Kagga Logo

Joyful heart

49

53

49

ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ ।
ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು ॥
ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ? ।
ದಂಡವದನುಳಿದ ನುಡಿ - ಮಂಕುತಿಮ್ಮ ॥ ೪೯ ॥

ಪಾಂಡಿತ್ಯವನ್ನು ಪ್ರತಿಪಾದಿಸುವ ಪಂಡಿತರೆ ಮತ್ತು ಶಾಸ್ತ್ರವನ್ನು ಪ್ರತಿಪಾದಿಸುವ ಶಾಸ್ತ್ರಿಗಳೆ, ನಿಮ್ಮ ಪಾಂಡಿತ್ಯದಿಂದ ಮತ್ತು ಶಾಸ್ತ್ರ ಪ್ರತಿಪಾದನೆಯಿಂದ ಸುಳ್ಳನ್ನೇ ನಿಜವೆಂದು ನಿರೂಪಿಸಲು ಮತ್ತು ಇವೆರಡರ ಮಧ್ಯೆ ಒಂದು ಸೇತುವೆಯನ್ನು ಕಟ್ಟುವಾಗ ಸಾಮಾನ್ಯ ಮನುಜರ ಹೃದಯದಾಳದಲ್ಲಿ ಇರುವ ಗೊಂದಲಗಳು, ಅವರು ಅನುಭವಿಸುವ ಕಾಠಿಣ್ಯಗಳನ್ನು ಕಂಡಿದ್ದೀರಾ ಎಂದು ಕೇಳುತ್ತಾ ಸಾಮಾನ್ಯರ ಮನದ ಭಾವದ ಮುಂದೆ ಎಲ್ಲ ಪಾಂಡಿತ್ಯವೂ ಮತ್ತು ಶಾಸ್ತ್ರಗಳೂ ದಂಡವೆನ್ನುತ್ತಾರೆ (ನಿಷ್ಪ್ರಯೋಜಕ) ಮಾನ್ಯ ಗುಂಡಪ್ಪನವರು.

50

ಮನೆಯೆಲ್ಲಿ ಸತ್ಯಕ್ಕೆ? ಶ್ರುತಿ ತರ್ಕಮಾತ್ರದೊಳೆ? ।
ಅನುಭವಮುಮದರೊಂದು ನೆಲೆಯಾಗದಿಹುದೇಂ? ॥
ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ ।
ಅಣಕಿಪುವು ತರ್ಕವನು - ಮಂಕುತಿಮ್ಮ ॥ ೫೦ ॥

ಸತ್ಯಕ್ಕೆ ಎಲ್ಲಿ ಮನೆ? ಶೃತಿ ತರ್ಕ ಮತ್ತು ವಾದಗಳಲ್ಲಿ ಮಾತ್ರವೇನು? ಮನುಜರ ಅನುಭವವೂ ಸತ್ಯವನ್ನು ನುಡಿಯಬಾರದೇನು? ಮನುಜರ ಹೃದಯದ ಆಂಗಣದಲ್ಲಿ ಹತ್ತು ಹಲವಾರು ಸತ್ಯದ ಭಾವಗಳು ಉದಯಿಸಿ ಈ ಶಾಸ್ತ್ರ ತರ್ಕ ಮತ್ತು ವಾದಗಳು ಪ್ರತಿಪಾದಿಸುವ ಸತ್ಯವನ್ನೆಲ್ಲ ಅಣಕಿಸುತ್ತವೆ ಎನ್ನುತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

51

ಸೆಳೆಯುತಿರ್ಪುವದೊಂದು ಹೊರಬೆಡಗಿನೆಳೆಗಳೆ ।
ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ॥
ಎಳೆದಾಟವೇಂ ಋಣಾಕರ್ಷಣೆಯೊ? ಸೃಷ್ಟಿವಿಧಿ ।
ಯೊಳತಂತ್ರವೊ? ನೋಡು - ಮಂಕುತಿಮ್ಮ ॥ ೫೧ ॥

ಹೊರಜಗತ್ತಿನ ಆಕರ್ಷಣೆಗಳು ನನ್ನೊಳಗಿನ ಚೇತನವನ್ನು ಯಾವುದೋ ಒಂದು ಶಕ್ತಿ ಬಿಗಿದು ಕಟ್ಟಿ ಹಾಕಿ ಎಳೆಯುತ್ತಿದೆ. ಇದು ಏನು ಎಲೆದಾಟವೋ ಅಥವಾ ಪೂರ್ವ ಕರ್ಮಗಳ ಸೆಳೆತವೋ? ಅಥವಾ ಈ ಜಗತ್ತಿನ ಸೃಷ್ಟಿಯ ನಿಯಮದ ಒಳತಂತ್ರವೋ ಎನ್ನುವುದನ್ನು ನೀನೆ ಪರಕಿಸಿ ನೋಡು ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

52

ಗಗನನೀಲಿಮೆಯೆನ್ನ ಕಣ್ಗೆ ಸೊಗೆವೀವಂತೆ ।
ಮುಗಿವ ತರಣಿಯ ರಕ್ತ ಹಿತವೆನಿಸದೇಕೋ! ॥
ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ ।
ಬಗೆವೆನ್ನ ಮನಸಿನೊಳೊ? - ಮಂಕುತಿಮ್ಮ ॥ ೫೨ ॥

ಆಕಾಶದ ತಿಳಿನೀಲಿ ಬಣ್ಣವು ಎನ್ನ ಮನಸ್ಸಿಗೆ ಹಿತವನ್ನು ಕೊಡುತ್ತೆ. ಆದರೆ ಮುಳುಗುವ ಸೂರ್ಯನ ಕೆಂಪು ಬಣ್ಣ ಎನಗೇಕೋ ಹಿತವನ್ನು ಕೊಡುವುದಿಲ್ಲ. ಆ ಹಿತ ಎನ್ನುವುದು ಆಕಾಶದ ನೀಲಿ ಬಣ್ಣದಲ್ಲಿದೆಯೋ ಅಥವಾ ಮುಳುಗುವ ಸೂರ್ಯನ ರಕ್ತ ವರ್ಣದಲ್ಲಿದೆಯೋ ಅಥವಾ ಎರಡೂ ಅಲ್ಲದೆ, ಹಿತವೆಂದು ತಿಳಿಯುವ ನಮ್ಮ ಮನಸ್ಸಿನಲ್ಲಿ ಇದೆಯೋ ಎಂದು ಪ್ರಸ್ತಾಪ ಮಾಡುತ್ತಾರೆ, ಶ್ರೀ ಗುಂಡಪ್ಪನವರು.

53

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? ।
ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ॥
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು ।
ಗುಣಕೆ ಕಾರಣವೊಂದೆ? - ಮಂಕುತಿಮ್ಮ ॥ ೫೩ ॥

ಹೌದಲ್ಲವಾ? ನಮಗೂ ಇಂತಹ ಪ್ರಶ್ನೆಗಳು ಮನದಲ್ಲಿ ಉದ್ಭವವಾಗಿರಬಹುದು, ಹಲವು ಬಾರಿ. ನಾವು ನೋಡುವ ಪ್ರತಿವಸ್ತುವಿನಲ್ಲೂ ಹಲವು ಸೋಜಿಗಗಳನ್ನು ನಾವು ಕಾಣಬಹುದು. ಆದರೆ ಆ ಸೋಜಿಗಕ್ಕೆ ಒಂದು ಕಾರಣವನ್ನು ಹುಡುಕಲು ನಮ್ಮಿಂದಾಗುವುದಿಲ್ಲ. ಏಕೆಂದರೆ ಒಂದು ಕಾರಣದಿಂದ ಆದಂತ ವಸ್ತುವಾವುದೂ ಈ ಪ್ರಪಂಚದಲ್ಲಿ ಇಲ್ಲವೆಂಬುದೆ ನನ್ನ ಗಟ್ಟಿ ನಂಬಿಕೆ. ಹಾರುವ ಹಕ್ಕಿಯ ಬಣ್ಣ, ರೆಕ್ಕೆಯ ವಿನ್ಯಾಸ, ಹಾವಿನ ರೂಪ, ಅದರ ಮೈಮೇಲಿನ ಚಿತ್ತಾರಗಳು, ಅಬ್ಬಾ ಎಂತಹ ವಿಚಿತ್ರ. ಇದೊಂದೂ ನಮಗೆ ಅರ್ಥವಾಗುವುದಿಲ್ಲ. ಎಲ್ಲವೂ ವಿಸ್ಮಯ.