Kagga Logo

Decision of dharma

619

623

619

ಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ- ।
ನತ್ಯಾಶೆಯಿಂದರಸಿ ಮಿಕ್ಕೆಲ್ಲ ಜಗವ- ॥
ನೊತ್ತಟ್ಟಿಗಿಡುವೆನೆನೆ, ನಷ್ಟವಾರಿಗೊ ಮರುಳೆ? ।
ಬತ್ತುವುದು ನಿನ್ನಾತ್ಮ - ಮಂಕುತಿಮ್ಮ ॥ ೬೧೯ ॥

"ನನ್ನ ಸುಖ ನನಗೆ ಮುಖ್ಯ ನನ್ನ ಆಸ್ತಿ ಸಂಪತ್ತು ನನಗೆ ಮುಖ್ಯ, ಈ ಜಗತ್ತಿನಿಂದ ನನಗೇನಾಗಬೇಕಿದೆ, ಎಂದು ಅತಿ ಆಸೆ ಪಟ್ಟು ಈ ಜಗತ್ತಿನಿಂದ ದೂರವಿದ್ದರೆ, ನಷ್ಟವು ಯಾರಿಗೋ, ಹುಚ್ಚ?" ಎಂದು ಕೇಳುತ್ತಾ, ಹಾಗೆ ಮಾಡಿದರೆ ನಿನ್ನ ಆತ್ಮ ಬತ್ತುವುದು, ಸೊರಗುವುದು ಎಂದು ಜಗದಾಭಿಮುಖ್ಯವಾಗಿ ಇಲ್ಲದೆ ಸ್ವಾರ್ಥ ಸಾಧಿಸುವ ಜನರಿಗೆ ಒಂದು ಕಿವಿಮಾತನ್ನು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

620

ಲೋಕಜೀವನದೆ ಮಾನಸದ ಪರಿಪಾಕವಾ ।
ಪಾಕದಿಂ ಮತಿಶುದ್ಧಿಯದರಿನೊಳದೃಷ್ಟಿ ॥
ಸಾಕಲ್ಯದಾತ್ಮಸಂದರ್ಶನಕೆ ಕರಣವದು ।
ಲೋಕದಿಂ ನಿರ್ಲೋಕ - ಮಂಕುತಿಮ್ಮ ॥ ೬೨೦ ॥

ಲೋಕದ ಬದುಕಿನಲ್ಲಿ ಅನುಭವಗಳಿಂದ ಮನಸ್ಸು ಪಕ್ವವಾಗುತ್ತದೆ. ಹಾಗೆ ಪಕ್ವವಾದ ಮನಸ್ಸಿನಿಂದ ಬುದ್ಧಿ ಪಕ್ವವಾಗುತ್ತದೆ. ಪರಿಶುದ್ಧವಾದ ಮನಸ್ಸು ಬುದ್ಧಿಗಳಿಂದ ಅಂತರಂಗದ ಶುದ್ಧಿಯಾಗುವುದಕ್ಕೆ ಮತ್ತು ಜಗತ್ತಿನಲ್ಲಿ ಏಕಾತ್ಮ ಭಾವ ನಮಗೆ ಬರಲು ಒಂದು ಸಾಧನವಾಗುತ್ತದೆ ಮತ್ತು ಮಾನಸಿಕ ಅಪ್ರಬುದ್ಧತೆಯಲ್ಲಿ ಕಾಣುವ ಭೇದಗಳೆಲ್ಲ ನಶಿಸಿ ಲೋಕದಲ್ಲಿದ್ದರೂ ಲೋಕದಿಂದಲೇ ಪರತತ್ವದ ಭಾವ ಮನಸ್ಸು ಬುದ್ಧಿಗಳಲ್ಲಿ ನೆಲೆಯೂರುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

621

ಧರಿಸಿರ್ಪುದಲ ಧರ್ಮ? ಧರಿಸು ಜೀವನಧುರವ ।
ಚರಿಸು ಲೋಕದ ಮಾರ್ಗಗಳಲಿ ಹಿತವರಿತು ॥
ಸರಿಪಡಿಸಿ ದಾರಿಗಳ ಕೆರೆ ತೋಪು ಸತ್ರಗಳ ।
ನೆರವಾಗು ಪಯಣಕ್ಕೆ - ಮಂಕುತಿಮ್ಮ ॥ ೬೨೧ ॥

ಜಗತ್ತಿನ ಎಲ್ಲವನ್ನೂ ಧರ್ಮವು ಧರಿಸಿಹುದಲ್ಲವೇ? ನೀನು ಜೀವನವೆಂಬ ನೊಗವನ್ನು ಹೊತ್ತು, ಹಿತವನ್ನು ಅರಿತು ಲೋಕದ ಮಾರ್ಗಗಳಲ್ಲಿ ನಡೆ. ಮಾರ್ಗದಲ್ಲಿ, ಸುಗಮವಾದ ಪಯಣಕ್ಕೆ ತೊಡಕುಗಳಿರುವ ಮಾರ್ಗ, ಕೆರೆ, ತೋಪು, ಸತ್ರಗಳನ್ನು ಸರಿಪಡಿಸಿ, ನಿನ್ನ ಮತ್ತು ಜಗತ್ತಿನ ಅನ್ಯರ ಪ್ರಯಾಣಕ್ಕೆ ನೆರವಾಗು ಎಂದು ಹೇಳುತ್ತಾ, ನಾವು ಸಮಾಜಮುಖಿಯಾಗಿ ಹೇಗಿರಬೇಕು ಎನ್ನುವ ಸಲಹೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

622

ಧರ್ಮನಿರ್ಣಯ ನಿನಗೆ ಜನ್ಮಜನ್ಮಾಂತರದ ।
ಕರ್ಮಸಂದರ್ಭದಿಂದೊಗೆವುದದನರಿತು ॥
ನಿರ್ಮಮದ ನಿರ್ಮಲೋತ್ಸಹದೆ ನೀನಾಚರಿಸೆ ।
ಬ್ರಹ್ಮಸಾಮೀಪ್ಯವೆಲೊ - ಮಂಕುತಿಮ್ಮ ॥ ೬೨೨ ॥

ನಿನಗೆ ನಿನ್ನ ಸ್ವಭಾವ, ಎಂದರೆ ಧರ್ಮ, ಜನ್ಮಜನ್ಮಾಂತರದ ಕರ್ಮ ಸಂಬಂಧದಿಂದ ಉಂಟಾಗಿರುತ್ತದೆ. ಅದನ್ನು ಅರಿತು, ಪ್ರಕೃತಿ ಸಂಬಂಧದಿಂದ ಉಂಟಾಗುವ ಮಮಕಾರ ಮತ್ತು ಮಾನಸಿಕ ಹೊಲಸನ್ನು ಸ್ವ ಇಚ್ಚೆಯಿಂದ ಉತ್ಸಾಹದಿಂದ ತೊರೆದು ತೊಳೆದುಕೊಂಡರೆ, ಶುದ್ಧನಾಗಿ ಬ್ರಹ್ಮ ಸಾಮೀಪ್ಯವನ್ನು ಪಡೆಯಬಹುದು ಎಂದು ಮೋಕ್ಷದ ಹಾದಿಯನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

623

ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ ।
ವಿಹಿತದ ಸ್ಥಾನದಿಂ ಸಹಜಗುಣಬಲದಿಂ- ॥
ದಿಹಪರಸಮನ್ವಯದೆ ಸರ್ವಹಿತಸಂಸ್ಥಿತಿಗೆ ।
ಸಹಕರಿಪುದಲೆ ಧರ್ಮ - ಮಂಕುತಿಮ್ಮ ॥ ೬೨೩ ॥

ನಿನಗೆ ನಿನ್ನ ಹುಟ್ಟಿನಿಂದಲೇ ಒಂದು ಸ್ಥಾನ ಮತ್ತು ಆ ಸ್ಥಾನಕ್ಕೆ ವಿಧಿತವಾದ ಒಂದು ಧರ್ಮವಿದೆ. ಮನೆಯಲ್ಲಿ, ಸಮಾಜದಲ್ಲಿ, ದೇಶದಲ್ಲಿ ಮತ್ತು ಲೋಕದಲ್ಲಿ ನಿನಗೆ ಲಭಿಸಿರುವ ಸ್ಥಾನದಿಂದ ಮತ್ತು ಜನ್ಮಾಂತರಗಳಿಂದ ಸಂಚಿತ ಗುಣಗಳಿಂದ ನೀನು ಇಲ್ಲಿನ ಬದುಕು ಮತ್ತು ಪರಮಾರ್ಥದ ನಡುವೆ ಒಂದು ಸಮನ್ವಯವನ್ನು ಕಂಡುಕೊಳ್ಳುವುದೇ ಧರ್ಮ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.