Law of harmony
549
—
553
549
ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು ।
ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ ॥
ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು ।
ಅದಟದಿರು ನೀನವನ - ಮಂಕುತಿಮ್ಮ ॥ ೫೪೯ ॥
ವಿಧಿಗೆ ತನ್ನದೇ ಆದ ಕಾರ್ಯದ ಒಂದು ನಕ್ಷೆಯಿದೆ. ನೀನು ನಿನ್ನ ವಿಧಿಗೆ ಅಧಿಕಾರಿಯಲ್ಲ. ಆ ವಿಧಿ ಬೆಪ್ಪನಲ್ಲ. ವಿಧಿ ನಿನ್ನ ಜೀವನವನ್ನು ಹದವರಿತು ಸೂಕ್ತವಾಗಿ ಸರಿಪಡಿಸುವ (ಕುದುರಿಸುವ). ನೀನು ಅವನನ್ನು ಗದರಿಸದೆ ಇರು ಎಂದು ವಿಧಿಯಾಟದ ಲಕ್ಷಣವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
550
ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ ।
ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ॥
ಕೀಳ ಮೇಲಾಗಿಪನು ಮೇಲ ಕೀಳಾಗಿಪನು ।
ತಾಳುಮೆಯಿನಿರು ನೀನು - ಮಂಕುತಿಮ್ಮ ॥ ೫೫೦ ॥
ಆ ವಿಧಿರಾಯ ಪ್ರತಿಯೊಬ್ಬರ ಬದುಕಿನಲ್ಲೂ ನಮ್ಮ ಅರಿವಿಗೆ ಬಾರದಂತೆಯೇ ಹೇಳ ಕೇಳದೆಯೇ ಕೆಲವು ಬಾರಿ ತಡೆದು ಮೆಲ್ಲ ಮೆಲ್ಲನೆ ತನ್ನ ಪ್ರಭಾವವನ್ನು ತೋರಿದರೆ,ಮತ್ತೆ ಕೆಲವು ಬಾರಿ ರಭಸದಿಂದ ಬದುಕನ್ನು ಬುಡಮೇಲಾಗಿಸುವನು. ಅದನ್ನು ತಡೆಯಲು ನಮ್ಮಿಂದಾಗುವುದಿಲ್ಲವಾದ್ದರಿಂದ ಸಹನೆಯಿಂದ ಇರುವುದೇ ಸರಿಯಾದ ದಾರಿ ಎಂದು ವಿಧಿಯ ಆಟವನ್ನು ಮತ್ತು ಅದನ್ನು ಸಹಿಸುವ ಪರಿಯನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
551
ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ ।
ಸನ್ನಾಹ ಸಾಗೀತೆ? ದೈವವೊಪ್ಪೀತೆ? ॥
ಮನ್ನಿಸಲಿ ವಿಧಿ ನಿನ್ನ ಬೇಡೀಕೆಯ, ಭಿನ್ನಿಸಲಿ ।
ನಿನ್ನ ಬಲವನು ಮೆರಸೊ - ಮಂಕುತಿಮ್ಮ ॥ ೫೫೧ ॥
ನಾವು ಹೊತ್ತು ತಂದ ವಿಧಿಯ ಹೊರೆಯನ್ನು ನಾವು ಹೊರದೆ ದೈವದ ಭುಜಕ್ಕೆ ಏರಿಸುವ ಪ್ರಯತ್ನ ಸರಿಯಾದೀತೆ? ಅದನ್ನು ದೈವವಾದರೂ ಒಪ್ಪೀತೆ? ನಾವು ನಮ್ಮ ಭಾರವನ್ನು ದೈವಕ್ಕೆ ಹೊರಿಸಲು ಪ್ರಯತ್ನಿಸಿದಾಗ ಅದನ್ನು ದೈವ ಮನ್ನಿಸಲಿ ಅಥವಾ ತಿರಸ್ಕರಿಸಲಿ, ನಾವು ಮಾತ್ರ ನಮಗೆ ದೈವವಿತ್ತಿರುವ ಶಕ್ತಿಯನ್ನು ಉಪಯೋಗಿಸಿ ನಮ್ಮ ಭಾರವನ್ನು ಹೊರವ ಪ್ರಯತ್ನವನ್ನು ಮಾಡಬೇಕು ಎಂದು ವಿಧಿ, ಪುರುಷ ಪ್ರಯತ್ನ ಮತ್ತು ದೈವ ಕೃಪೆಗಳನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
552
ಶ್ರುತಿಯರ್ಥ ವಿಶದವಪ್ಪುದು ಪುರುಷಭಾಷ್ಯದಿಂ ।
ಶ್ರುತಿಮತಿಗಳನ್ಯೋನ್ಯಪರಿಪೂರಕಂಗಳ್ ॥
ಯತಿಯೊಳವು ಸೇರಿರಲು ಸತ್ಯದರ್ಶನ ನಿನಗೆ ।
ಕೃತ ಸಮನ್ವಯನಾಗು - ಮಂಕುತಿಮ್ಮ ॥ ೫೫೨ ॥
ಶ್ರುತಿಯ (ವೇದದ) ಅರ್ಥವು, ಅದನ್ನು ಜಿಜ್ಞಾಸೆಗೊಳಪಡಿಸಿದಾಗ ತಿಳಿಯಾಗುತ್ತದೆ. ಹಾಗೆ, ಕೇಳಿದ ವಿಷಯ ನಮ್ಮ ಮನಸ್ಸಿನಲ್ಲಿ ಜಿಜ್ಞಾಸೆಯನ್ನುಂಟುಮಾಡಿದ್ದಾಗ ಮತ್ತು ಕೇಳಿದ ವಿಷಯ ಮತ್ತು ನಾವು ಅರಿತುಕೊಂಡದ್ದು ಒಂದಕ್ಕೊಂದು ಪೂರಕವಾಗಿ ಸೇರಿದರೆ ನಮಗೆ ಸತ್ಯದ ದರ್ಶನವಾಗುತ್ತದೆ. ಹಾಗೆ ನಮಗೆ ದೃಗ್ಗೋಚರವಾದ ಸತ್ಯವನ್ನು ನಾವು ಕೃತಿಯಲ್ಲಿ ಅಳವಡಿಸಿಕೊಂಡು,’ಕೃತಸಮನ್ವಯ’ರಾಗಬೇಕು ಎಂದು ಮಾನ್ಯ ಗುಂಡಪ್ಪನವರು ನಮಗೆ ತಿಳಿಸಿದ್ದಾರೆ ಈ ಮುಕ್ತಕದಲ್ಲಿ.
553
ಚೂರುಗಳು ಹದಿನಾರು ಚಂದ್ರಮಂಡಲಕಂತೆ ।
ನೂರಾರು ಚೂರುಗಳು ಸತ್ಯಚಂದ್ರನವು ॥
ಸೇರಿಸುತಲವುಗಳನು ಬಗೆಯರಿತು ಬೆಳಸುತಿರೆ ।
ಸಾರ ಋತಪೂರ್ಣಿಮೆಯೊ - ಮಂಕುತಿಮ್ಮ ॥ ೫೫೩ ॥
ಚಂದಿರ ಅಮಾವಾಸ್ಯೆಯಿಂದ ಹಿಡಿದು ಹುಣ್ಣಿಮೆಯ ತನಕ ಹದಿನಾರು ದಿನ ಪ್ರತಿನಿತ್ಯ ನಮಗೆ ಒಂದೊಂದು ಚೂರಾಗಿ ಕಂಡು ಮತ್ತು ಪ್ರತಿನಿತ್ಯ ಆ ಚೂರುಗಳು ಬೆಳೆದು ಹುಣ್ಣಿಮೆಯಂದಿಗೆ ಪೂರ್ಣಚಂದ್ರನಾಗಿ ಬೆಳಗುವಂತೆ ನಾವು ಕಂಡುಕೊಳ್ಳುವ ಸಾವಿರಾರು ಚಿಕ್ಕ ಚಿಕ್ಕ ಸತ್ಯಗಳನ್ನು ಒಟ್ಟುಗೂಡಿಸುತ್ತಾ ಹೋದರೆ ಎಂದೋ ಒಂದು ದಿನ ನಮಗೂ ಅಂತರಂಗದಲ್ಲಿ ಪೂರ್ಣರೂಪದಲ್ಲಿ ಸತ್ಯದರ್ಶನವಾದೀತು ಎಂದು ಸತ್ಯಾನ್ವೇಷಣೆಯ ಮಾರ್ಗವನ್ನು ನಮಗೆ ತಿಳಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.