Kagga Logo

World is a temple

789

793

789

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ॥
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ ।
ಎಲ್ಲರೊಳಗೊಂದಾಗು - ಮಂಕುತಿಮ್ಮ ॥ ೭೮೯ ॥

ನೀನು, ಬೆಟ್ಟದಡಿ ದನಕರುಗಳಿಗೆ ಮೇವಾಗುವಂತಹ ಹುಲ್ಲಾಗು, ನಿನ್ನ ಮನೆಗೆ ಸುವಾಸನಾಭರಿತವಾದ ಮಲ್ಲಿಗೆಯ ಹೂವಂತಾಗು, ವಿಧಿ ನಿನ್ನ ಬದುಕಿನಲ್ಲಿ ಕಷ್ಟಗಳನ್ನು ಮಳೆಯಂತೆ ಸುರಿದರೆ, ನೀ ಕಲ್ಲಂತೆ ಗಟ್ಟಿಯಾಗಿ ಅವುಗಳನ್ನು ಎದುರಿಸು , ದೀನರಿಗೆ ದುರ್ಬಲರಿಗೆ ನೀನು ಬೆಲ್ಲದಂತಾಗು, ಎಲ್ಲರೊಳು ಒಂದಾಗು ಎಂದು ಸ್ವಾರಸ್ಯಕರ ಬದುಕಿನ ಗುಟ್ಟನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

790

ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ ।
ನಾನೇನು ಹುಲ್ಲುಕಡ್ಡಿಯೆಂಬ ನುಡಿ ಬೇಡ ॥
ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ ।
ತಾಣ ನಿನಗಿಹುದಲ್ಲಿ - ಮಂಕುತಿಮ್ಮ ॥ ೭೯೦ ॥

ಕೈಗೆ ಸಿಕ್ಕ ಯಾವುದಾದರೂ ಉದ್ಯೋಗವನ್ನು ಮಾಡು. ‘ನಾನು ಹುಲುಮಾನವ, ನನ್ನ ಕೈಲೇನಾಗುತ್ತದೆ’ ಎನ್ನುವ ಮಾತನ್ನು ಆಡಬೇಡ. ಈ ಜಗತ್ತೆಂಬ ದೇವಾಲಯದಲ್ಲಿ ಯಾವ ಕೆಲಸವೂ ಹೀನವಾದ ಕೆಲಸವಿಲ್ಲ. ನಿನಗೂ ಏನಾದರೂ ಕೈಂಕರ್ಯ, ಕೆಲಸ ಮಾಡಲು ಅವಕಾಶವಿದೆ ಎಂದು ಹೇಳುತ್ತಾ ಜಗತ್ತಿನಲ್ಲಿ ಸೃಷ್ಟಿಯಾದ ಪ್ರತೀ ವಸ್ತುವಿಗೂ ಒಂದು ಪ್ರಯೋಜವಿದೆ ಎಂಬ ಸತ್ಯವನ್ನು ಪ್ರಕಾಶಿಸಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

791

ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ ।
ಜನರೆಲ್ಲರಾಗುಡಿಯ ಕೆಲಸದಾಳುಗಳು ॥
ಮನೆಯೇನು? ನಾಡೇನು? ಕುಲವೇನು? ಮಠವೇನು? ।
ಎಣಿಸೆಲ್ಲವದೆಯೆಂದು - ಮಂಕುತಿಮ್ಮ ॥ ೭೯೧ ॥

ಪ್ರತಿನಿತ್ಯವೂ ಕುಸಿದು ಬಿದ್ದು ಮತ್ತೆ ಮತ್ತೆ ಕಟ್ಟಲ್ಪಡುವುದೇ ಈ ಜಗತ್ತೆಂಬ ದೇವಾಲಯ. ಕೆಡವುವ ಮತ್ತು ಕಟ್ಟುವ ಕೆಲಸದಲ್ಲಿ ಎಲ್ಲಾ ಜನರೂ ಕೆಲಸದಾಳುಗಳು. ಮನೆ, ನಾಡು, ಕುಲ, ಮಠ ಹೀಗೆ ಎಲ್ಲದರಲ್ಲೂ ಮತ್ತು ಎಲ್ಲವೂ ಆ ಪರಮಾತ್ಮನೆಂದು ತಿಳಿದುಕೋ ಎಂದು, ಗುಂಡಪ್ಪನವರು ಆದೇಶಿಸಿದ್ದಾರೆ ನಮಗೆ ಈ ಮುಕ್ತಕದಲ್ಲಿ.

792

ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು ।
ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ॥
ಬೇಸರದ ಪಾತಕಸ್ಮೃತಿಯ ಚುಚ್ಚದಿರ್: ಎನ್ನು- ।
ತೀಶನನು ಬೇಡುತಿರೊ - ಮಂಕುತಿಮ್ಮ ॥ ೭೯೨ ॥

" ಹೇ ಪರಮಾತ್ಮ, ನನ್ನಲ್ಲಿ ಆಸೆಗಳು ಉಂಟಾಗದಂತೆ ಮಾಡು , ಜೀವನದ ಬಂಧಗಳಿಂದ ಬಿಗಿಯಲ್ಪಡದಂತೆ ಮಾಡು. ಬದುಕಿನ ಕಷ್ಟತರವಾದ ಪರೀಕ್ಷೆಗಳಿಗೆನ್ನ ಗುರಿಮಾಡದಿರು. ಗತಿಸಿಹೋದ ಕಾಲದಲ್ಲಿ ನಾನು ಮಾಡಿದ ಪಾಪಗಳ ನೆನಪು ನನಗೆ ಇಲ್ಲದಂತಾಗುವಂತೆ ಕರುಣಿಸು" ಎಂದು ಸದಾಕಾಲ ಆ ಜಗದ್ರಕ್ಷಕನನ್ನು ಬೇಡುತ್ತಿರು ಎಂದು ತಮಗೆ ತಾವೇ ಹೇಳಿಕೊಳ್ಳುತ್ತಾ, ನಮಗೂ ಯಾವ ಮಾರ್ಗ ಅನುಸರಣೀಯ ಎಂದು ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

793

ನಾನೆಂಬುದೊಂದಂಶವಿತರ ಜಗವೊಂದಂಶ ।
ನಾನು ನೀನುಗಳಳಿದ ಸರ್ವೈಕ್ಯವೊಂದು ॥
ಧ್ಯಾನಿಸುತ್ತೈಕ್ಯವನು ಪಾಲಿಸುವುದುಭಯವನು ।
ಜಾಣಿನಾ ನಾಟಕವೊ - ಮಂಕುತಿಮ್ಮ ॥ ೭೯೩ ॥

ನಾನು ಎಂಬುದು ಒಂದು ಅಂಶ. ನಾವಿರುವ, ಈ ಜಗತ್ತು ಎಂಬುದು ಇನ್ನೊಂದು ಅಂಶ. ನಾನು ನೀನು ಎಂಬ ಬೇಧವು ಇಲ್ಲವಾದರೆ ಎಲ್ಲವೂ ಐಕ್ಯವಾಗಿ ಒಂದಾಗುತ್ತದೆ. ಭೇಧಗಳಿರುವ ಈ ಜಗತ್ತಿನಲ್ಲಿ ಇದ್ದು ಸಾಮಾನ್ಯವಾಗಿ ಜೀವಿಸುತ್ತಾ ಅಂತಹ ‘ಸರ್ವೈಕ್ಯ’ವನ್ನು ಧ್ಯಾನಿಸುವುದು, ಜಾಣತನದ ನಾಟಕ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.