Mankuthimmana Kagga

Inner Vision

64-68

64

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ।
ಭತ್ತವದನು ವಿಚಾರಯುಕ್ತಿಗಳು ಕುಟ್ಟೆ ॥
ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ ।
ನಿತ್ಯ ಭೋಜನ ನಮಗೆ — ಮಂಕುತಿಮ್ಮ ॥

ನಮ್ಮ ಮನಸ್ಸಿನಲ್ಲಿ ಬರುವ ಭಾವ, ಅನುಭವ ಮತ್ತು ಆಲೋಚನೆಗಳೆಲ್ಲ ಬತ್ತದಂತೆ. ಅದನ್ನು ಯುಕ್ತಿ ಮತ್ತು ವಿಚಾರವೆಂಬ ಒನಕೆಗಳಿಂದ ಕುಟ್ಟಿದರೆ ತತ್ವವೆಂಬ ಅಕ್ಕಿ ನಮಗೆ ದೊರೆಯುವುದು. ಹಾಗೆ ದೊರೆತ ಅಕ್ಕಿರೂಪದ ತತ್ವವೇ ನಮ್ಮ ಭೌದ್ಧಿಕತೆಗೆ ಆಹಾರ ಎಂಬುದೇ ಈ ಕಗ್ಗದ ತಾತ್ಪರ್ಯ. ನಮ್ಮ ಮಾನಸಿಕತೆಯಲ್ಲಿ ನಮ್ಮ ವಿಚಾರ ಮಂಥನಕ್ಕೆ ಒತ್ತು ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Mind's experiences, emotions, and thoughts are like paddy. Pounded by reasoning we get the rice of philosophy. This philosophy, further examined, forms our daily meal.

65

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ।
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ॥
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ।
ಶಾಸ್ತ್ರಿತನದಿಂದಲ್ಲ — ಮಂಕುತಿಮ್ಮ ॥

ಪುಸ್ತಕಗಳನ್ನು ಓದಿ ಪಡೆದುಕೊಂಡ ಪಾಂಡಿತ್ಯ ತಲೆಯಮೇಲೆ ತಂದಿಟ್ಟುಕೊಂಡಂತ ಕಿರೀತದಲ್ಲಿನ ಮಣಿಯಂತೆ. ಆದರೆ ನಮ್ಮ ಅನುಭವಗಳನ್ನು ವಿಚಾರದ ಒರೆಗೆ ಹಚ್ಚಿ ನಮ್ಮ ಚಿತ್ತದಲ್ಲಿ ನಮಗೆ ಸ್ಫುರಿಸಿದ ಜ್ಞಾನ, ತನ್ನ ಸ್ವಾಭಾವಿಕ ಗುಣಕ್ಕೆ, ಮಣ್ಣಿನ ಸಾರ, ಪರಿಸರದ ಪ್ರಭಾವದಿಂದ ತನ್ನೊಳಗಿಂದಲೇ ವಿಕಸಿತವಾಗುವ ಒಂದು ಗಿಡದ ” ಪುಷ್ಪದಂತೆ” ಎನ್ನುತಾರೆ, ಮಾನ್ಯ ಗುಂಡಪ್ಪನವರು.

Knowledge from books is a jewel adorning the head. Knowledge that evolves within us is a flower on a plant True perception arises from introspection, not by being scholarly.

66

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ? ।
ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ? ॥
ಕರ್ತನಾಲೋಚಿಸದ ದುಂದಿನವನೆಂಬ ನುಡಿ ।
ಯರ್ಧದೃಷ್ಟಿಯ ವಿವರ — ಮಂಕುತಿಮ್ಮ ॥

“ವ್ಯರ್ಥವೆಂದೆನಿಸುತ್ತದೆ ಸೃಷ್ಟಿಯಲಿ ಬಹುಭಾಗ, ಈ ಕ್ರಿಮಿ ಕೀಟ ಕೋಟಿಗಳ ಸೃಷ್ಟಿಯಲಿ ಅರ್ಥವೇನು ? ಆ ಸೃಷ್ಟಿಕರ್ತನು ಈ ಸೃಷ್ಟಿಯನ್ನು ರಚಿಸುವಾಗ ತನ್ನ ಶಕ್ತಿಯ ದುಂದುಪಯೋಗ ಮಾಡಿರಬಹುದೆಂದು ಯಾರಾದರೂ ಆಲೋಚಿಸಿದರೆ ಅದು ಅವರ ಅಪರಿಪೂರ್ಣ ಜ್ಞಾನದ, ಯೋಚನಾ ದಾರಿದ್ರ್ಯದ ಸೂಚಕವೆಂದು ಈ ಕಗ್ಗದ ಹೂರಣ.

Doesn't a fair share of nature's creation seem a waste? What's the purpose of creating millions of varieties of insects and worms? To accuse the creator of being mindless and extravagant — this comes from an incomplete view.

67

ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ ।
ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ॥
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? ।
ಕ್ಲಿಷ್ಟದ ಸಮಸ್ಯೆಯದು — ಮಂಕುತಿಮ್ಮ ॥

“ಜಗತ್ತು ಸೃಷ್ಟಿಯಾಗುವ ಮುಂಚಿನ ಲೇಖಾ ಅಥವಾ ರೇಖಾ ಚಿತ್ರ ನಮ್ಮ ಬಳಿ ಇಲ್ಲ. ನಾವು ಕಾಣಲಾಗಿರುವುದು ಒಂದು ಬೃಹತ್ ಚಿತ್ರದಲ್ಲಿ ಒಂದೇ ಗೆರೆ ಮಾತ್ರ. ಅಷ್ಟು ಸಣ್ಣ ಗೆರೆಯನ್ನು ಕಂಡು ನಾವು ಈ ಸೃಷ್ಟಿಯನ್ನು ಕುರಿತು ವ್ಯಾಖ್ಯಾನ ಮಾಡುತ್ತಾ, ಇದು ಸರಿ ಇದು ಸಪ್ಪು ಎನ್ನುವುದು ಸರಿಯೇ?” ಎಂದು ಕೇಳುತ್ತ, ಇದು ಬಹಳ ಕ್ಲಿಷ್ಟದ ಸಮಸ್ಯೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲಿ.

The creator's plans and writings lay not in front of us. We can see but a stroke of it. From that, can we say, "This is right" or "That is wrong"? It's a complicated problem.

68

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವಿಲ್ಲಿ ।
ಎಲ್ಲಿ ಪರಿಪೂರಣವೊ ಅದನರಿಯುವನಕ ॥
ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? ।
ಎಲ್ಲ ಬಾಳು ರಹಸ್ಯ — ಮಂಕುತಿಮ್ಮ ॥

ಎಲ್ಲ ವಿಷಯಗಳಲ್ಲೂ ಅರೆ ಬರೆ ಜ್ಞಾನ ಮತ್ತು ತಿಳುವಳಿಕೆ. ಆ ತಿಳುವಳಿಕೆಯನ್ನು ಪಡೆವ ಮಾರ್ಗಗಳೂ ಸಹ ಅರ್ದಂಬರ್ದ ಮತ್ತು ಯಾವುದೂ ನಿಚ್ಚಳವಲ್ಲ. ಅದು ನಮಗೆ ಸಂಪೂರ್ಣ ಜ್ಞಾನ ಬರುವ ತನಕ ಹಾಗೇ ಇರುತ್ತದೆ. ಆದರೆ ನಮಗೆ ಆ ಪರಿಪೂರ್ಣಜ್ಞಾನವನ್ನು ಹೇಳಿಕೊಡುವವರಾರು. ಈ ಜೀವನವೆಲ್ಲ ಒಂದು ನಿಗೂಢ ಅಥವಾ ರಹಸ್ಯ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Half light, half hints, half learning; everything incomplete here. Till we know where to find the whole, who shall reveal the mystery inside nature's box. Every life is a secret.