Growth of qualities
564
—
568
564
ಎತ್ತಲೋ ಕಾಡುಮಬ್ಬಿನ ಬಳ್ಳಿ ಮೊಗ್ಗಿನಲಿ ।
ಚಿತ್ರರಚನೆಗದೇಕೆ ತೊಡಗುವಳ್ ಪ್ರಕೃತಿ? ॥
ಕೃತ್ಯಕ್ಕೆ ತಾಂ ತರುವ ಶಕ್ತಿ ಗುಣ ಪೂರ್ಣತೆಯೆ ।
ಸಾರ್ಥಕವೊ ಜೀವಿತಕೆ - ಮಂಕುತಿಮ್ಮ ॥ ೫೬೪ ॥
ಪ್ರಕೃತಿಮಾತೆ, ಎಲ್ಲೋ ಒಂದು ಕತ್ತಲೆಯ ಕಾಡಿನಲ್ಲಿ ಒಂದು ಬಳ್ಳಿಯಲ್ಲಿ ಸುಂದರ ಹೂವನ್ನು ಚಿತ್ರದಂತೆ ರಚನೆ ಮಾಡಿ, ತನ್ನ ಶಕ್ತಿಯನ್ನು ಸಾರ್ಥಕಗೊಳಿಸುವಂತೆ, ನಾವು ಮಾಡುವ ಪ್ರತೀ ಕೆಲಸಕ್ಕೂ ಶಕ್ತಿಯನ್ನು ತುಂಬಿ ಪರಿಪೂರ್ಣತೆಯೆಡೆಗೆ ನಡೆದರೆ ನಮ್ಮ ಬದುಕಿಗೂ ಅದು ಸಾರ್ಥಕ್ಯ ಎಂದು ಬದುಕಿನ ಸಾರ್ಥಕತೆಯನ್ನು ಸಾಧಿಸುವ ಪರಿಯನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
565
ಕಾಡುಹಕ್ಕಿ ಹುಳಕ್ಕೆ ವರ್ಣಚಿತ್ರಗಳೇಕೆ?- ।
ನೋಡುವರ ಕಣ್ಣೊಲವ ಬೇಡುವಳೆ ಸೃಷ್ಟಿ? ॥
ಮಾಡುವಾ ಮಾಟಗಳನಾದನಿತು ಬೆಳಗಿಪುದು ।
ರೂಢಿಯಾ ಪ್ರಕೃತಿಯದು - ಮಂಕುತಿಮ್ಮ ॥ ೫೬೫ ॥
ಕಾಡಿನ ಹಕ್ಕಿ ಹುಳ ಹುಪ್ಪಟೆಗಳಿಗೆ ಚಿತ್ರ ವಿಚಿತ್ರವಾದ ಬಣ್ಣಗಳು ಏಕೆ ಇವೆ? ನೋಡುವವರು ಅವುಗಳನ್ನು ನೋಡಿ ಒಲವನ್ನು ತೋರಲಿ ಎಂದೇ? ಖಂಡಿತ ಅಲ್ಲ. ಕೋಟ್ಯಾಂತರ ರೂಪ ಮತ್ತು ಬಣ್ಣಗಳಲ್ಲಿ, ಚಿತ್ರ ವಿಚಿತ್ರವಾದ ವಿನ್ಯಾಸಗಳಲ್ಲಿ ಪ್ರಕಟಗೊಳ್ಳುವುದು ಪ್ರಕೃತಿಯ ಸ್ವಧರ್ಮ ಅಥವಾ ರೂಢಿ ಎಂದು ಪ್ರಕೃತಿಯ ಸ್ವಾಭಾವಿಕ ವೈವಿಧ್ಯತೆಯನ್ನು ಎತ್ತಿ ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
566
ಆರಣ್ಯಕದ ಪುಷ್ಪಗಳ ಮೂಸುವವರಾರು? ।
ಆರಿಹರು ಪತಗದುಡುಪನು ಹುಡುಕಿ ಮಚ್ಚಲ್? ॥
ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ ।
ಸ್ವಾರಸ್ಯವೆಸಗುವಳೊ! - ಮಂಕುತಿಮ್ಮ ॥ ೫೬೬ ॥
ಕಾಡಿನಲ್ಲಿನ ಪುಷ್ಪಗಳ ಸುಗಂಧವನ್ನು ಆಘ್ರಾಣಿಸುವವರು ಯಾರಿದ್ದಾರೆ? ಬಣ್ಣ ಬಣ್ಣಗಳ ಚಿತ್ತಾರಗಳನ್ನು ಹೊತ್ತ ಪತಂಗಗಳ ಹುಡುಕಿ ಹುಡುಕಿ ಮೆಚ್ಚುವವರಾರು? ಮತ್ತೊಬ್ಬರ ಮೆಚ್ಚುಗೆಗೆ ಆಸೆಪಡದೆ ಪ್ರಕೃತಿ ತಾನೇ ತೃಪ್ತಿಪಡಲು ಈ ಜಗತ್ತಿನಲ್ಲಿನ ಎಲ್ಲ ವಸ್ತುಗಳಲ್ಲೂ ಸುಂದರತೆಯನ್ನು ಪ್ರಕಟಿಸಿ ಆಕರ್ಷಣೆಯನ್ನು ಇಟ್ಟು ಜಗತ್ತನ್ನು ಮತ್ತಷ್ಟು ಸ್ವಾರಸ್ಯಕರವಾಗಿಸುತ್ತದೆ ಎಂದು ಪ್ರಕೃತಿಯ ಸಹಜ ಗುಣವನ್ನು ಪ್ರಶಂಸಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
567
ಮನದ ಭಾವಗಳ ಪೂರ್ಣದಿನೊರೆಯಲರಿತ ಕವಿ ।
ಇನಿತನುಂ ಬಿಡದೆ ರೂಪಿಸಲರಿತ ಶಿಲ್ಪಿ ॥
ಅನುರೂಪದಿಂದ ವಾಸ್ತವಗೊಳಿಪ ಕೃತಿಚತುರ ।
ಧನಿಯರಿವರೆಲ್ಲಿಹರೊ? - ಮಂಕುತಿಮ್ಮ ॥ ೫೬೭ ॥
ಮನಸ್ಸಿನಲ್ಲಿ ಬಂದ ಭಾವಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವಂತಾ ಕವಿ, ಸ್ವಲ್ಪವೂ ಕೊರತೆಯಿಲ್ಲದೆ ಕೆತ್ತಬಲ್ಲ ಶಿಲ್ಪಿ, ಯಾವುದೇ ಕೆಲಸವನ್ನು ಹಿಡಿದರೂ ಯೋಜಿಸಿದ್ದನ್ನು ಮಾಡಿಯೇ ತೀರುವ ಕಾರ್ಯ ನೈಪುಣ್ಯತೆಯನ್ನು ಹೊಂದಿರುವ ಧನಿಗಳು ಲೋಕದಲ್ಲಿ ಎಲ್ಲಿದ್ಧಾರೆ, ಎಂದು ಅಂತಹ ನೈಪುಣ್ಯತೆ ಇರುವವರೇ ಜಗತ್ತಿನಲ್ಲಿ ಧನ್ಯರು ಎಂದು ಉಲ್ಲೇಖಿಸಿದ್ದಾರೆ ಈ ಮುಕ್ತಕದಲ್ಲಿ.
568
ಮನದ ಭಾವಿತಕೊಪ್ಪುವುಪಕರಣ ನಮಗಿಲ್ಲ ।
ಎಣಿಕೆಗಳ ಪೂರಯಿಪ ಸಾಧನಗಳಿಲ್ಲ ॥
ಜನುಮಜನುಮಗಳಿಂತು ಪೇಚಾಟ, ತಿಣಕಾಟ ।
ಮುನಿಪುದಾರಲಿ, ಹೇಳು? - ಮಂಕುತಿಮ್ಮ ॥ ೫೬೮ ॥
ಮನಸ್ಸಿನಲ್ಲಿ ಮೂಡಿದ ಭಾವಗಳನ್ನು ಕಾರ್ಯರೂಪಕ್ಕೆ ತರಲು ನಮಗೆ ಅವಶ್ಯಕ ಸಾಧನಗಳಿಲ್ಲ. ಈ ಸಾಧನಗಳ ಅಥವಾ ಉಪಕರಣಗಳ ಕೊರತೆ ನಮಗೆ ಜನ್ಮ ಜನ್ಮಾಂತರದಿಂದಲೂ ಕಾಡುತ್ತಾ ಇದೆ. ಇದರಿಂದ ಪ್ರತೀ ಜನ್ಮದಲ್ಲೂ ನಮಗೆ ತಿಣುಕಾಟ ಮತ್ತು ಪೇಚಾಟಗಳು ಇದ್ದೇ ಇರುತ್ತವೆ. "ಇದು ಹೀಗೆ ಏಕಿದೆ?" ಎಂದು ನಾವು ಯಾರಲ್ಲಿ ದೂರುವುದು? ಎಂದು ತಮ್ಮಲ್ಲಿ ತಾವೇ ಪ್ರಶ್ನಿಸುತ್ತಾ ನಮ್ಮ ಮುಂದೆ ಒಂದು ಗಹನವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.