Kagga Logo

Calming the senses

784

788

784

ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ ।
ಭಾನು ತಣುವಾದಾನು; ಸೋಮ ಸುಟ್ಟಾನು ॥
ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು ।
ಮೌನದಲಿ ಸಿದ್ಧನಿರು - ಮಂಕುತಿಮ್ಮ ॥ ೭೮೪ ॥

ದಗದಗಿಸುವ ಸೂರ್ಯನೇ ತಣ್ಣಗಾಗಬಹುದು, ಶೀತಲ ಚಂದ್ರ ಬೆಂಕಿಯಾಗಿ ಸುಡಬಹುದು. ಭೂಮಿಯೇ ಕರಗಿಹೋಗಬಹುದು. ಜಗತ್ತಿನಲ್ಲಿ ಏನೂ ಇಲ್ಲದೆ ಸಂಪೂರ್ಣ ಶೂನ್ಯವಾಗಬಹುದು. ಇದಾವುದಕ್ಕೂ ವಿಚಲಿತನಾಗದೆ, ಮೌನದಿಂದ ಎಲ್ಲವನ್ನೂ ಎದುರಿಸಲಿಕ್ಕೆ ಸಿದ್ಧನಾಗಿರು, ಎಂದು ಬದುಕಿನಲ್ಲಿ ನಿರ್ಭಯವಾದ ಜೀವನಕ್ಕೆ ಒಂದು ಕಿವಿಮಾತನ್ನು ನಮಗೆ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

785

ಕುಂದದೆಂದಿಗುಮೆನ್ನಿಸುವ ಮನದ ಕಾತರತೆ ।
ಯೆಂದೊ ತಾನೆ ಬಳಲಿ ತಣ್ಣಗಾಗುವುದು ॥
ಮಂದದಾ ಕಾರ್ಮೋಡ ಬಿರಿದು ರವಿ ಬೆಳಗುವನು ।
ಅಂದಿನಾ ಸುಖವೆ ಸುಖ - ಮಂಕುತಿಮ್ಮ ॥ ೭೮೫ ॥

ದಪ್ಪ ಮತ್ತು ದಟ್ಟವಾದ ಕಾರ್ಮೋಡ, ಮಳೆ ಸುರಿದೋ ಅಥವಾ ಗಾಳಿಯ ಆರ್ಭಟಕ್ಕೋ ಚದುರಿಹೋಗಿ, ಸೂರ್ಯನ ಬೆಳಕು ಮತ್ತೆ ಬೆಳಗುವಂತೆ, ಎಂದಿಗೂ ಕಡಿಮೆಯಾಗುವುದೇ ಇಲ್ಲವೇನೋ ಎನ್ನುವ ಮನಸ್ಸಿನ ಕಳವಳ, ಕಾತರತೆ, ತಾನೇ ತಾನಾಗಿ ಕಡಿಮೆಯಾಗಿ ಮನಸ್ಸಿಗೆ ನಿರಾಳವಾದಾಗ ನಮಗಾಗುವ ಸುಖವೇ, ನಿಜವಾದ ಸುಖ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

786

ಅನ್ತವೆಲ್ಲಕುಮಿರುವುದಿರಲಿ; ವಿಷಯೇಂದ್ರಿಯದ ।
ಸಂತಾಪವುಂ ಮುಗಿವುದೆಂಬುದಲ ಪುಣ್ಯ? ॥
ಎಂತೊ, ನಿನ್ನಾಜ್ಞೆಯಿನೊ, ತಾಂ ಸೋತೋ, ಬೇಸತ್ತೊ ।
ಶಾಂತಿವಡೆಯಲಿ ಕರಣ - ಮಂಕುತಿಮ್ಮ ॥ ೭೮೬ ॥

ಎಲ್ಲಕ್ಕೂ ಒಂದು ಅಂತ್ಯವಿದೆ ಎನ್ನುವ ವಿಚಾರ ಒತ್ತಟ್ಟಿಗಿರಲಿ. ವಿಷಯಾಸಕ್ತಿಯಿಂದ ಇಂದ್ರಿಯಗಳು ಪಡುವ ದುಃಖಕ್ಕೆ ಒಂದು ಅಂತ್ಯವುಂಟು ಎನ್ನುವುದೇ ಪುಣ್ಯ. ಆ ಅಂತ್ಯ ಹೇಗಾದರೂ ಆಗಬಹುದು, ನೀನೇ ಇಂದ್ರಿಯ ನಿಗ್ರಹ ಮಾಡಬಹುದು ಅಥವಾ ಅವುಗಳೇ ಸೋತು ಹೋಗಬಹುದು ಅಥವಾ ಅನುಭವಿಸಿದ್ದು ಸಾಕಾಗಿ ಬೇಸತ್ತುಹೋಗಬಹುದು. ಹೇಗಾದರಾಗಲಿ ಇಂದ್ರಿಯಗಳ ಪ್ರಚೋದನೆಯಿಂದ ನಿರಂತರ ಕ್ರಿಯೆಯಲ್ಲಿ ಮಗ್ನರಾದ ಅಂಗಾಂಗಗಳು ಶಾಂತವಾದರೆ ಸಾಕು ಎಂದು ಬದುಕಿನಲ್ಲಿ ನಾವು ಪಡೆಯಬೇಕಾದ ನಿಜವಾದ ಶಾಂತಿಯ ಸ್ವರೂಪವನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

787

ಶೀತಾಳೆ ಸಿಡುಬು ಶಿಶುಗಳ ಕುಲುಕಿ ತೆರಳುವುದು ।
ಪ್ರೀತಿಕಾಮನೆಗಳಷ್ಟಿಷ್ಟು ಬೆಳೆದವರ ॥
ಯಾತನೆಗಳಿಂ ಕುದಿಸಿ ಕುಲುಕಿ ಬಳಿಕಾರುವುವು ।
ಕಾತರತೆ ಕಳೆಯೆ ಸುಖ - ಮಂಕುತಿಮ್ಮ ॥ ೭೮೭ ॥

ಮಕ್ಕಳಿಗೆ ಸಿಡುಬು ಶೀತಾಳೆಗಳಂತಹ ಖಾಯಿಲೆಗಳು ಬಂದು, ಅವರನ್ನು ಒಂದು ಬಾರಿ ನಡುಗಿಸಿ ಮತ್ತೆ ಬಾರದಂತೆ ಹೊರಟು ಹೋಗುತ್ತವೆ. ದೊಡ್ಡವರನ್ನು ಪ್ರೀತಿ, ಆಸೆಗಳಂತಹ ಭಾವಗಳು ಒಂದು ರೋಗದಂತೆ ಹಿಡಿದು ಯಾತನೆಗೊಳಪಡಿಸುತ್ತದೆ. ಕೆಲಕಾಲ ಅಲುಗಾಡಿಸಿ ಮತ್ತೆ ಆರಿಹೋಗುತ್ತವೆ. ಹಾಗಿ ಆರಿ ನಮ್ಮಲ್ಲಿನ ಕಾತರತೆ ಕಡಿಮೆಯಾದರೆ ಅದೇ ಸುಖ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

788

ಜ್ವರ ಬಂದು ತನು ಬೆಂದ ಯಾತನೆಯ ಮಾತೇನು? ।
ಉರಿಬೇಗೆಯಿಳಿಯೆ ಹೊಸ ಹೊಸಬನಾ ನರನು ॥
ಕರಣತಪನೆಗಳಿಳಿಯೆ, ಕಾರಣವದೇನಿರಲಿ ।
ಮರುಜನ್ಮವಾತ್ಮಂಗೆ - ಮಂಕುತಿಮ್ಮ ॥ ೭೮೮ ॥

ಜ್ವರ ಬಂದು ತನು ಎಂದರೆ ದೇಹ ಆ ಜ್ವರದ ತಾಪದಿಂದ ಬೆಂದು ಯಾತನೆಯನ್ನು ಅನುಭವಿಸಿದ ನಂತರ, ಆ ಜ್ವರ, ಕಡಿಮೆಯಾಗಿ ಚೇತರಿಸಿಕೊಳ್ಳುವಾಗ ಒಂದು ರೀತಿಯ ಹೊಸತನದ, ಅನುಭವವಾಗುತ್ತದೆಯಲ್ಲವೇ, ಅದೇ ರೀತಿ ವಾಂಛೆಗಳಿಂದ ಉಂಟಾದ ಬೇಗೆಯೂ ಅಡಗಿ ಅಂದ್ರಿಯಗಳು ಶಾಂತವಾದರೆ ಮನುಷ್ಯನಿಗೆ ಅದು ಮರುಜನ್ಮದ ರೀತಿ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.