Expansion-contraction
89
—
93
89
ಆದಿದಿವಸವದಾವುದೆಂದೆಂದುಮಿಹ ಜಗಕೆ? ।
ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ॥
ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ ।
ಸೇದಿಕೊಂಡಿರೆ ಲಯವೊ - ಮಂಕುತಿಮ್ಮ ॥ ೮೯ ॥
ಎಂದೆಂದೂ ಇರುವ ಈ ಜಗತ್ತಿಗೆ ಮೊದಲ ದಿನವು ಯಾವುದು ಮತ್ತು ಕೊನೆಯ ದಿನವು ಯಾವುದು? ಅದು ಹಾಗಾಯಿತು, ಇದು ಹೀಗಾಯಿತು ಎಂದು ಸುಲಭವಾಗಿ ವಿವರಿಸಲು ಒಂದು ರೀತಿಯ ವಿವರಣೆಯನ್ನು ನೀಡುತ್ತಾರೆ. ಆಮೆ ತನ್ನ ಕಾಲುಗಳನ್ನು ಹೊರಗೆ ತೆಗೆದರೆ ಸೃಷ್ಟಿ ಒಳಗೆಳೆದುಕೊಂಡರೆ ಲಯವೆನ್ನುವ ರೀತಿ ಎಂದು ಒಂದು ಗಹನವಾದ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
90
ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು? ।
ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? ॥
ಆವುದೆಲರಿನ ನಿಲ್ಲದಲೆತಕ್ಕೆ ಪಡುಸೀಮೆ? ।
ಈ ವಿಶ್ವಕಥೆಯಂತು - ಮಂಕುತಿಮ್ಮ ॥ ೯೦ ॥
ಈ ಜಗತ್ತಿನ ಇರುವಿಕೆಗೆ ಯಾವುದು ಮೊದಲು? ಈ ಸೃಷ್ಟಿಯ ಮೊದಲು ಎಂದು ಆಯ್ತು? ಸಮುದ್ರದ ಅಲೆಗಳಲ್ಲಿ ಮೊದಲ ಅಲೆ ಯಾವುದು. ನಿರಂತರ ನಿಲ್ಲದೆ ಬೀಸುವ ಗಾಳಿ, ಬೀಸಲು ಎಂದು ಮೊದಲಾಯ್ತು ಮತ್ತು ಅದರ ಎಲ್ಲೆಗಳು ಎಲ್ಲಿವೆ. ಈ ವಿಶ್ವ ಕಥೆ ಎಂತು ಎಂದು ಪ್ರಸ್ತಾಪಮಾಡುತ್ತಾರೆ, ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
91
ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ ।
ಸುಮವಪ್ಪುದಂತೆ ಮರುವಗಲು ಮುಗುಳ್ದಂತು ॥
ಅಮಿತ ಪ್ರಪಂಚನಾಕುಂಚನಾವರ್ತನ ।
ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ ॥ ೯೧ ॥
ಕಮಲದ ಹೂ ಸೂರ್ಯನ ರಶ್ಮಿಗಳು ಸೋಕಿದೊಡನೆ ಅರಳಿ, ಮತ್ತೆ ಸಂಜೆಗೆ ಮೊಗ್ಗಾಗಿ ಮತ್ತೆ ಆ ಮೊಗ್ಗು ಮತ್ತೆ ಸೂರ್ಯನ ರಶ್ಮಿಯ ಸ್ಪರ್ಶದಿಂದ ಅರಳುವಂತೆ ಈ ಅನಂತ ಮತ್ತು ಅಮಿತವಾದ ಪ್ರಪಂಚವೂ ಸಹ ನಿರಂತರವಾಗಿ ಹರಡಿಕೊಳ್ಳುತ್ತಾ ಮತ್ತೆ ಸಂಕುಚಿತಗೊಳ್ಳುತ್ತಾ ಮತ್ತೆ ಮತ್ತೆ ಬಿರಿದುಕೊಳ್ಳುತ್ತಾ ಇದೆ ಎಂದು ಈ ಜಗತ್ತಿನ ವಿಸ್ತಾರತೆಯನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
92
ಎತ್ತಣಿನೊ ದೃಕ್ಷರಿಧಿಯಾಚೆಯಿಂದಲನಂತ ।
ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ॥
ಬಿತ್ತರಿಸುತಿಹುದು ಹೊಸ ಹೊಸತನವನೆಡೆಬಿಡದೆ ।
ನಿತ್ಯನಿತ್ಯವು ಜಗದಿ - ಮಂಕುತಿಮ್ಮ ॥ ೯೨ ॥
ನಮ್ಮ ದೃಷ್ಟಿಯ ಪರಿಧಿ ಆಚೆಗಿರುವ ಅನಂತ ವಿಶ್ವದಲ್ಲಿಯ ಯಾವುದೋ ಒಂದು ನಿಗೂಢ ಸತ್ವ ಅಂದರೆ ಒಂದು ಚೇತನ ಅಲೆ ಅಲೆಯಾಗಿ ಹರಿದು, ಹಳತನ್ನು ಮರೆಸಿ ಹೊಸತನ್ನು ಮತ್ತೆ ಮತ್ತೆ ನಿರಂತರವಾಗಿ ತರುತ್ತಿದೆ ಎಂದು ಈ ಜಗತ್ತಿನ “ಪ್ರಪಂಚನ ಮತ್ತು ಆಕುಂಚನ”ದ ತತ್ವವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
93
ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ ।
ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ॥
ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ ।
ಲೊಲನಾಗಿರ್ಪನೆಲೊ - ಮಂಕುತಿಮ್ಮ ॥ ೯೩ ॥
ಜ್ವಾಲೆಗಳ ಮಾಲೆಯಲ್ಲಿ ನಡೆಯುತ್ತಿರುವ ಈ ಜಗತ್ತಿನ ತಾಂಡವ ನೃತ್ಯ. ಇದು ಪರಬ್ರಹ್ಮನಿಗೆ ಒಂದು ಲೀಲಾ ವಿನೋದ. ಕೆಲವೊಮ್ಮೆ ತಾಳ ಲಯ ಮತ್ತು ಮೇಳಗಳೊಂದಿಗೆ, ಶಾಂತವಾಗಿ ಮತ್ತು ಕೆಲವೊಮ್ಮೆ ರಭಸದಿಂದ ತನ್ನ ಭೀಕರ ರುದ್ರ ತಾಂಡವವನ್ನು ಮೆರೆಯುತ್ತಾ ಇರುವ ಆ ಪರಬ್ರಹ್ಮ, ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.