Inner light
554
—
558
554
ತಿಳಿವಿಗೊಳಿತೆನಿಸುದುದು ನಡೆಯೊಳೇತಕ್ಕರಿದು? ।
ಕುಳಿ ಮೇಡು ದೂರ ಮತಿಮನಸುಗಳ ನಡುವೆ ॥
ಒಳಗಿನಾಯೆಣ್ಣೆ ಬತ್ತಿಗಳೆರಡುಮೊಡವೆರೆಯೆ ।
ಬೆಳಕು ಜೀವೋನ್ನತಿಗೆ - ಮಂಕುತಿಮ್ಮ ॥ ೫೫೪ ॥
ನಮ್ಮ ಅರಿವಿಗೆ ಒಳಿತು ಎನಿಸಿದ್ದು ನಮ್ಮ ನಡತೆಯಲ್ಲಿರುವುದಿಲ್ಲ ಏಕೆ? ನಮಗಿರುವ ತಿಳುವಳಿಕೆ ಮತ್ತು ಮನಸ್ಸಿನ ನಡುವೆ ಬೆಟ್ಟ ಮತ್ತು ಕಮರಿಗಳಷ್ಟು ಅಂತರವಿದೆ. ನಮ್ಮ ಅರಿವು ಮತ್ತು ಮನಸ್ಸುಗಳು ದೀಪದ ಎಣ್ಣೆ ಮತ್ತು ಬತ್ತಿಗಳಂತೆ ಒಂದಕ್ಕೊಂದು ಪೂರಕವಾಗಿದ್ದರೆ ನಮ್ಮ ಜೀವದ ಉನ್ನತಿಗೆ ಬೆಳಕಾಗುತ್ತದೆ ಎಂದು ಮತಿ ಮನಸ್ಸುಗಳ ಪೂರಕತೆಯ ಅವಶ್ಯಕತೆಯನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
555
ಧರ್ಮಸಂಕಟದಿ ಮನ ತಲ್ಲಣಿಸುತಿರುವಂದು ।
ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು ॥
ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ ।
ನೆಮ್ಮಲಿನ್ನೇನಿಹುದೊ? - ಮಂಕುತಿಮ್ಮ ॥ ೫೫೫ ॥
ಮನದಲ್ಲಿ ಮೂಡುವ ಭಾವಗಳಲ್ಲಿ, ಅದೋ-ಇದೋ, ಹೇಗೊ-ಹಾಗೋ ಎಂದು ದ್ವಂದ್ವಗಳಲ್ಲಿ ಸಿಲುಕಿದಾಗ ವಿಷಯದ ಮಂಥನ ಅಂತರಂಗದಲ್ಲಿ ಮಾಡಿ ಸರಿಯಾದ ನಿರ್ಣಯವನ್ನು ತೆಗೆದುಕೋ. ಮಮತೆಯನ್ನು ತೊರೆದು ವಿವೇಕದಿಂದ ತೆಗೆದುಕೊಂಡ ನಿರ್ಣಯಗಳನ್ನು ನೀನು ನೆಚ್ಚಿಕೊ ಮತ್ತು ನಂಬಿಕೋ ಎಂದು ಒಂದು ಕ್ರಮವನ್ನು ಆದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
556
ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ ।
ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ॥
ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ ।
ಸತ್ತ್ವದಚ್ಛಿನ್ನ ಝರಿ - ಮಂಕುತಿಮ್ಮ ॥ ೫೫೬ ॥
ಬದುಕಿನಲ್ಲಿ ನಮ್ಮ ಶಕ್ತಿಗೆ ಮೀರಿದ ಪರೀಕ್ಷೆಯಾದರೆ ಮತ್ತು ನಾವು ಎದುರಿಸುವ ವಿಷಮ ಪರಿಸ್ಥಿತಿಗಳಿಂದ ನಮ್ಮ ಮನದಲ್ಲಿ ನಮಗೆ ಅರ್ಥವಾಗದ ಮತ್ತು ಉತ್ತರವೇ ಸಿಗದ ‘ಏಕೆ ಹೀಗೆ?’ ‘ಇದು ಏನು?’ ‘ಪರಿಹಾರವೇನು?" ಎಂಬಂತಹ ಪ್ರಶ್ನೆಗಳು ಉದ್ಭವವಾದಾಗ, ಅಂತರ್ಮುಖಿಗಳಾದರೆ ನಮಗೆ ಅಲ್ಲಿ ನಿರಂತರ ಹರಿಯುವ ಜ್ಞಾನದ ಝರಿ ಕಾಣುತ್ತದೆ ಮತ್ತು ಆ ಜ್ಞಾನದ ಝರಿಯಲ್ಲಿ ಮಿಂದಾಗ, ಚಿತ್ತ ಹರ್ಶಿತವಾಗುತ್ತದೆ ಎಂದು ಅಂತರಂಗದ ಶಾಂತಿಯ ಉಪಾಯವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
557
ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ ।
ಚಿಂತೆ ಕುಮುಲದು, ಹೊಗೆಗಳೊತ್ತವಾತ್ಮವನು ॥
ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೊಲೆ ಕಿಟಿಕಿಯುಂ ।
ಸಂತತದಪೇಕ್ಷಿತವೊ - ಮಂಕುತಿಮ್ಮ ॥ ೫೫೭ ॥
ಅಂತರ್ಮುಖಿಗಳಾದಾಗ, ನಮಗೆ ನಮ್ಮ ಅಂತರಂಗದಲ್ಲಿ ನಡೆಯುವ ವಿಧ್ಯಮಾನಗಳ ಅರಿವಾಗುತ್ತದೆ. ಮನವನ್ನು ಮುಕ್ತವಾಗಿಡದೆ ಎಲ್ಲ ಕದ-ಕಿಟಕಿಗಳನ್ನು ಮುಚ್ಚಿಕೊಂಡುಬಿಟ್ಟರೆ ನಮ್ಮ ಚಿಂತೆ ಒಳಗೊಳಗೇ ಸುಟ್ಟು ಹೊಗೆಯಾಡುತ್ತದೆ ಮತ್ತು ಆ ಹೊಗೆಯ ದಟ್ಟತೆಯಲ್ಲಿ ಅಶಾಂತಿಯಿಂದ ಮನಸ್ಸು ಬುದ್ಧಿ ಆತ್ಮಗಳು ಸೊರಗುತ್ತವೆ. ಹಾಗಾಗಿ ನಮಗೆ ನಿರಂತರದ ಶಾಂತಿ ಬೇಕಿದ್ದಲ್ಲಿ ಮನದ ಗೋಡೆಯಲ್ಲಿ ಕಿಟಕಿಗಳಿರಬೇಕು ಎಂದು ಒಂದು ಸಂದೇಶವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
558
ಆಳವನು ನೋಡಿ ಬಗೆದಾಡುವ ಮಾತಿಂಗೆ ।
ರೂಢಿಯರ್ಥವದೊಂದು ಗೂಡಾರ್ಥವೊಂದು ॥
ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು ।
ಕೋಲು ಹುಟ್ಟೊಂದು ಬಲ - ಮಂಕುತಿಮ್ಮ ॥ ೫೫೮ ॥
ನಾವು ಕೇಳುವ ಮಾತನ್ನು ಆಳವಾಗಿ ಪರೀಕ್ಷಿಸಿ ನೋಡಿದರೆ, ಮೇಲುನೋಟಕ್ಕೆ ಒಂದು ಅರ್ಥ ಕಂಡರೆ, ಒಳನೋಟಕ್ಕೆ ಬೇರೆ ಅರ್ಥವಿರುವುದು. ಸಾಗರವ ದಾಟುವ ಹಡಗಿಗೆ ಮೇಲಿಂದ ದಿಕ್ಕನ್ನು ಸೂಚಿಸುವ ಹಾಯಿ ಅಥವಾ ಗಾಳಿಪಟದ ಮತ್ತು ಅಡಿಯಲ್ಲಿ ಬಲದಿಂದ ಹಾಕುವ ಹುಟ್ಟಿನ ಬಲವಿದ್ದಂತೆ, ನಾವು ಆಡುವ ಅಥವಾ ಕೇಳುವ ಮಾತಿಗೆ ರೂಢಿಯಲ್ಲಿರುವ ಅರ್ಥವು ಒಂದಿದ್ದರೆ ಗಹನವಾದ ವಿಚಾರದಿಂದ ಕೂಡಿದ ಮತ್ತೊಂದು ಅರ್ಥವಿರುತ್ತದೆ, ಎಂದು ಮಾತು ಮತ್ತು ಅದರ ಅರ್ಥದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.