Two witnesses
59
—
63
59
ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ ।
ಮನಗಾಣಿಸಲು ನಿನಗೆ ದೈವದದ್ಭುತವ? ॥
ಮನುಜರೊಳಗಾಗಾಗ ತೋರ್ಪ ಮಹನೀಯಗುಣ ।
ವನುವಾದ ಬೊಮ್ಮನದು - ಮಂಕುತಿಮ್ಮ ॥ ೫೯ ॥
ಆ ಪರತತ್ವದ ಅದ್ಭುತ ಕ್ರಿಯೆಗಳನ್ನು ನೋಡಲು ಮನಗಾಣಲು, ನಾವು ಮಂತ್ರ ತಂತ್ರ ಸಿದ್ಧಿಗಳಿಗೆ ಏಕೆ ಶರಣಾಗಬೇಕು? ಮನುಜರಲ್ಲಿ ಅಗಾಗ ಕಾಣುವ ಮಹನೀಯ ಗುಣಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ನಮಗೆ ದೈವದ ಕ್ರಿಯೆ ಅರ್ಥವಾಗುತ್ತದೆ, ಎನ್ನುವುದೇ ಈ ಕಗ್ಗದ ಹೂರಣ .
60
ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ ।
ಕಾಶಿಯಾ ಶಾಸ್ತ್ರಗಳನಾಕ್ಸ್ ಫರ್ಡಿನವರು ॥
ದೇಶಕಾಲವಿಭಾಗ ಮನದ ರಾಜ್ಯದೊಳಿರದು ।
ಶ್ವಾಸವದು ಬೊಮ್ಮನದು - ಮಂಕುತಿಮ್ಮ ॥ ೬೦ ॥
ಜಗತ್ತಿನ ವಿಶಾಲತೆಗೆ ಒಂದು ಕನ್ನಡಿ ಈ ಕಗ್ಗ. “ಗ್ಲೋಬಲ್ ವಿಲೇಜ್” ಎಂದು ಇತ್ತೀಚೆಗೆ ಒಂದು ಪದ ಪ್ರಯೋಗವನ್ನು ನಾವು ಕೇಳುತಿದ್ದೇವೆ. ನಾವು ಇಲ್ಲಿ ಕುಳಿತುಕೊಂಡು ಪ್ರಪಂಚದ ಯಾವುದೇ ಮೂಲೆಯಲಿರುವ ಜನರೊಡನೆ ನಾನಾ ವಿಧವಾದ ಸಂಪರ್ಕಗಳನ್ನು ಇಂದು ಹೊಂದಿದ್ದೇವೆ. ಎಲ್ಲಿಯೋ ಹುಟ್ಟಿ ಬೆಳೆದ, ಆಲ್ಬರ್ಟ್ ಕಾಮೂವಿನ ನಾಟಕಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತೇವೆ. ಶೇಕ್ಸಪಿಯರನ ನಾಟಕಗಳನ್ನೂ ಆಡುತ್ತೇವೆ. ಆಲ್ಲಿ ಅವರುಗಳು ನಮ್ಮ ಭಾರತೀಯ ಸಂಸ್ಕೃತಿಯ ಕತೆ ನಾಟಕ ಶಾಸ್ತ್ರಗಳನ್ನು ಓದುತ್ತಾರೆ. ಇಂಗ್ಲೆಂಡಿನ ಶಾಲೆಗಳಲ್ಲಿ ” ಸಹನಾವವತು” ಹೇಳುತ್ತಾರೆ ಪ್ರಾರ್ಥನೆಯಲ್ಲಿ. ಆದರೆ ದುರಂತವೆಂದರೆ, ಇಲ್ಲಿ ಭಾರತದಲ್ಲಿ ಅದನ್ನು ಶಾಲೆಗಳಲ್ಲಿ ಹೇಳಿದರೆ ಅದಕ್ಕೊಂದು ಬಣ್ಣ ಕಟ್ಟಿ ಗೊಂದಲವೇ ಆಗುತ್ತದೆ. ಇರಲಿ, ಹೀಗೆ ಬೇರೆ ಬೇರೆ ದೇಶಗಳ ಭಾಷೆ ಮತ್ತು ಸಂಸ್ಕೃತಿಗಳನ್ನು ಬೇರೆ ಬೇರೆ ದೇಶಗಳಲ್ಲಿ ಅನುಕರಿಸಿ, ಅನುಸರಿಸುವಾಗ ಇಡೀ ಜಗತ್ತೇ ಒಂದು ಮನೆಯಾಗುವ ಸಂಭವ ಇದೆ ಎಂದು ಅರ್ಥ ತಾನೇ.
61
ನಕ್ಷತ್ರಮಂಡಲದಿನಾಚೆಯಿಂದೊಂದು ದನಿ ।
ವಕ್ಷೋಗುಹಾಂತರದಿನೊಂದು ದನಿಯಿಂತೀ ॥
ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ ।
ಪ್ರೇಕ್ಷೆ ಪರಬೊಮ್ಮನದು - ಮಂಕುತಿಮ್ಮ ॥ ೬೧ ॥
ನಕ್ಷತ್ರ ಮಂಡಲದ ಆಚೆಯಿಂದ ಒಂದು ದನಿ, ವಕ್ಷ ಗುಹಾಂತರದಿಂದ ಒಂದು ದನಿಯಂತೆ ಈ ಸಾಕ್ಷಿ ದ್ವಯವು ನಿನ್ನೊಳಗೆ ಒಂದು ಗೂಡಿದೊಡೆ ಅದೇ ಪರ ಬ್ರಹ್ಮನ ದರ್ಶನವನ್ನು ನೀಡುತ್ತದೆ ಎಂಬುದೇ ಈ ಕಗ್ಗದ ಹೂರಣ.
62
ಭೌತವಿಜ್ಞಾನಿ ರವಿತಾರೆಧರೆಗಳ ಚಲನ ।
ರೀತಿ ವೇಗವನೆಳೆದು ಶಕ್ತಿಗಳ ಗುಣಿಪನ್ ॥
ಪ್ರೀತಿ ರೋಷಗಳನವನಳೆವನೇನ್? ಅವ್ಯಕ್ತ ।
ಚೇತನವನರಿವನೇಂ? - ಮಂಕುತಿಮ್ಮ ॥ ೬೨ ॥
ಭೌತವಿಜ್ಞಾನಿಯು ಸೂರ್ಯ ನಕ್ಷತ ಭೂಮಿಗಳ ತಿರುಗುವ ಸುಡುವ ಪ್ರಭಾವ ಬೀರುವ ಶಕ್ತಿಗಳ ಗುಣಾಕಾರ ಭಾಗಾಕಾರ ಲೆಕ್ಕಾಚಾರವನ್ನು ಮಾಡುತ್ತಾನೆ. ಆದರೆ ಮಾನವ ಮನಸ್ಸುಗಳಲ್ಲಿ ಪರಸ್ಪರ ಪ್ರೀತಿ ದ್ವೇಷ ರೋಷಗಳ ಶಕ್ತಿಯನ್ನು ಅಳೆಯುತ್ತಾನೆಯೇ? ಸಕಲ ಸೃಷ್ಟಿಯನ್ನೂ ಒಂದು ಸೂತ್ರದಲ್ಲಿ ಹೆಣೆದು ಅದರ ಗತಿ ವಿಧಿಗಳನ್ನು ನಿಯಂತ್ರಿಸುವ ಆ ಬೃಹತ್ ಚೇತನವನ್ನು ಅವನಿಂದ ಅರಿಯಲು ಸಾಧ್ಯವೇ ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.
63
ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? ।
ಅರಿಯದದು ನಮ್ಮೆದೆಯ ಭಾವಗಳನೊರೆಯೆ ॥
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ ।
ಒರಟುಯಾನವೊ ಭಾಷೆ - ಮಂಕುತಿಮ್ಮ ॥ ೬೩ ॥
ನಾವಾಡುವ ನರಭಾಷೆಗೆ ಒಂದು ಮಿತಿ ಇದೆ. ಈ ಭಾಷೆಯಲ್ಲಿ ಆ ಪರಮಾತ್ಮ ಸ್ವರೂಪವನ್ನು ಬಣ್ಣಿಸಲು ಸಾಧ್ಯವಿಲ್ಲ. ನಮ್ಮ ಅಂತರಂಗದ ಭಾವವನ್ನು ಹೇಳಲು ಈ ಭಾಷೆ ಸಾಲದು. ಪರತತ್ವದ ಅನುಭವದ ಮಾತುಗಳು ಕೇವಲ ನಮ್ಮ ಒಳಗಿವಿಗೆ ಕೇಳಿಸುತ್ತದೆ. ಮಾನವರ ಭಾಷೆಯಲ್ಲಿ ವಿವರಿಸುವುದು ಒಂದು ನೇರವಲ್ಲದ ಸುಗಮವಲ್ಲದ ಪ್ರಯಾಣದಂತೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.