Kagga Logo

World-play

79

83

79

ಬರೆವ ಹಲಗೆಯನೊಡೆದು ಬಾಲಕನು ತಾನದನು ।
ಮರಳಿ ಜೋಡಿಪೆನೆನ್ನುತಾಯಾಸಗೊಳುತ ॥
ಸರಿಚೌಕಗೈವಾಟದಲಿ ಜಗವ ಮರೆವಂತೆ ।
ಪರಬೊಮ್ಮ ಸೃಷ್ಟಿಯಲಿ - ಮಂಕುತಿಮ್ಮ ॥ ೭೯ ॥

ಹಿಂದಿನ ಕಾಲದಲ್ಲಿ ಮಕ್ಕಳು ಬಳಪದಿಂದ ಬರೆಯಲು ಉಪಯೋಗಿಸುತ್ತಿದ್ದ ಸ್ಲೇಟು ಒಂದು ರೀತಿಯ ಮೃದು ಕಲ್ಲಿನ ಹಲಗೆಯಾಗಿರುತ್ತಿತ್ತು. ಅದಕ್ಕೆ ಮೃದು ಮರದ ಚೌಕಟ್ಟಿರುತ್ತಿತ್ತು. ಅಕಸ್ಮಾತ್ ಅದು ಕೆಳಗೆ ಬಿದ್ದು ಒಡೆದು ಹೋದರೆ, ಮತ್ತೆ ಅಂಟಿಸಲಾಗುತ್ತಿರಲಿಲ್ಲ. ಹಾಗೆ ಒಡೆದ ಹಲಗೆಯನ್ನು ಅಂಟಿಸಲು ಪ್ರಯತ್ನಪಟ್ಟು ಆಯಾಸಪಡುವ ಮಗುವಿನಂತೆ, ಆ ಪರಮಾತ್ಮನೂ ಸಹ ಒಂದೇ ಆಗಿದ್ದ ತಾನು ಹಲವಾಗಿ , ಅದನ್ನೆಲ್ಲ ಮತ್ತೆ ಒಟ್ಟಿಗೆ ಅಂಟಿಸಲು ಮಾಡುವ ಪ್ರಯತ್ನದಲ್ಲಿ ತಲ್ಲೀನನಾಗಿದ್ದಾನೋ ಎಂದು ಒಂದು ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು. 

80

ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್ ।
ಆಟವಾಡುತಲಿ ತನ್ನೊರ್ ತನವ ಮೆರೆವಾ ॥
ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ ।
ಪಾಟಿಯಲಿ ಮರೆತಿಹನು - ಮಂಕುತಿಮ್ಮ ॥ ೮೦ ॥

ನಮ್ಮ ಅಪ್ಪನ ಕಾಲಕ್ಕೆ ಹಲ ದೊಡ್ಡವರು ಇಸ್ಪೀಟಿನ  ಒಂದು ಬಗೆಯ ಆಟವಾಡುತ್ತಿದ್ದರು. ಅದಕ್ಕೆ  ಪೇಶೆನ್ಸ್ ಅಥವಾ ಸಾಲಿಟೇರ್ ಎಂದು ಕರೆಯುತ್ತಿದ್ದರು. ಒಬ್ಬರೇ ಕುಳಿತು ಆಡುವಾಟ. ಇನ್ನೊಂದು ರಮ್ಮಿ. ಅದರಲ್ಲಿ ಒಬ್ಬರಿಗಿಂತ ಹೆಚ್ಚುಜನ ಆಡುವುದು. ಆದರೆ ಕೆಲವರು ವಯಸ್ಸಾದವರು, ಕಾಲಯಾಪನೆಗೆ ಎರಡೂ ಕಡೆಯ ಆಟವನ್ನು ಒಬ್ಬರೇ ಆಡುತ್ತಿದ್ದರು.  ಹಾಗೆ ಆಡುವಾಗ ಒಬ್ಬರೇ ಮೈ ಮರೆಯುತ್ತಿದ್ದರು. ಆ ರೀತಿ ತಾನೇ ಸೃಷ್ಟಿಸಿದ ಈ ಜಗತ್ತಿನಲ್ಲಿ ತಾನು ಮತ್ತೆಲ್ಲದರೊಳಗೆ ಸೇರಿ ತಾನೂ ಈ ಜಗತ್ತನ್ನು ಅನುಭವಿಸುತ್ತ ಮೈ ಮರೆತ್ತಿದ್ದಾನೋ  ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು. 

81

ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು ।
ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ॥
ಅರಸಿಕೊಳುವವೊಲಿಹುದು; ದೊರೆತವೊಲ್ ತೋರೆ ಸುಖ ।
ದೊರೆವವರೆಗಾಯಸವೊ - ಮಂಕುತಿಮ್ಮ ॥ ೮೧ ॥

ಈ ಜಗತ್ತಿನ ಎಲ್ಲದರೊಳಗೆ ಆ ಪರಬ್ರಹ್ಮ ತನ್ನನ್ನು ತಾನೇ ಮರೆತಿದ್ದಾನೇನು, ಎಂದು ಪ್ರಶ್ನಿಸಿ, ಇಲ್ಲ ಅವ ಮರೆತಂತೆ ಇದ್ದಾನೆ ಎಂದು ಉತ್ತರಿಸುತ್ತಾರೆ ಮಾನ್ಯ ಗುಂಡಪ್ಪನವರು. ಎಲ್ಲ ಜೀವಾತ್ಮಗಳ ಸೃಷ್ಟಿಯ ಎಲ್ಲದರ ರೂಪವನ್ನೂ ಧರಿಸಿ ತನ್ನನ್ನು ತಾನೇ ಹುಡುಕುತ್ತಿದ್ದಾನೆ. ಅವನಿಗೆ ದೊರೆತರೆ ಸುಖ ದೊರೆಯದಿದ್ದರೆ ಆಯಾಸ.

82

ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು ।
ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ॥
ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು ।
ಎನ್ನುವಜ್ಜಿಯೊ ಬೊಮ್ಮ - ಮಂಕುತಿಮ್ಮ ॥ ೮೨ ॥

ಹಿಂದಿನ ಕಾಲದ ಅವಿಭಕ್ತ ಕುಟುಂಬಗಳಲ್ಲಿ ಯುವತಿಯರು ಮತ್ತು ವಯಸ್ಕರು ಕೆಲಸಗಳಲ್ಲಿ ಮಗ್ನರಾಗಿದ್ದರೆ ವಯಸ್ಸಾದ ಅಜ್ಜಿಯರು ಮಕ್ಕಳನ್ನು ಆಡಿಸಿಕೊಳ್ಳಲು, ಕಣ್ಣಾ ಮುಚ್ಚಾಲೆ ಆಟವಾಡಿಸುತ್ತಿದ್ದರು. ಅದು ಅವರಿಗೂ ಕಾಲಯಾಪನೆಗೆ ಒಂದು ದಾರಿಯಾಗುತ್ತಿತ್ತು. ಅಜ್ಜಿಯರು ಎಲ್ಲರನ್ನೂ ಸೇರಿಸಿಕೊಂಡು ಆಡುತ್ತಿದ್ದರು. ಯಾರನ್ನೂ ಬಿಡುತ್ತಿರಲಿಲ್ಲ. ಅದರಂತೆ ಕಂಡೂ ಕಾಣದಂತೆ ಎದುರಿಗಿದ್ದರೂ ಬಚ್ಚಿಟ್ಟುಕೊಂಡಂತೆ ಇರುವ ಆ ಪರಮಾತ್ಮನನ್ನು ಹುಡುಕುವಂತೆ ನಮ್ಮನ್ನು ಕರೆಯುತ್ತಿದ್ದಾನೇನು ಆ ಪರಬ್ರಹ್ಮ, ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು. 

83

ಮಾನಸವ ಚಿಂತೆವಿಡಿದಂದೊರ್ವನೆರಡಾಗಿ ।
ತಾನದಾರೊಳೊ ವಾದಿಸುವನಂತೆ ಬಾಯಿಂ ॥
ದೇನನೊ ನುಡಿಯುತ್ತ ಕೈಸನ್ನೆಗೈಯುವನು ।
ಭಾನವೊಂದರೊಳೆರಡು - ಮಂಕುತಿಮ್ಮ ॥ ೮೩ ॥

ಮನಸ್ಸಿಗೆ ಚಿಂತೆ ಹಿಡಿದಾಗ ಹೇಗೆ ಒಬ್ಬನು ತಾನು ಅದ್ಯಾರಲ್ಲೋ ಮಾತನಾಡುವಂತೆ ಏನೇನೋ ಮಾತನಾಡುತ್ತಾ ಕೈಸನ್ನೆ ಮಾಡುತ್ತಾ ಹೋಗುತ್ತಿರುತ್ತಾರೆ. ವ್ಯಕ್ತಿ ಒಬ್ಬರೇ ಆದರೂ ಇಬ್ಬರಂತೆ ಮಾತನಾಡುತ್ತಿರುತ್ತಾರೆ. ಹಾಗೆಯೇ ಒಬ್ಬನೇ ಇರುವ ಬ್ರಹ್ಮನನ್ನು, ಚಿಂತೆಗೀಡಾದ ಮನುಷ್ಯನಂತೆ ಎರಡೆಂದು ಭಾವಿಸುತ್ತಾರೆಂದು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.