Kagga Logo

Brahman is milk, creation is froth

74

78

74

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು ।
ಹೊಮ್ಮುವೆನು ಕೋಟಿರೂಪದಲಿ ನಾನೆಂದು ॥
ಬೊಮ್ಮನೆಳಸಿದನಂತೆ. ಆ ಯೆಳಸಿಕೆಯೆ ಮಾಯೆ ।
ನಮ್ಮಿರವು ಮಾಯೆಯಲಿ - ಮಂಕುತಿಮ್ಮ ॥ ೭೪ ॥

ಆ ಪರಮಾತ್ಮನಿಗೆ ಒಬ್ಬನೇ ಇರುವುದು ಹೇಗೆ ಎಂದು ಅನಿಸಿ ಬೇಸರಬಂದು, ನಾನು ಕೋಟಿ ಕೋಟಿ ರೂಪದಲಿ ಹೊರ ಹೊಮ್ಮುವೆನು ಎಂದುಕೊಂಡು ಆ ಮಾಯಾ ರೂಪದ ಜಗತ್ತನ್ನು ಸೃಷ್ಟಿಮಾಡಿದನಂತೆ. ಆ ಮಾಯೆಯೇ ಈ ಜಗತ್ತು. ನಾವಿರುವುದು ಈ ಮಾಯೆಯೊಳಗೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. ಹಾಗಾಗಿ ಪರಬ್ರಹ್ಮ ಹಾಲು. ಉಕ್ಕಿ ಹರಿಯುವ ನೊರೆಯೇ ಸೃಷ್ಟಿ.

75

ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ- ।
ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು ॥
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ ।
ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ ॥ ೭೫ ॥

ಒಂದು ಮರ ತನ್ನ ಮೂಲವಾದ ಬೀಜವನ್ನು ಇಲ್ಲವಾಗಿಸಿ ತಾನು ಬೆಳೆದು ರೆಂಬೆ ಕೊಂಬೆಗಳಿಂದ ವಿಸ್ತಾರವಾಗಿ ಬೆಳೆವಂತೆ ಈ ಜಗತ್ತೂ ಸಹ ತನ್ನ ಮೂಲವಾದ ಆ ಅಗ್ನಿಗೋಳವನ್ನು ಇಲ್ಲವಾಗಿಸಿ ಮೆರೆಯುತ್ತಿದೆ ಮತ್ತು ನಮಗೆ ಕಾಣುತ್ತಿದೆ. ಇದು ಹೇಗಿದೆ ಎಂದರೆ ಆ ಪರಬ್ರಹ್ಮ ಹಾಲಾದರೆ ಅತೀ ಉಷ್ಣತೆಯಿಂದ ಕಾದು ಕಾದು ಉಕ್ಕುವ ಹಾಲಿನ ನೊರೆಯಂತೆ ಈ ಸೃಷ್ಟಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. 

76

ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ ।
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ॥
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ ।
ವಿಹರಿಪನು ನಿರ್ಲಿಪ್ತ! - ಮಂಕುತಿಮ್ಮ ॥ ೭೬ ॥

ಆ ಮಹಾ ಶಕ್ತಿ ಒಂದೇ ಇತ್ತು. ಅದು ತಾನೇ ಹಲವಾಗಿ ಪ್ರಕಟಗೊಳ್ಳಬೇಕೆಂದು, ತನ್ನ ಸಂಕಲ್ಪದಿಂದ , ತನ್ನದೇ ಆದ ಪರಮ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿ, ತನ್ನ ಶಕ್ತಿಯನ್ನು ಪ್ರತಿಯೊಂದರಲ್ಲೂ ಇರಿಸಿ ತನ್ನ ಇರವನ್ನು ನಿಗೂಢವಾಗಿರಿಸಿಕೊಂಡು, ತಾನು ಮಾತ್ರ ನಿರ್ಲಿಪತೆತೆಯಿಂದ ಈ ಜಗವನ್ನು ನಡೆಸಿಕೊಂಡು ಹೋಗುತ್ತಿದ್ದಾನೆ ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು. 

77

ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ ।
ರನ್ನವೋ ಬ್ರಹ್ಮ; ನೋಡುವನು-ನಿಜಪಿಂಛ ॥
ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು ।
ತನ್ಮಯನೊ ಸೃಷ್ಟಿಯಲಿ - ಮಂಕುತಿಮ್ಮ ॥ ೭೭ ॥

ತನ್ನ ಹೊಳಹೊಳಪುಗಳ ತಾನೇ ನೆನೆನೆನೆದು ಮೈ ಮರೆತಂತ ರತ್ನವೋ ಆ ಬ್ರಹ್ಮ. ಅಲ್ಲಿ ನೋಡು ಅವನು ಒಂದು ನವಿಲು ತನ್ನ ಗರಿಗಳನ್ನೆಲ್ಲ ಕೆದರಿ ನೃತ್ಯ ಮಾಡುವಾಗ ತನ್ನ ಗರಿಗಳ ಬಣ್ಣ ಗಳನ್ನೂ ಕಂಡು ತನ್ಮಯವಾಗುವಂತೆ, ತನ್ನಿಂದ ಆದ, ತಾನೇ ಆದ ಈ ಸೃಷ್ಟಿಯನ್ನು ಅನುಭವಿಸುವಾಗ ಆ ಪರಮಾತ್ಮನೂ ತನ್ಮಯನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ . ಇಡೀ ಜಗತ್ತು, ಸೃಷ್ಟಿ ಆದದ್ದೇ ಆ ಪರಮ ಶಕ್ತಿಯಿಂದ. ಆ ಪರಮ ಶಕ್ತಿಯೇ ಜಡವನ್ನೂ ಸೃಷ್ಟಿಸಿ, ಆ ಜಡದೊಳಗೆ ಚೇತನವಾಗಿ ಪ್ರವೇಶಿಸಿ ಜಡಕ್ಕೆ ಚೈತನ್ಯವನ್ನು ತುಂಬಿ ಆಯಾಯಾ ಜಡಗಳ ಗುಣಗಳನ್ನು ತಾನೂ ಅನುಭವಿಸುತ್ತ ಆ ಅನುಭವದಲ್ಲಿ ಆ ಪರಮಾತ್ಮನೂ ಮಗ್ನನೋ? ಎನ್ನುವ ಪ್ರಶ್ನೆ. 

78

ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ ।
ಪರಕಿಸುತೆ ಮುಕರದಲಿ ಸೊಗಸುಗಳ ಪರಿಯ ॥
ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ ।
ಮೆರೆಯುವನು ಪರಬೊಮ್ಮ - ಮಂಕುತಿಮ್ಮ ॥ ೭೮ ॥

ಒಂದು ಹೆಣ್ಣು ಹೇಗೆ ತೊಟ್ಟ ಒಡವೆಗಳನ್ನು ತೆಗೆದು ಮತ್ತೆ ತೊಟ್ಟು ಕನ್ನಡಿಯಲಿ ತನ್ನ ಅಂದ ಚೆಂದವನ್ನು ನೋಡಿಕೊಳ್ಳುತ್ತಾ ಮೈ ಮರೆಯುತ್ತಾಳೋ, ಹಾಗೆ ತಾನೆ ಸೃಜಿಸಿದ ಈ ಜಗತ್ತಿನಲ್ಲಿ ಬೇರೆ ಬೇರೆ ದೇಹಗಳನ್ನು ಧರಿಸಿ ಅದರಲ್ಲಿ ಸಿಗುವ ಹತ್ತು ಹಲವಾರು ಭಾವನೆಗಳ ಆನಂದದಿಂದ ಅನುಭವಿಸುತ್ತಾ ಮೈ ಮರೆತಿದ್ದಾನೋ ಏನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.