಮ್ಮನೆ " ನಾನು ಬಹಳ ಕಷ್ಟಪಡುತ್ತಿದ್ದೇನೆ " ಎನ್ನುತ್ತಾ ಅನ್ಯರ ಅನುಕಂಪವನ್ನು ಆಕರ್ಷಿಸುವ ನಿನ್ನನ್ನು ಯಾರೂ ಈ ಜಗತ್ತಿನಲ್ಲಿ ಗಮನಿಸುವುದಿಲ್ಲ. ನಿನಗೆ ಎಷ್ಟು ಹೊರಲಾದರೆ ಅಷ್ಟು ಹೊತ್ತುಕೋ. ಸುಮ್ಮನೆ ಅಲವತ್ತುಕೊಳ್ಳಬೇಡ ಎಂದು ಕಿವಿಮಾತನ್ನು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.