Kagga Logo

Limits of courage

574

578

574

ಹೋರು ಧೀರತೆಯಿಂದ, ಮೊಂಡುತನದಿಂ ಬೇಡ ।
ವೈರ ಹಗೆತನ ಬೇಡ, ಹಿರಿ ನಿಯಮವಿರಲಿ ॥
ವೈರಾಗ್ಯ ಕಾರುಣ್ಯ ಮೇಳನವೆ ಧೀರತನ ।
ಹೋರುದಾತ್ತತೆಯಿಂದ - ಮಂಕುತಿಮ್ಮ ॥ ೫೭೪ ॥

ಬದುಕಿನಲ್ಲಿ ಧೈರ್ಯದಿಂದ ಹೋರಾಡು. ಆದರೆ ಆ ಹೋರಾಟ ಮೊಂಡುತನದಿಂದಾಗಿರಬಾರದು. ದ್ವೇಷ ಹಗೆತನದಿಂದಾಗಿರಬಾರದು. ಆ ಹೋರಾಟಕ್ಕೆ ಒಂದು ನಿಯಮವಿರಬೇಕು. ವೈರಾಗ್ಯ ಮತ್ತು ಕರುಣೆ ಎರಡರ ಸಮ್ಮಿಲನವೇ ಧೀರತನ. ಅದು ಒಂದು ವ್ಯಕ್ತಿಯಲ್ಲಿ ಉದಾತ್ತತೆಯನ್ನು ತುಂಬುತ್ತದೆ. ಹಾಗಾಗಿ ಬದುಕಿನ ಹೋರಾಟ ಅಂತಹ ಉದಾತ್ತತೆಯಿಂದ ಆಗಬೇಕು ಎಂದು ಕಷ್ಟ ಕಾರ್ಪಣ್ಯಗಳ ಬದುಕನ್ನು ಹೇಗೆ ಎದುರಿಸಬೇಕು, ಬದುಕಿನ ಹೋರಾಟವನ್ನು ಹೇಗೆ ನಿಭಾಯಿಸಬೇಕು ಎಂದು ಸೂಕ್ತ ಸಲಹೆಗಳನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

575

ಕಕ್ಷಿಗಾರನವೊಲೇ ಪೋರುತ್ತೆ ನ್ಯಾಯಕ್ಕೆ ।
ಸಾಕ್ಷಿವೊಲಿರು ಕಡೆಗೆ ತೀರ್ಪಾಗುವಂದು ॥
ಭಿಕ್ಷುವೊಲು ಕಾಲ ಸವೆಯಿಸಿ ಲೋಕಯಾತ್ರೆಯಲಿ ।
ಪಕ್ಷಿವೊಲು ಮನದೊಳಿರು - ಮಂಕುತಿಮ್ಮ ॥ ೫೭೫ ॥

ನ್ಯಾಯಾಲಯವನ್ನು ನ್ಯಾಯಕ್ಕಾಗಿ ಹತ್ತಿ ನ್ಯಾಯ ಸಿಕ್ಕುವವರೆಗೆ ಪ್ರತಿನಿತ್ಯ ಹೋರಾಡುವವನಂತೆ ನೀನೂ ಸಹ ಬದುಕಿನಲ್ಲಿ ಹೋರಾಡು. ಆದರೆ ಸಾಕ್ಷಿ ಹೇಳುವವನು ನ್ಯಾಯದ ತೀರ್ಪಿನಿಂದ ವಿಚಲಿತನಾಗುವುದಿರುವಂತೆ, ಬದುಕಿನಲ್ಲಿ ನಿರ್ಲಿಪ್ತನಾಗಿ ಸಾಕ್ಷಿಯಂತೆ ಇರು. ಬೌದ್ಧ ಬಿಕ್ಷು ಕಾಲನಡಿಗೆಯಲ್ಲೇ ಲೋಕಯಾತ್ರೆಮಾಡುವಂತೆ, ಮುಕ್ತವಾಗಿ ಆಗಸದಲ್ಲಿ ಹಾರಾಡುವ ಪಕ್ಷಿಯಂತೆ ನಾವೂ ಸಹ ಬದುಕಿನಲ್ಲಿ ನಡೆಯಬೇಕು. ನಿಷ್ಠೆಯಿಂದ ನಡೆಯಬೇಕು, ಕರ್ತವ್ಯವನ್ನು ಮಾಡಬೇಕು ಮತ್ತು ಸಾಫಲ್ಯ ಅಥವಾ ವೈಪಲ್ಯದಿಂದ ವಿಚಲಿತರಾಗದೆ ಮುಕ್ತವಾಗಿ ಬಾಳಬೇಕು ಎಂದು ಒಂದು ಆದೇಶವನ್ನು ಇತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

576

ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು ।
ಸನ್ನಿವೇಶದ ಸೂಕ್ಷ್ಮವರಿತು, ಧೃತಿದಳೆದು ॥
ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ ।
ಪುಣ್ಯಶಾಲಿಯ ಪಾಡು - ಮಂಕುತಿಮ್ಮ ॥ ೫೭೬ ॥

ಒಬ್ಬ ವ್ಯಕ್ತಿ, ತನ್ನ ಗುಣಾವಗುಣಗಳಿಂದ ಕೂಡಿದ ”ಶಕ್ತಿ’ ಯನ್ನು ಅರಿತು, ಅವುಗಳಲ್ಲಿ ಗುಣಗಳನ್ನು ಮಾತ್ರ ತೋಡಿ ಹೊರತೆಗೆದು, ಸಮಯ ಸಂಧರ್ಭಗಳ ಸೂಕ್ಷ್ಮವನ್ನು ಅರಿತು. ತನ್ನ ಕಾರ್ಯವ್ಯಾಪ್ತಿಯನ್ನರಿತು, ಅದರ ಪರಿಧಿಯನ್ನು ಮೀರದೆ ತನ್ನ ಕರ್ತವ್ಯವನ್ನು ಮಾಡುವುದು ಪುಣ್ಯಶಾಲಿಯ ಪಾಡು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಹಾಗೆ ಕಾರ್ಯಪ್ರವೃತ್ತನಾಗಲಾದರೆ ಅಂತಹವನೇ ಪುಣ್ಯಶಾಲಿ ಎನ್ನುವುದೇ ಈ ಮುಕ್ತಕದ ಹೂರಣ.

577

ಕಿಡಿ ಸಣ್ಣದನು ಮೇಲೆಬಿದ್ದ ಕೊರಡಾರಿಪುದು ।
ಸುಡುವುದಾ ಕಿಡಿಯುರಿಯೆ ನೂರು ಕೊರಡುಗಳ ॥
ಉಡುಗಿ ನಿನ್ನಾತ್ಮವಿರೆ ಬಿಡು ಹೆಗ್ಗಲಸಗಳನು ।
ತೊಡಗಾತ್ಮ ಬಲಿತಂದು - ಮಂಕುತಿಮ್ಮ ॥ ೫೭೭ ॥

ಒಂದು ಸಣ್ಣ ಬೆಂಕಿಯ ಕಿಡಿಯ ಮೇಲೆ ಮರದ ಒಂದು ದಪ್ಪ ತುಂಡು ಬಿದ್ದರೆ ಆ ಬೆಂಕಿಯ ಕಿಡಿ ಆರಿಹೊಗುತ್ತದೆ. ಆದರೆ ಆ ಕಿಡಿ ಆರದೆ ಹಾಗೆ ಉರಿದರೆ ಅಂತಹ ನೂರಾರು ಮರದ ತುಂಡುಗಳನ್ನು ಸುಟ್ಟು ಕರಕಲಾಗಿಸುವ ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ ನಿನ್ನ ಆತ್ಮ ಶಕ್ತಿ, ಧೈರ್ಯ ಎಲ್ಲವೂ ಅಡಗಿರುವಾಗ ಸುಮ್ಮನಿರು ಮತ್ತು ನಿನಗೆ ಶಕ್ತಿ ಬಲವಂದು ಆತ್ಮ ಸ್ಥೈರ್ಯ ಕೂಡಿದಾಗ, ಬೃಹತ್ಕಾರ್ಯಗಳನ್ನು ಕೈಗೊಳ್ಳು ಎಂದು ಒಂದು ವಿವೇಚನೆಯ ಮಾತನ್ನು ನಮಗೆ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

578

ಬೆಟ್ಟಕ್ಕೆ ಸನ್ನೆಹಾಕಿರುವ ಮಹದಾಶಿಗನೆ ।
ಗಟ್ಟಿಯೇ? ಸೊಟ್ಟಾಗದೇ ಸನ್ನೆಗೋಲು? ॥
ರಟ್ಟೆಯೇ ಮುರಿದೀತು ಮೈಮರೆತ ಸಾಹಸದಿ ।
ಎಷ್ಟುಚಿತವೋ ನೋಡು - ಮಂಕುತಿಮ್ಮ ॥ ೫೭೮ ॥

ಬೆಟ್ಟವನ್ನೇ ಎತ್ತಿಡಲು ಸನ್ನೆ ಕೋಲನ್ನು ಹಾಕಿರುವ, ಹೇ! ಅತಿ ಸಾಹಸಿಯೇ, ಮೊದಲು ನಿನ್ನ ಸನ್ನೆ ಕೋಲು ಗಟ್ಟಿಯೇ ಎಂದು ನೋಡಿಕೋ, ಇಲ್ಲದಿದ್ದರೆ ಅದು ಬೆಟ್ಟದ ಭಾರದಿ ಸೊಟ್ಟಗಾಗುವುದು. ಬೆಟ್ಟ ಮತ್ತು ಕೋಲು ಎರಡೂ ಗಟ್ಟಿಯಾಗಿದ್ದರೆ ಮೈಮರೆತ ಅತಿ ಸಾಹಸದಿ ನಿನ್ನ ಬುಜವೇ ಮುರಿದೀತು. ಹಾಗಾಗಿ ನಿನ್ನ ಶಕ್ತಿಯ ಔಚಿತ್ಯವನ್ನು ನೋಡಿಕೊಂಡು ಕೆಲಸವನ್ನು ಮಾಡು ಎಂದು ನಮಗೆ ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು.