Churning of the heart
613
—
618
613
ನಯನಯುಗದಿಂ ಜಗವ ಪೊರೆದು, ನಿಟಿಲಾಕ್ಷಿಯಿಂ ।
ಲಯವಡಿಸುವುದದೇನು ಶಿವಯೋಗಲೀಲೆ? ॥
ಜಯಿಸಿ ಮದನನ ಬಳಿಕ ತನ್ನೊಡಲೊಳ್ ಉಮೆಯನ- ।
ನ್ವಯಿಸಿಕೊಂಡಿಹುದೇನು? - ಮಂಕುತಿಮ್ಮ ॥ ೬೧೩ ॥
ಈ ಜಗತ್ತನ್ನು ತನ್ನ ಎರಡೂ ಕಣ್ಣುಗಳಿಂದ ಶಾಂತ ನೋಟದಿಂದ ನೋಡುತ್ತಾ, ಪೊರೆಯುತ್ತಾ, ಹಣೆಯ ಕಣ್ಣಿಂದ ಲಯ ಕಾರ್ಯದಲ್ಲಿ ನಿರತನಾಗಿರುವವನು ಶಿವ. ಎರಡೂ ಕೆಲಸಗಳನ್ನು ಸಮತೆಯಿಂದ ಸಮಭಾವದಿಂದ ಮಾಡುವುದೇ ಶಿವಯೋಗಲೀಲೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಒಂದು ಕಡೆ ಕಾಮನನ್ನು ತನ್ನ ಒಳಗಣ್ನಿಂದ ಸುಟ್ಟು ಅದೇ ರೀತಿ ಪಾರ್ವತಿಯನ್ನು ತನ್ನ ಅರ್ಧಾಂಗಿಯನ್ನಾಗಿಸಿಕೊಂಡು” ಅರ್ಧನಾರೀಶ್ವರ” ನೆಂದು ಕರೆಯಲ್ಪಟ್ಟಿದ್ದಾನೆ. ಒಂದರೊಳಗಿದ್ದುಕೊಂಡು ಅದನ್ನೇ ಜಯಿಸಿ ಬದುಕಿನಲ್ಲಿ ಸಮನ್ವಯವನ್ನು ಕಂಡುಕೊಳ್ಳುವ ವಿಧಾನವನ್ನು ದೃಷ್ಟಾಂತ ಸಹಿತ ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
614
ಮಾರನಂ ದಂಡಿಸಿರೆ ಗೌರಿಯಿಂ ಭಯವೇನು? ।
ಚಾರುಸಹಕಾರಿಯವಳೆಂದು ಶಿವನೊಲಿದನ್ ॥
ಮೀರೆ ಮೋಹವನು ಸಂಸಾರದಿಂ ಭಯವೇನು? ।
ದಾರಿ ಕೆಳೆಯದು ನಿನಗೆ - ಮಂಕುತಿಮ್ಮ ॥ ೬೧೪ ॥
ಮನ್ಮಥನನ್ನುಸುಟ್ಟರೆ ಗೌರಿಯಿಂದ ಭಯವೇನು? ಮನೋಹರ ಮಾನಸಳು ಅವಳೆಂದು ಪಾರ್ವತಿಗೆ ಒಲಿದಿಹನು,ಶಂಕರ. ಹಾಗೆಯೇ ಸಂಸಾರದಲ್ಲಿರುವವರಿಗೆ ಮೋಹವನ್ನು ತೊರೆದ ಮೇಲೆ ಭಯವಿರುವುದಿಲ್ಲ. ಮೋಹರಹಿತವಾದ ಮಾರ್ಗವು ನಮಗೆ ಸನ್ನಿಹಿತವಾಗಿ ಸ್ನೇಹಿತನಂತೆ ಭವದ, ಅಂದರೆ ಸಂಸಾರದ ಹಾದಿಯನ್ನು ಸವೆಸಲು ಸಹಕಾರಿಯಾಗಿರುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
615
ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ, ಮೊದಲು ।
ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ॥
ಬಾಳನೀ ಜಗದ ಮಂತುವು ಕಡೆಯಲೇಳುವುದು ।
ಆಳದಿಂದಾತ್ಮಮತಿ - ಮಂಕುತಿಮ್ಮ ॥ ೬೧೫ ॥
ಹಾಲನ್ನು ಕಾಯಿಸಿ, ಅದಕ್ಕೆ ಹೆಪ್ಪನ್ನು ಸೇರಿಸಿ ಅದು ಮೊಸರಾದಮೇಲೆ ಕಡೆದರೆ, ಮೊದಲು ಕಾಣದೆ ಇದ್ದ ಬೆಣ್ಣೆ, ತೇಲಿ ಮೇಲೆ ಬರುವಂತೆ ನಮ್ಮ ಬದುಕನ್ನು ಈ ಜಗತ್ತಿನಲ್ಲಿ ನಮಗಾಗುವ ಅನುಭವಗಳೆಂಬ ಕಡಗೋಲಿನಿಂದ ಕಡೆದಾಗ ನಮ್ಮೊಳಗಿಂದಲೇ ‘ಆತ್ಮಮತಿ’ ಹೊರಬರುತ್ತದೆ ಎಂದು ಬದುಕಿನ ಬವಣೆಗಳಿಂದ ನಾವು ಪಡೆಯಬಹುದಾದ ಜ್ಞಾನದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
616
ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ ।
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ॥
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ ।
ಶಕ್ತಿಯಧ್ಯಾತ್ಮಕದು - ಮಂಕುತಿಮ್ಮ ॥ ೬೧೬ ॥
ಹೊಟ್ಟೆಪಾಡಿನ ದಾರಿ ಮತ್ತು ಪರಮಾರ್ಥದ ಹಾದಿ ಎರಡೂ ಬೇರೆಬೇರೆಯಲ್ಲ. ಬೇರೆಬೇರೆಯಂತೆ ಕಂಡರೂ ಈ ಹಾದಿಗೆ ಅಂಚುಗಳೊಂದೆ. ಲೋಕದ ಬದುಕಿನಿಂದಲೇ ಸತ್ಯ ಶೋಧನೆಯಾಗಬೇಕು. ಅಂತಹ ಪ್ರಯತ್ನದಿಂದ ನಮ್ಮ ಅಧ್ಯಾತ್ಮಿಕ ಬದುಕಿಗೆ ಶಕ್ತಿ ಹೆಚ್ಚಾಗುತ್ತದೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
617
ಧ್ವನಿತ ಪ್ರತಿಧ್ವನಿತ ಮನುಜಜೀವಿತವೆಲ್ಲ ।
ಕುಣಿವುದವನೆದೆ ಜಗತ್ಪ್ರಕೃತಿ ಪಾಡುವವೊಲ್ ॥
ಇನಿದಕೊಲವಳಲಿಗನುತಾಪ; ಸೆಣಸಿಗೆ ಬೀರ ।
ಘನಗರ್ಜಿತಕೆ ದೈನ್ಯ - ಮಂಕುತಿಮ್ಮ ॥ ೬೧೭ ॥
ಜಗತ್ತಿನ ಪ್ರಕೃತಿ ಜನ್ಯವಾದ ತ್ರಿಗುಣಗಳಿಗನುಸಾರವಾಗಿ ಮನುಷ್ಯನ ಎದೆಯಲ್ಲಿ ಉಂಟಾಗುವ ಭಾವನೆಗಳಿಂದ ಇವನು ಧ್ವನಿಗೆ ಪ್ರತಿಧ್ವನಿ ಎಂದರೆ ಕ್ರಿಯೆಗೆ ಒಂದು ಪ್ರತಿಕ್ರಿಯೆ ತೋರುತ್ತಾನೆ. ಪ್ರೀತಿ ತೋರಿದರೆ ಪ್ರೀತಿ, ದುಃಖದಲ್ಲಿ ಮರುಕ ಅಥವಾ ಅನುಕಂಪ, ಹೋರಾಟದಲ್ಲಿ ಧೈರ್ಯ, ಘೋರ ಘರ್ಜನೆಗೆ ದೈನ್ಯತೆಯನ್ನು ತೋರುತ್ತಾನೆ ಎಂದು ವಸ್ತು ವಿಷಯ ಮತ್ತು ವ್ಯಕ್ತಿಗಳ ಕುರಿತು ಮನುಷ್ಯನ ಪ್ರತಿಕ್ರಿಯೆಯ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
618
ಜಗದ ಸಂತಾಪ ಸಂತಸ ಸಂಭ್ರಮಂಗಳುಲಿ ।
ಬಗಿದು ನರನೆದೆಯ, ಜೀವವ ಪಿಡಿದು ಕುಲುಕೆ ॥
ಸೊಗಯಿಪುದು ಮನಸಿಗದು ಕವಿಕಲಾರಸಿಕರ್ಗೆ ।
ಜಗ ಸೂರ್ಯ ನೀಂ ಕಮಲ - ಮಂಕುತಿಮ್ಮ ॥ ೬೧೮ ॥
ಈ ಜಗತ್ತಿನ ಬದುಕಿನಲ್ಲಿ ಮನುಷ್ಯರು ಅನುಭವಿಸುವ ದುಃಖ ಸಂತೋಷ ಮತ್ತು ಸಂಭ್ರಮಗಳ ಭಾವಗಳು ನರನ ಹೃದಯದೊಳಕ್ಕೆ ನುಗ್ಗಿ, ಅವನನ್ನು ಹಿಗ್ಗಿಸಿ, ಸಂಭ್ರಮಿಸಿ ಕುಲುಕಿ, ಕಲಕಿ, ಹಿಂಡಿ, ಹಿಪ್ಪೆ ಮಾಡಿ ಅವನ ಮೇಲೆ ತನ್ನ ಪ್ರಭಾವ ಬೀರುತ್ತದೆ. ಆದರೆ ಕಲಾವಿದರಿಗೆ, ಕಲಾರಸಿಕರಿಗೆ ಮತ್ತು ಕವಿಗಳ ಮೇಲೆ ಅದು ಬೇರೆಯೇ ರೀತಿಯಾದ ಪ್ರಭಾವ ಬೀರಿ ಒಂದು ಭಿನ್ನ ರೂಪದಲ್ಲಿ ಪ್ರತಿಕ್ರಿಯೆ ನೀಡುವಂತೆ ಮಾಡುತ್ತದೆ. ಅಂತಹ ಪ್ರತಿಕ್ರಿಯೆ ಅವರಿಗೆ ಮತ್ತು ಜಗತ್ತಿನ ಮನಸ್ಸಿಗೆ ಅದು ಸೊಗವಾಗಿ ಕಾಣುತ್ತದಂತೆ. ಅದಕ್ಕೆ ಒಂದು ಉಪಮೆಯನ್ನು ನೀಡುತ್ತಾ, ಈ ಜಗತ್ತು ಒಂದು ಸೂರ್ಯನಾದರೆ, ಆ ಸೂರ್ಯನ ಬೆಳಕಿಗೆ ಅರಳುವ ಕಮಲ ನೀನು ಎಂದು ಜಗದ ಭಾವಗಳಿಂದ ನಾವೆಲ್ಲಾ ಹೇಗೆ ಪ್ರಭಾವಿತರಾಗುತ್ತೇವೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.