Kagga Logo

Talent bud

569

573

569

ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? ।
ಮತಿಮನಂಗಳ ಕೃಷಿತಪಃಫಲವುಮಂತು ॥
ಸತತ ಕೃಷಿ, ಬೀಜಗುಣ, ಕಾಲವರ್ಷಗಳೊದವೆ ।
ಪ್ರತಿಭೆ ವಿಕಸಿತವಹುದೊ - ಮಂಕುತಿಮ್ಮ ॥ ೫೬೯ ॥

ಗಿಡಮರಗಳಿಗೆ, ಹೂ ಹಣ್ಣುಗಳನ್ನು ಬಿಡಲು ಮುಹೂರ್ತವೇನಾದರೂ ನಿಶ್ಚಿತವಾಗಿದೆಯೇನು? ಮನಸ್ಸು ಬುದ್ಧಿಗಳ ಕೃಷಿ ಮತ್ತು ತಪಸ್ಸಿನ ಫಲವೂ ಅಂತೆಯೇ. ಬೀಜದ ಗುಣ ಉತ್ತಮವಾಗಿದ್ದು, ಸಕಾಲದಲ್ಲಿ ಮಳೆಯಾಗಿ, ಮಾಡುವ ಪರಿಶ್ರಮ ಸತತವಾಗಿದ್ದರೆ ಹೇಗೆ ಒಳ್ಳೆಯ ಫಲ ಲಭ್ಯವಾಗುತ್ತದೆಯೋ ಹಾಗೆಯೇ ನಮ್ಮ ಪ್ರತಿಭೆಯನ್ನೂ ಸಹ ಸನ್ಮಾರ್ಗ, ಸತ್ಸಂಗ, ಸದ್ಭಾವದಂತಹ ಸಲಕರಣೆಗಳಿಂದ ನಿರಂತರ ಕೃಷಿಮಾಡಿದರೆ ನಮ್ಮ ಪ್ರತಿಭೆಯೂ ವಿಕಸಿತಗೊಂಡು ಸತ್ಫಲವನ್ನು ನೀಡುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

570

ವಕ್ತ್ರವುಂಟೆಲ್ಲರಿಗೆ, ವರ್ಚಸೋರೊರ್ವರಿಗೆ ।
ಕತ್ತಿ ಪಣ್ಯದೊಳುಂಟು, ಶಕ್ತಿ ಸಹಜದಲಿ ॥
ವ್ಯಕ್ತಿ ಪ್ರಭಾವೀ ಲೋಕಚರಿತೆಯ ಕೀಲು ।
ಹಸ್ತವದು ದೈವಕೆಲೊ - ಮಂಕುತಿಮ್ಮ ॥ ೫೭೦ ॥

ಎಲ್ಲರಿಗೂ ಮುಖವಿದೆ. ಆದರೆ ಲಕ್ಷಣ ಅಥವಾ ವರ್ಚಸ್ಸು ಕೇವಲ ಕೆಲವರಿಗೆ ಇದೆ. ಹಾಗೆಯೇ ಕತ್ತಿಯನ್ನು ಹಣಕೊಟ್ಟು ಕೊಳ್ಳಬಹುದು. ಆದರೆ ಅದನ್ನು ಎತ್ತಿ ಹೋರಾಡುವ ಶಕ್ತಿ ಸಹಜವಾಗಿ ವ್ಯಕ್ತಿಯಲ್ಲಿರಬೇಕು. ಅಂತಹ ವ್ಯಕ್ತಿಗಳ ಸಹಜ ಶಕ್ತಿಯಾ ಪ್ರಭಾವವೇ ಜಗತ್ತಿನ ಚರಿತ್ರೆಗೆ ಕಾರಕವಾಗಿರುತ್ತದೆ.ಈ ಜಗತ್ತನ್ನು ರೂಪಿಸುವಲ್ಲಿ ತಿದ್ದುವಲ್ಲಿ ಮತ್ತು ನಡೆಸಿಕೊಂಡು ಹೋಗುವಲ್ಲಿ ಆ ದೈವವು ಮನುಷ್ಯನ ಪ್ರಭಾವೀ ಶಕ್ತಿಯನ್ನು ತನ್ನ ಕರಣದಂತೆ ಉಪಯೋಗಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

571

ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? ।
ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ॥
ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ ।
ಅನಲನೆಲ್ಲರೊಳಿಹನು - ಮಂಕುತಿಮ್ಮ ॥ ೫೭೧ ॥

ನಿನಗೆ ಇರುವ ಕಣ್ಣು ಬಾಯಿಗಳೇ ಆ ‘ವಾಲ್ಮೀಕಿ’ ಗೂ ಇತ್ತು, ಬೇರೇನಲ್ಲ. ಆ ಮುನಿ ಬರೆದ ಕವಿತೆಗೆ ನಿನ್ನ ಮನದಲ್ಲೂ ಸ್ಥಳವಾಯಿತಲ್ಲವೇ? ಅಂತಹ ಘನ ಮಹಿಮನಲ್ಲಿ ಜ್ವಲಿಸುವ ಬೆಂಕಿ ಅಥವಾ ಜ್ಞಾನವೇ ಎಲ್ಲರೊಳೂ ಇರುತ್ತದೆ. ಆದರೆ ಕೆಲವರಲ್ಲಿ ಜಾಗೃತವಾಗಿ ಮತ್ತೆ ಕೆಲವರಲ್ಲಿ ಸುಪ್ತವಾಗಿ ಇರುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

572

ಪುರುಷಯೋಚನೆಯೆಲ್ಲ ಮುರಿದು ಮಣ್ಣಹುದೆಂದು ।
ಕೊರಗದಿರು; ಕೆಟ್ಟನೆಂದೆಂದುಮೆನ್ನದಿರು ॥
ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ? ।
ಪರವೆಯೇನಿಲ್ಲವೆಲೊ - ಮಂಕುತಿಮ್ಮ ॥ ೫೭೨ ॥

ಅಯ್ಯೋ ನಾವು ಮಾಡುವ ಯೋಚನೆಯೆಲ್ಲಾ ಯಾವುದೂ ಫಲಿಸುವುದಿಲ್ಲ ನಮ್ಮ ಪ್ರಯತ್ನವೆಲ್ಲಾ ಮಣ್ಣಾಗುವುದು ಎಂದು ಕೊರಗದೆ ಇರು. ‘ನಾ ಕೆಟ್ಟೆ’ ಎನ್ನದಿರು. ಕಡಲಿನಲ್ಲಿ ಮೀನು ಒಂದು ಹುಟ್ಟಿದರೇನು ಸತ್ತರೇನು ಕಡಲಿಗೇನೂ ವ್ಯತ್ಯಾಸವಾಗುವುದಿಲ್ಲವಲ್ಲ. ಹಾಗೆಯೇ ನಿನ್ನ ಯೋಚನೆಗೆಲ್ಲ ಒಂದು ರೂಪ ಸಿಗಲೇಬೇಕೆಂದು ನೀ ಯೋಚಿಸಬೇಡ ಎಂದು ನಮ್ಮ ಯೋಚನೆಗಳನ್ನು ಪರಿಪಕ್ವತೆಯೆಡೆಗೆ ಕೊಂಡೊಯ್ಯಲು ಒದಗುವ ವಿಚಾರ ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

573

ಹೋರಾಡು ಬೀಳ್ವನ್ನಮೊಬ್ಬಂಟಿಯಾದೊಡಂ ।
ಧೀರಪಥವನೆ ಬೆದಕು ಸಕಲಸಮಯದೊಳಂ ॥
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? ।
ಹೋರಿ ಸತ್ತ್ವವ ಮೆರಸು - ಮಂಕುತಿಮ್ಮ ॥ ೫೭೩ ॥

ಬದುಕಿನಲ್ಲಿ ಸೋತು ಬಿದ್ದು ಒಬ್ಬಂಟಿಯಾದರೂ, ಎಲ್ಲ ಸಮಯದಲ್ಲೂ ಧೈರ್ಯದ ಮಾರ್ಗವನ್ನೇ ಹುಡುಕಿ, ಹೋರಾಡು. ಸೋತೆನೆಂದು ಗೊಣಗುತ್ತ ಬಾಳುವ ಬಾಳಿಗೆ ಏನು ಬೆಲೆ? ಬದುಕಿನ ಹೋರಾಟವನ್ನು ಹೋರಾಡಿ ಬದುಕಿನ ಸತ್ವವನ್ನು ಅರಿತು ಮೆರೆಸಬೇಕು ಎಂದು ಬದುಕಿನ ಪರಿಯನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.