Kagga Logo

Life-dance

84

88

84

ಅಣು ಭೂತ ಭೂಗೋಲ ತಾರಾಂಬರಾದಿಗಳ ।
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ॥
ಕುಣಿಸುತಿರುವನು ತನ್ನ ಕೃತಿಕಂತುಕವನದರೊ ।
ಳಣಗಿದ್ದು ಪರಬೊಮ್ಮ - ಮಂಕುತಿಮ್ಮ ॥ ೮೪ ॥

ಆ ಪರಬ್ರಹ್ಮ ಈ ಜಗತ್ತನ್ನು ಒಂದು ಸೂತ್ರದಲ್ಲಿ ಬಂಧಿಸಿ ಸ್ವಲ್ಪ ಸಡಿಲ ಬಿಟ್ಟು, ತನ್ನ ಕೃತಿಯಾದ ಈ ಜಗತ್ತನ್ನು ಒಂದು ಚೆಂಡು ಎಂದು ಭಾವಿಸಿ, ತಾನೂ ಅದರೋಗೆ ಸೇರಿ ಒಂದು  ಸೂತ್ರದಾಟವ ಆಡುತ್ತಿದ್ದಾನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.

85

ನಭದ ಬಯಲೊಳನಂತ, ಮನದ ಗುಹೆಯೊಳನಂತ ।
ವುಭಯದಾ ನಡುವೆ ಸಾದ್ಯಂತ ಜೀವಕಥೆ ॥
ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ।
ಹಬೆಗುಳ್ಳೆಯೋ ಸೃಷ್ಟಿ - ಮಂಕುತಿಮ್ಮ ॥ ೮೫ ॥

ಆಕಾಶದ ವಿಸ್ತಾರ ಅನೂಹ್ಯ ಮತ್ತು ಅನಂತ. ಹಾಗೆಯೇ ಜೀವಿಗಳ ಮನಸ್ಸಿನ ಆಳ ಮತ್ತು ವಿಸ್ತಾರಗಳೂ ಸಹ. ಈ ಸೃಷ್ಟಿಯಲ್ಲಿ ಆ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ ನಾವುಗಳು ಕೇವಲ ಗಾಳಿಯ ಗುಳ್ಳೆಗಳಂತೆ. ಒಂದು ಆದಿ ಮತ್ತು ಒಂದು ಅಂತ್ಯ ಇವುಗಳ ನಡುವೆ ನಮ್ಮ ಜೀವನದ ಕಥೆ. ಇಡೀ ಸೃಷ್ಟಿಯೇ ಒಂದು ದೊಡ್ಡ ಗಾಳಿಯ ಗುಳ್ಳೆಯಂತೆ ಎಂದು ಒಂದು ಗಹನವಾದ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು.

86

ಗಗನ ತಲೆನವಿರಾಗೆ ಪರೆ ತಾರೆ ಹೂವಾಗೆ ।
ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ॥
ನಗುನಗುವ ಬೊಬ್ಬಿಡುವ ಜೀವತಾಂಡವ ರಸಿಕ ।
ಭಗವಂತ ಶಿವರುದ್ರ - ಮಂಕುತಿಮ್ಮ ॥ ೮೬ ॥

ಈ ಜಗತ್ತನ್ನೇ ದೇಹವನ್ನಾಗಿಸಿಕೊಂಡಿರುವ ಆ ಪರಮಾತ್ಮನು ಆಕಾಶವನ್ನು ತನ್ನ ತಲೆ ಕೂದಲಾಗಿಸಿಕೊಂಡು ಚಂದ್ರ ಮತ್ತು ನಕ್ಷತ್ರಗಳನ್ನು ಹೂವಂತೆ ಆ ಕೂದಲಲ್ಲಿ ಮುಡಿದು ಮಾಯೆಯನ್ನು ತನ್ನ ಸತಿಯಾಗಿಸಿಕೊಂಡು ಈ ಜಗತ್ತಿನಲ್ಲಿ ಸಂತೋಷ ಮತ್ತು ದುಃಖವನ್ನು ಸಮವಾಗಿ ಅನುಭವಿಸಿ ಆನಂದಿಸುತ್ತಿದ್ದಾನೆ. ಹಾಗೆ ಅವನು ಶಾಂತ ಶಿವ ಸ್ವರೂಪನೂ ಹೌದು ಮತ್ತು ಭಯಂಕರವಾದ ರುದ್ರ ಸ್ವರೂಪನೂ ಹೌದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

87

ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ ।
ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ॥
ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ ।
ವಿಲಸಿತವು ಬೊಮ್ಮನದು - ಮಂಕುತಿಮ್ಮ ॥ ೮೭ ॥

ವಿಶ್ವದ ಎಲ್ಲಕ್ಕೂ ಒಂದು ನಿಗಧಿತ ಚಲನೆ ಉಂಟು. ಆ ಚಲನೆಗೆ ಕಾರಣ ಚೇತನ. ಆ ಬೃಹತ್ ಚೇತನದ ಒಂದು ಅಂಶವೇ ಎಲ್ಲಕ್ಕೂ ಚೇತನದ ಮೂಲ. ಒಂದು ಸಣ್ಣ ಬತ್ತದ ಕಾಳು ಭೂಮಿಗೆ ಬಿದ್ದಾಗ, ನೆಲ, ನೀರು, ಬೆಳಕು, ಸೂರ್ಯನ ಶಾಖಗಗಳ ಸಂಪರ್ಕಕ್ಕೆ ಬಂದಾಗ ಮೊಳಕೆಯೊಡೆದು ಸಸಿಯಾಗಿ ತೆನೆಯೋಡೆದು ಒಂದು ಇದ್ದದ್ದು ಹಲವಾಗಿ ಮತ್ತೆ ಮತ್ತೊಂದು ಸೃಷ್ಟಿ ಚಕ್ರಕ್ಕೆ ನಾಂದಿ ಹಾಡುತ್ತದೆ. ಅದಾವ ಶಕ್ತಿ ಆ ಒಂದು ಕಾಳನ್ನು ಮೊಳೆಸಿ ಆ ಭೂಮಿಯಿಂದ ಸತ್ವವನ್ನು ಹೀರಿ ಆ ಸಣ್ಣ ಸಸಿಯ ನರ ನಾಡಿಗಳಿಂದ ಶಿಖರಕ್ಕೆ ತಂದು ಕಿರೀಟದಂತೆ ಆ ತೆನೆಯನ್ನು ತೊಯ್ದಾಡಿಸುತ್ತದೆ. ಎಂತಹ ಅದ್ಭುತ. ಆ ಜಗತ್ತಿನ ಸೃಷ್ಟಿಯೆಲ್ಲವೂ ಅಂತಹ ಅದ್ಭುತಗಳಿಂದಲೇ ತುಂಬಿದೆ.

88

ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ ।
ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ॥
ಥಳಥಳಕೆ ವಜ್ರದಲಿ ನೈಜವಿರುವಂತೆಯು ।
ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ ॥ ೮೮ ॥

ನಿರಂತರ ಚಲನೆಯಲ್ಲಿರುವ ಈ ಜಗತ್ತು ಮತ್ತು ಅದರ ವಿಸ್ತಾರದ ವಿಚಾರ ನಮ್ಮನ್ನು ಭ್ರಮಾಲೋಕಕ್ಕೆ ತಳ್ಳುತದೆ. ಅದನ್ನು ಕೂಲಂಕುಷವಾಗಿ ವಿಚಾರಮಾಡಿ ನೋಡಿದರೆ ಎಲ್ಲೆಲ್ಲೂ ಸಹಜ ಪ್ರಕಾಶದಿಂದ ಪ್ರಾಜ್ವಲ್ಯಮಾನವಾಗಿರುವ ಆ ಪರಮಾತ್ಮ ದರ್ಶನವಾಗುತ್ತದೆ. ಏಕೆಂದರೆ ವಜ್ರಕ್ಕೆ ಹೇಗೆ ಪ್ರಕಾಶವು ಸಹಜ ಗುಣವೋ ಹಾಗೆಯೇ ಆ ಪರಮಾತ್ಮನೂ ತನ್ನದೇ ಪ್ರಕಾಶದಿಂದ ಹೊಳೆಯುತ್ತಿದ್ದಾನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.