Inner experience
54
—
58
54
ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ ।
ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ॥
ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ ।
ತಿಳಿಮನದೆ ನೋಳ್ಪರ್ಗೆ - ಮಂಕುತಿಮ್ಮ ॥ ೫೪ ॥
ಈ ಜಗತ್ತಿನ ಸೃಷ್ಟಿಯ ಕರ್ತೃ,ಕರಣ, ಕಾರ್ಯ, ಕಾರಣ ಇವುಗಳ ಬಗ್ಗೆ ಅತಿಯಾದ ವಾದ ವಿವಾದದಿಂದ ನಮಗೆ ತತ್ವವು ಸಿಗುವುದೇ ಇಲ್ಲ. ಆದರೆ ನಿರ್ಮಲವಾದ ಮತ್ತು ತಿಳಿಯಾದ ಮನದಲ್ಲಿ ಆಗಾಗ ಸೂಕ್ಷ್ಮಾನುಭವಕ್ಕೆ ಅದು ಗೋಚರವಾಗಬಹುದು. ಯಾರಿಗೆ? ನೋಡಲು ಇಚ್ಚಿಸುವವರಿಗೆ ಮತ್ತು ನೋಡುವವರಿಗೆ ಅದು ಆಗಾಗ ಗೋಚರಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
55
ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? ।
ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ॥
ನರನುಮಂತೆಯೆ ಮನಸಿನನುಭವದಿ ಕಾಣುವನು ।
ಪರಸತ್ತ್ವಮಹಿಮೆಯನು - ಮಂಕುತಿಮ್ಮ ॥ ೫೫ ॥
ಕುರುಡನಿಗೆ ಸೂರ್ಯ ಚಂದ್ರರನು ಕಾಣಲಾಗುವುದೆ? ಬಿಸಿಲು ಮತ್ತು ತಂಪನ್ನು ಅವನು ಸ್ಪರ್ಶಮಾತ್ರದಿಂದಲೇ ಅರಿಯುವುದಿಲ್ಲವೇ ಮನುಷ್ಯನೂ ಸಹ ಮನಸ್ಸಿನ ಅನುಭವದಿಂದ ಪರಮಾತ್ವ ತತ್ವವನು ಕಾಣುತ್ತಾನೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
56
ಮೇಲಿಂದ ನಕ್ಷತ್ರಜಯಘೋಷ ಸುತ್ತಣಿಂ ।
ಭೂಲೋಕದರಚು ಕೆಳಗಿಂ ಮೂಳೆಯಳುವು ॥
ಕೇಳಬರುತೀ ಮೂರು ಕೂಗೆನ್ನ ಹೃದಯದಲಿ ।
ಮೇಳಯಿಸುತಿದೆ ಸಂತೆ - ಮಂಕುತಿಮ್ಮ ॥ ೫೬ ॥
ಇಡೀ ಸೃಷ್ಟಿಯ ವಿಸ್ಮಯಗಳು, ಅವುಗಳ ಬಗ್ಗೆ ನಮ್ಮ ಯೋಚನೆ ಕಾಣುವ, ಕಾಣದ, ಕೇವಲ ಊಹಿಸಿ ಅನುಭವಿಸಬಹುದಾದ ಆ ವಿಸ್ಮಯಭರಿತ ಲೋಕದ ಬಗ್ಗೆ ನಮ್ಮ ಆಲೋಚನೆ, ಕಂಡದ್ದು ,ಕೇಳಿದ್ದು, ಅನುಭವಿಸಿದ್ದು ಎಲ್ಲದರ ವಿಚಾರ ತಲೆಯಲ್ಲಿ. ಇನ್ನು ನಮಗೆ ಕಾಣುವ ಸೂರ್ಯ ಚಂದ್ರರು, ನಕ್ಷತ್ರ ಪುಂಜಗಳು, ಗಾಳಿ, ಮಳೆ, ಮೋಡ, ಮಿಂಚು, ಗುಡುಗು, ಸಿಡಿಲುಗಳಂತಹ ವಿಷಯಗಳು ಮತ್ತು ಅವುಗಳ ಕಾರ್ಯ ವೈಖರಿಯ ಬಗ್ಗೆ ಮತ್ತು ಕಡೆಯದಾಗಿ ನಮ್ಮ ಪ್ರಪಂಚದ ಮತ್ತು ಭೂಮಿಯ ಮೇಲಿನ ಸಕಲ ಪ್ರಾಣಿಗಳ ಬಗ್ಗೆ ವಿಚಾರ ವಿಷಯಗಳೆಲ್ಲ ನಮ್ಮ ತಲೆಗಳಲ್ಲಿ ಸೇರಿಕೊಂಡು ಒಂದು ಸಂತೆಯಲ್ಲಿ ಆಗುವಷ್ಟು ಗಲಭೆ ಶಬ್ಧ ನಮ್ಮ ಅಂತರ್ಯದಲ್ಲಿ ನಡೆಯುತ್ತಿರುತ್ತದೆ ಎನ್ನುವುದೇ ಈ ಕಗ್ಗದ ಹೂರಣ.
57
ಆಗುಂಬೆಯಸ್ತಮಯ ದ್ರೋಣಪರ್ವತದುದಯ ।
ತ್ಯಾಗರಾಜನ ಗಾನ ವಾಲ್ಮೀಕಿ ಕವನ ॥
ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ ।
ಯೋಗಪುಲಕಾಂಕುರವ? - ಮಂಕುತಿಮ್ಮ ॥ ೫೭ ॥
ಆಗುಂಬೆಯ ಸೂರ್ಯಾಸ್ತಮಾನ ದ್ರೋಣಪರ್ವತದ ಸೂರ್ಯೋದಯ, ತ್ಯಾಗರಾಜನ ಗಾನ ವಾಲ್ಮೀಕಿಯ ಕವನ ಇವೆಲ್ಲವೂ ನಮ್ಮ ಅಂತರಂಗದಲ್ಲಿ ಸತ್ಯದ ದರ್ಶನವನ್ನು ಮಾಡಿಸಿ ರೋಮಾಂಚನಗೊಳಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
58
ಮಲೆಕಣಿವೆಗಳ ಬೆರಗು ಪ್ರಕೃತಿಕೊಪದ ಗುಡುಗು ।
ಕಳೆಯೊಲವು ನಲ್ಲೆಯ ವಿಯೊಗವಿಂತಹವು ॥
ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ ।
ನೊಳದನಿಯದೊಂದರಿಂ - ಮಂಕುತಿಮ್ಮ ॥ ೫೮ ॥
ಬೆಟ್ಟಗುಡ್ಡಗಳು ಅದರಲ್ಲಿರುವ ಕಣಿವೆಗಳು, ಪ್ರಕೃತಿ ವಿಕೋಪದ ಗುಡುಗು ಸಿಡಿಲು, ಮಳೆ, ಚಂದಮಾರುತದಂತಾ ವಿಷಯಗಳು, ಸ್ನೇಹಿತನ ಒಲವು, ಪ್ರೇಯಸಿಯ ವಿಯೋಗದಂತಾ ವಿಷಯಗಳು ನಮ್ಮ ಮನಸ್ಸನ್ನು ಆಳುವಾಗ, ಇವುಗಳನ್ನೆಲ್ಲ ನಿಲ್ಲಿಸಿ ಮನಸ್ಸನ್ನು ನನ್ನ ಒಳದನಿಯು ಮಾತ್ರ ಸುಮ್ಮನಾಗಿಸುವುದು ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಹೇಳುತ್ತಾರೆ.