Nature’s scheme of fluids
69
—
73
69
ಹೆಸರನರಿಯದ ಸಸಿಯೊಳಿರವೆ ರಸಗಂಧಗಳು? ।
ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ॥
ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು ।
ಉಸಿರುತಿಹೆವದ ನಾವು - ಮಂಕುತಿಮ್ಮ ॥ ೬೯ ॥
ನಮಗೆ ಹೆಸರೇ ಗೊತ್ತಿಲ್ಲದ ಸಸಿಯಲ್ಲಿ ಮಕರಂದ ಮತ್ತು ಸುಗಂಧಗಳಿರುವುದಿಲ್ಲವೇ? ಆ ಸೂರ್ಯನ ಬೆಳಕಿನಿಂದ ಅವು ಬೆಳೆಯುವುದಿಲ್ಲವೇ? ಆ ಗಿಡಗಳಲ್ಲಿರುವ ಸುಗಂಧವನ್ನು ಗಾಳಿಯು ದಿಕ್ಕು ದಿಕ್ಕುಗಳಿಗೆ ಪಸರಿಸದೆ? ಅಂತಹ ಗಾಳಿಯನ್ನು ನಾವು ಉಸಿರಾಡುತ್ತಿಲ್ಲವೇ? ಎಂದು ಒಂದು ಗಹನವಾದ ವಿಚಾರವನ್ನು ಈ ಕಗ್ಗದ ಮೂಲಕ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
70
ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ ।
ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ॥
ಬಾವಿಗೂಟೆಯನಿತ್ತು ನರರೊಡಲ ಸೇರುವುದು ।
ದೈವ ರಸತಂತ್ರವಿದು - ಮಂಕುತಿಮ್ಮ ॥ ೭೦ ॥
ಈ ಭೂಮಿಗೆ ಸಂಬಂಧಿಸಿದ ಮತ್ತು ಈ ಭೂಮಿಯಲ್ಲಿ ಅಡಗಿದ ರಸಗಳು ಸೂರ್ಯನ ಶಾಖದಿಂದ, ಆವಿಯಾಗಿ, ಅದು ಮೋಡವಾಗಿ ಮತ್ತೆ ಮಳೆಯಾಗಿ ಧರೆಗಿಳಿದು ಆ ಮಳೆಯನೀ ಭೂಮಿಯಲ್ಲಿ ಇಂಗಿ ಭಾವಿಗಳಿಗೆ ಒರತೆಯಾಗಿ ಆ ನೀರನ್ನು ಕುಡಿದ ನರರ ದೇಹವನ್ನು ಸೇರುವುವು. . ಇದೆ ದೈವ ನಿರ್ಮಿಸಿದ ರಸತಂತ್ರ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
71
ತರಣಿ ಕಿರಣದ ನಂಟು ಗಗನ ಸಲಿಲದ ನಂಟು ।
ಧರಣಿ ಚಲನೆಯ ನಂಟು ಮರುತನೊಳ್ನಂಟು ॥
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ ।
ಕಿರಿದು ಪಿರಿದೊಂದಂಟು - ಮಂಕುತಿಮ್ಮ ॥ ೭೧ ॥
ಸೂರ್ಯನ ಮತ್ತು ಕಿರಣದ ಸಂಬಂಧ, ಆಕಾಶದ ಮತ್ತು ಮಳೆ ನೀರಿನಸಂಬಂಧ, ಭೂಮಿಯ ಸುತ್ತುವಿಕೆಯ ಸಂಬಂಧ, ಮತ್ತು ಅದಕ್ಕನುಗುಣವಾಗಿ ಬೀಸುವ ಗಾಳಿಯ ಸಂಬಂಧ,ಹೀಗೆ ಒಂದಕ್ಕೊಂದು ನಂಟು ಹಾಕಿಕೊಂಡು ಹಲವಾರು ಬಗೆಯ ಸಂಬಂಧಗಳ ಒಂದು ಗಂಟೆ ಈ ಜಗತ್ತು ಇದರಲ್ಲಿ ಕೆಲವು ಸಣ್ಣ ಸಣ್ಣ ನಂಟುಗಳು ಮತ್ತೆ ಕೆಲವು ದೊಡ್ಡದಾದ ಗಂಟುಗಳು ಎಂದು ಈ ಜಗತ್ತಿನ ಎಲ್ಲವಸ್ತುಗಳ ಪರಸ್ಪರ ಸಂಬಂಧಗಳನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
72
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು ।
ಅವನಾ ಬಂಧುತೆಯ ಜಡೆಯ ಬಿಡಿಸುವನು? ॥
ಜೀವ ಜೀವಕೆ ನಂಟು ಜಡ ಚೇತನಕೆ ನಂಟು ।
ಆವುದದಕಂಟಿರದು? - ಮಂಕುತಿಮ್ಮ ॥ ೭೨ ॥
ಈ ಜಗತ್ತಿನ ಎಲ್ಲವೂ ಒಂದು ರೀತಿಯ ಪರಸ್ಪರ ಕೊಂಡಿಹಾಕಿಕೊಂಡು ಅಂಟಿಕೊಂಡಿವೆ. ಜಡೆಯ ತರಹ ಹೆಣೆದು ಕೊಂಡಿರುವ ಈ ಅಂಟಿನ ನಂಟನ್ನು ಮತ್ತು ಗಂಟನ್ನು ಯಾರು ಬಿಡಿಸುವವರು. ಜೀವ ಜೀವಕೆ ನಂಟು ಚೇತನ ಮತ್ತು ಜಡಕ್ಕೆ ನಂಟು, ಯಾವುದದಕಂಟಿರದು, ಅಂದರೆ ಯಾವುದಕ್ಕೆ ಅಂಟಿರದು ಹೇಳಿ ನೋಡುವಾ ಎಂಬಂತೆ ಜಗತ್ತಿನ ಬಾಂಧವ್ಯಗಳನ್ನು ಈ ಕಗ್ಗದಲ್ಲೂ, ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.
73
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ ।
ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ॥
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ ।
ಒಂಟಿಸಿಕೊ ಜೀವನವ - ಮಂಕುತಿಮ್ಮ ॥ ೭೩ ॥
ಈ ಜಗತ್ತಿನಲ್ಲಿ ಆ ಪರಮಾತ್ಮನ ಸೃಷ್ಟಿಯಲ್ಲಿ , ನಂಟುಗಳು ಮತ್ತು ಅಂಟುಗಳು ಮತ್ತು ಗಂಟುಗಳು ಬಹಳಷ್ಟಿವೆ. “ಇದೆಕ್ಕೆಲ್ಲ ನನಗೆ ಸಂಬಂಧವಿಲ್ಲ” ಎಂದು ಹೇಳಬೇಡ ಎಂದೆಂದೂ. ಅಂತರ್ಯದಲ್ಲಿ ನೀನು ಒಬ್ಬಂಟಿಯಾಗಿರು, ಆದರೆ ಹೊರ ಜಗತ್ತಿಗೆ ನಿನ್ನ ನಂಟು ಒಬ್ಬ ಆಳಿನಂತೆ ಇದ್ದು ಈ ಜೀವನಕ್ಕೆ ನೀ ಅಂಟಿಸಿಕೊ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.