A≈õvattha tree of the world
559
—
563
559
ಪರಮಪದದಲಿ ನೋಡು; ಬೇರುಗಳ್ ವ್ಯೋಮದಲಿ ।
ಧರೆಗಿಳಿದ ಕೊಂಬುರಂಬೆಗಳು, ಬಿಳಲುಗಳು ॥
ಚಿರಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ ।
ಪರಿಕಿಸಿದರರ್ಥವನು - ಮಂಕುತಿಮ್ಮ ॥ ೫೫೯ ॥
ನಿಸರ್ಗದಲ್ಲಿ ಮರವು ಮೇಲಿದ್ದರೆ ಬೇರುಗಳು ಭೂಮಿಯ ಒಳಗೆ ಇರುತ್ತದೆ. ಆದರೆ ಜಗದ್ವೃಕ್ಷದ ಬೇರುಗಳು ಆಕಾಶದಲ್ಲಿ ಅಥವಾ ಪರಮ ಪದದಲ್ಲಿ ಇರುತ್ತದೆ. ಅವು ಪರಮ ಪದದ ಬೇರುಗಳಾದ್ದರಿಂದ ಬದುಕು ಚಿರಂತನ ಮತ್ತು ನಿರಂತರ. ಇದನ್ನು ವಿಶ್ವ ಜೀವಾಶ್ವತ್ಥ ಎಂದು ಕರೆದು ಬದುಕಿನ ಮೂಲ ಮತ್ತು ಅಗಾಧತೆಯನ್ನು ಅರುಹಿ, ಅದರ ಅರ್ಥವನ್ನು ಪರೀಕ್ಷಿಸಿ ನೋಡು ಎಂದು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು
560
ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ ।
ತೀವಿರ್ಪುದದು ಕೆಳಗೆ ನಮ್ಮ ಲೋಕದಲಿ ॥
ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು ।
ಸಾವು ಮರಕೇನಿಲ್ಲ - ಮಂಕುತಿಮ್ಮ ॥ ೫೬೦ ॥
ಜೀವನದ ಮೂಲ ಅಥವಾ ಅಧಾರ ಎಲ್ಲೋ ಮೇಲಿದೆ. ಅದು ಇರುವ ಸ್ಥಳ ಪರಮ ಊರ್ಧ್ವ. ಅದಕ್ಕಿಂತ ಮೇಲೆ ಯಾವುದೂ ಇಲ್ಲ. ಆದರೆ ಅದು ಜಗತ್ತಿನಲ್ಲಿ ಎಲ್ಲೆಲ್ಲೂ ಎಂದರೆ ನಮ್ಮ ಲೋಕದಲ್ಲೂ ವ್ಯಾಪಿಸಿಕೊಂಡಿದೆ. ನಾವುಗಳು ಈ ಜಗತ್ವೃಕ್ಷದ ಕಡ್ಡಿ ಮತ್ತು ಎಲೆಗಳು. ನಾವು ಒಣಗಿ ಬಾಡಿ ಉದುರಿದರೂ ಈ ಜಗತ್ವೃಕ್ಷಕ್ಕೆ ಸಾವು ಎಂಬುದು ಇರುವುದಿಲ್ಲ ಎಂದು ಸೃಷ್ಟಿಯ ಸೂಕ್ಷ್ಮತೆಯನ್ನು,ವ್ಯಾಪ್ತಿಯನ್ನು ಮತ್ತು ನಿರಂತರತೆಯನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
561
ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ ।
ಕಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ॥
ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ ।
ಸ್ಪಂದನವೊ ಬ್ರಹ್ಮನದು - ಮಂಕುತಿಮ್ಮ ॥ ೫೬೧ ॥
ಅಶ್ವತ್ಥ ವೃಕ್ಷವು ಒಂದು ಕಡೆ ಬಾಡಿದರೆ ಒಂದುಕಡೆ ಚಿಗುರುವುದು. ಕೆಲ ಕೊಂಬೆಗಳು ಒಣಗುತ್ತಿದ್ದರೆ ಮತ್ತೊಂದು ಕಡೆ ಮೇಲೆ(ಮುಂಡದಲಿ) ಹೊಸ ಚಿಗುರ ತಳೆಯುತ್ತದೆ. ಅದೇ ರೀತಿ ಈ ಜಗದ್ವೃಕ್ಷವೂ ಸಹ ಒಂದು ”ಲಯ”ದಲ್ಲಿ ಬದಲಾಗುತ್ತಾ, ಎಂದೆಂದೂ ಬಾಡದ, ಹಳೆಯದಾಗದ ಮತ್ತೆ ಮತ್ತೆ ಹೊಸತನವನ್ನು ತಳೆಯುವ ರೀತಿಯಲ್ಲಿದೆ ಮತ್ತು ಚಲನ ರೂಪದಲ್ಲಿರುವ ಆ ಬ್ರಹ್ಮನೇ ಈ ಜಗತ್ತು ಎಂದು ಸೃಷ್ಟಿಯ ಸ್ವರೂಪವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರ ಈ ಮುಕ್ತಕದಲ್ಲಿ.
562
ಎಲೆಗಳನು ಕಡ್ಡಿ, ಕಡ್ಡಿಯ ರಂಬೆಕೊಂಬೆಗಳು ।
ತಳೆದು ಪೆರ್ಚಿಸುತಿಹುವು ಮರದ ಬಾಳ್ಸಿರಿಯ ॥
ಸ್ಥಲವೊಂದು ನಿನಗಿಹುದು ವಿಶ್ವವೃಕ್ಷದೊಳಂತು ।
ಹಳಿಯದಿರು ನಿನ್ನಿರವ - ಮಂಕುತಿಮ್ಮ ॥ ೫೬೨ ॥
ಒಂದು ಅಶ್ವತ್ಥ ವೃಕ್ಷದಲ್ಲಿ ಎಲೆಗಳನ್ನು ಕಡ್ಡಿಗಳೂ, ಕಡ್ಡಿಗಳನ್ನು ರೆಂಬೆಗಳು, ರೆಂಬೆಗಳನ್ನು ಕೊಂಬೆಗಳೂ ತಳೆದು ಆ ಮರದ ಸೊಬಗನ್ನು ಹೆಚ್ಚಿಸುತ್ತದೆ. ಅದೇ ರೀತಿ ಈ ಜಗದ್ವೃಕ್ಷದ ಎಂದರೆ ವಿಶ್ವಜೀವನದ ವೃಕ್ಷದಲ್ಲಿ ಮತ್ತು ಅದರ ಸೊಬಗಿನಲ್ಲಿ ನಿನಗೂ ಒಂದು ಪಾತ್ರವಿದೆ. ಹಾಗಾಗಿ ನಿನ್ನ ಬಾಳನ್ನು ನೀ ಜರಿಯದಿರು, ಹಳಿಯದಿರು ಎಂದು ಜಗತ್ತಿನಲ್ಲಿ ಜನಿಸುವ ಪ್ರತೀ ಜೀವಿಯ ಪಾತ್ರದ ಕುರಿತು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
563
ಬಿಳಲಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ ।
ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ॥
ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ ।
ತಿಳಿದದನು ನೆರವಾಗು - ಮಂಕುತಿಮ್ಮ ॥ ೫೬೩ ॥
ಈ ಜಗದ್ವೃಕ್ಷದಲ್ಲಿ ನೀನು ಬಿಳಲಲ್ಲ, ಬೇರಲ್ಲ,ಮುಂಡವಲ್ಲ,ಕಾಂಡವಲ್ಲ,ಚಿಗುರಲ್ಲ,ಹೂವಲ್ಲ,ಕಾಯಿ ಹಣ್ಣೂ ಅಲ್ಲ. ಆ ವೃಕ್ಷದ ಸಹಸ್ರಾರು ಎಲೆಗಳಲ್ಲಿ ನೀನೂ ಸಹ ಒಂದು ಎಲೆ. ‘ನಾನೇ’ ಎನ್ನುವ ಭಾವ ಬಿಟ್ಟು ‘ ನಾನೂ ಎಲ್ಲರಂತೆ’ ಎಂದು ಈ ಬದುಕೆಂಬ ವೃಕ್ಷದಲ್ಲಿ ಒಂದಾಗಿ ಆ ವೃಕ್ಷಕ್ಕೆ ನೆರವಾಗು ಎಂದರೆ ಒಟ್ಟಾರೆ ಬದುಕಿಗೆ ಪೂರಕವಾಗಿ ಜೀವಿಸು ಎಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.