Kagga Logo

Greatness of the mind

544

548

544

ಅನುಭವದ ಪಾಲೊಳು ವಿಚಾರ ಮಂಥನವಾಗೆ ।
ಜನಿಯಿಕುಂ ಜ್ಞಾನನವನೀತವದೆ ಸುಖದಂ ॥
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ ।
ನಿನಗೆ ಧರುಮದ ದೀಪ - ಮಂಕುತಿಮ್ಮ ॥ ೫೪೪ ॥

ಅನುಭವವೆಂಬ ಹಾಲನ್ನು ವಿಚಾರವೆಂಬ ಕಡಗೋಲಿನಿಂದ ಮಥಿನಗೊಂಡು ಜ್ಞಾನವೆಂಬ ಬೆಣ್ಣೆ ಹೊರಬಂದಾಗ ಅದು ಸುಖವನ್ನು ನೀಡುತ್ತದೆ. ಪುಸ್ತಕದ ಜ್ಞಾನ ಗಿಳಿ ಪಾಠವಿದ್ದಂತೆ. ಹಾಗಾಗಿ ನಿನಗೆ ನಿನ್ನ ಜೀವನಾನುಭವವೇ ಧರ್ಮದ ದರ್ಶನ ಮಾಡಿಸುವಂತಹ ದೀಪ ಎಂದು ಬಾಳಿನ ಪರಮ ಸತ್ಯವನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

545

ಬುದ್ಧಿಪ್ರಕಾಶದಿಂದಂತರನುಭವಶೋಧೆ ।
ಸಿದ್ಧವಾ ಶೋಧೆಯಿಂ ಸತ್ಯಸಂವೀಕ್ಷೆ ॥
ಶುದ್ಧಸತ್ಯವ ಜೀವಿತಪ್ರಶ್ನೆಗನ್ವಯಿಪ ।
ಪದ್ಧತಿಯೆ ಧರ್ಮವೆಲೊ - ಮಂಕುತಿಮ್ಮ ॥ ೫೪೫ ॥

ನಮ್ಮ ಅಂತರಂಗದ ಅನುಭವವು ಬುದ್ಧಿಯಿಂದ ಜಿಜ್ಞಾಸೆಗೆ ಒಳಪಟ್ಟಾಗ ಅದು ಬೆಳಗಿ ಆ ಬೆಳಕಿನಲ್ಲಿ ಅರಿವು ಅರಳಿ, ಮತ್ತಷ್ಟು ಶೋಧನೆ ನಡೆದಾಗ ಸತ್ಯವು ಗೋಚರವಾಗುತ್ತದೆ. ಆ ಶುದ್ಧ ಸತ್ಯವನ್ನು ನಮ್ಮ ಬದುಕಿನ ಹಲವಾರು ಪ್ರಶ್ನೆಗಳಿಗೆ ಅನ್ವಯಿಸುವ ಪದ್ದತಿಯೇ ಧರ್ಮ ಎಂದು ನಮ್ಮ ಅಂತರಂಗದಲ್ಲಿ ನಡೆಯ ಬೇಕಾದ ಜಿಜ್ಞಾಸೆಗೆ ಒಂದು ಮಾರ್ಗವನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

546

ಶೀಯನಾಯುವ ಬಲವ ಜಯವ ಬೇಡಿರ್ದೊಡಂ ।
ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ ॥
ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು ।
ಶ್ರೇಯಸ್ಸು ಧೀಮಹಿಮೆ - ಮಂಕುತಿಮ್ಮ ॥ ೫೪೬ ॥

ಶ್ರೇಯಸ್ಸನ್ನು ಬಯಸಿ ಅದರಿಂದ ಬಲವನ್ನು ಮತ್ತು ಯಶಸ್ಸನ್ನು ಬೇಡುವುದಕ್ಕೆ ‘ಗಾಯತ್ರಿ’ಮಂತ್ರವನ್ನೇ ಪರಮೋಚ್ಚ ಮಂತ್ರವೆಂದು ಕಂಡುಕೊಂಡ ನಮ್ಮ ಸನಾತನದ ಪೂರ್ವಜರು, ನಮ್ಮ ಬುದ್ಧಿ ತೀಕ್ಷ್ನಗೊಳ್ಳಲಿ, ಮತ್ತಷ್ಟು ಮೊನಚಾಗಲಿ, ಎಂದು ಪ್ರತಿನಿತ್ಯವೂ ಬೇಡಿದರು. ಏಕೆಂದರೆ ಧೀ ಎಂದರೆ ಉತ್ತಮ ಬುದ್ಧಿಮತ್ತೆಯೇ ಮನುಷ್ಯನ ಶ್ರೇಯಸ್ಸಿಗೆ ದಾರಿ ಎಂದು ‘ಧೀ’ ಮಹಿಮೆಯನ್ನು ಈ ಮುಕ್ತಕದಲ್ಲಿ ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.

547

ಮತಿ ನಯನದಂತೆ ಮುಂದಿರ್ಪುದನು ನೋಡುವುದು ।
ಮಿತವದರ ಕೆಲಸ, ಹೆಳವನ ಚಲನೆಯಂತೆ ॥
ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ ।
ಮತಿಬಿಟ್ಟ ಮನ ಕುರುಡು - ಮಂಕುತಿಮ್ಮ ॥ ೫೪೭ ॥

ನಮ್ಮ ಬುದ್ಧಿಯು ಕಣ್ಣುಗಳ ಮೂಲಕ ಮುಂದಿರುವುದನ್ನು ನೋಡುತ್ತದೆ. ಕುಂಟನ ಚಲನೆಯಂತೆ ಬುದ್ಧಿಯ ಕೆಲಸವೂ ಮಿತವಾದದ್ದು. ಮನಸ್ಸೇ ಅದಕ್ಕೆ ಕಾಲು. ಮನಸ್ಸಿನ ಶಕ್ತಿಯಿಂದಲೇ ಬುದ್ಧಿಯೂ ನಡೆಯುತ್ತದೆ. ಆದರೆ ಬುದ್ಧಿಯ ಬಲವಿಲ್ಲದ ಮನಸ್ಸು ಕೇವಲ ಕುರುಡು ಎಂದು ಮನಸ್ಸು ಬುದ್ಧಿಗಳ ಪರಸ್ಪರ ಸಂಬಂಧವನ್ನು ನಮಗೆ ಅರುಹಿದ್ದಾರೆ ಈ ಮುಕ್ತಕದಲ್ಲಿ.

548

ಪುರುಷಬುದ್ಧಿಯೆ ಸಾಕು ವರಸಿದ್ಧಿಗೆಂದಲ್ಲ ।
ಪರಮೇಶಕರುಣೆಯನವಶ್ಯವೆಂದಲ್ಲ ॥
ಚರಣ ನಡೆವನಿತು ಕಣ್ಣರಿವನಿತು ದೂರ ನೀಂ ।
ಚರಿಸದಿರೆ ಲೋಪವಲ? - ಮಂಕುತಿಮ್ಮ ॥ ೫೪೮ ॥

ಜಗತ್ಸೃಷ್ಟಿಯ ಕರ್ತೃವನ್ನು ಅರಿಯಲು ನಮ್ಮ ಬುದ್ಧಿಯಷ್ಟೆ ಸಾಕು ಎಂದುಕೊಳ್ಳಲಾಗುವುದಿಲ್ಲ ಅಥವಾ ಆ ಪರಮೇಶ್ವರನ ಕೃಪೆಯ ಅವಶ್ಯಕತೆ ಇಲ್ಲವೆಂದು ಅಂದುಕೊಳ್ಳಲಾಗುವುದಿಲ್ಲ. ದೇಹದಲ್ಲಿ ಶಕ್ತಿಯಿರುವಷ್ಟು ಮತ್ತು ವಸ್ತು ವಿಷಯಗಳನ್ನು ನಮ್ಮ ದೃಷ್ಟಿಯಿಂದ ಎಷ್ಟು ಅರ್ಥಮಾಡಿಕೊಳ್ಳಲಾಗುವುದೋ ಅಷ್ಟನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡದಿದ್ದರೆ, ಅದು ನಮ್ಮ ಕರ್ತವ್ಯದಲ್ಲಿ ಲೋಪವಾಗುತ್ತದೆ ಎಂದು ಪುರುಷ ಪ್ರಯತ್ನ ಮತ್ತು ಪರಮಾತ್ಮನ ಕೃಪೆಗಳ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.