Time has a share
779
—
783
779
ದೊರೆವ ಜೀತಕೆ ದುಡಿತ, ಮರುದಿನದ ಚಿಂತೆ ಮಿತ ।
ಹೊರೆಯ ಹಗುರಾಗಿಸುವ ಕೆಳೆಯರೊಡನಾಟ ॥
ಸರಳತೆಯ ಪರಿತುಷ್ಟಿ, ಪರಮಾರ್ಥ ದೃಷ್ಟಿಯಿವು ।
ಸರಿಗೂಡೆ ಸುಕೃತವದು - ಮಂಕುತಿಮ್ಮ ॥ ೭೭೯ ॥
ನಮಗೆ ಎಷ್ಟು ಹಣ ಸಿಗುತ್ತದೋ ಅಷ್ಟಕ್ಕೆ ನಿರ್ವಂಚನೆಯಿಂದ ದುಡಿತ, ಮುಂದೇನು ಎನ್ನುವುದರ ಕುರಿತು ಮಿತವಾದ ಚಿಂತೆ, ಜೀವನದ ಹೊರೆಯನ್ನು ಹಗುರಾಗಿಸಿಕೊಳ್ಳಬಹುದಾದಂತಹ ಸಂಗ ಸಹವಾಸಗಳು, ಸರಳವಾದಂತಹ ಜೀವನದ ಶೈಲಿಯಿದ್ದರೆ, ಬದುಕಿನಲ್ಲಿ ಪರಮಾರ್ಥ ಚಿಂತನೆಗೆ ಸಾಕಷ್ಟು ಸಮಯಸಿಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
780
ಮಳೆಗೊಂದು ಬೆಳೆಗೊಂದು ಫಲಕೊಂದು ಋತುವಂತೆ ।
ಬೆಳೆಯಿಪುದು ಜೀವವೃಕ್ಷವ ಕಾಲನಿಯತಿ ॥
ತಿಳಿವುಮೊಳ್ತನಮುಂ ವಿರಕ್ತಿಯುಂ ಮುಕ್ತಿಯುಂ ।
ಗಳಿಗೆ ಸರಿಸೇರ್ದಂದು - ಮಂಕುತಿಮ್ಮ ॥ ೭೮೦ ॥
ಮಳೆಗೆ ಒಂದು ಋತು, ಬೆಳೆಗೆ ಒಂದು ಋತು, ಫಲಕ್ಕೆ ಒಂದು ಋತುವಿರುವಂತೆ, ಈ ಜೀವವೆಂಬ ವೃಕ್ಷವೂ ಕಾಲಾನುಕಾಲಕ್ಕೆ ಬೆಳೆಯುತ್ತದೆ.ಅದೇ ರೀತಿಸರಿಯಾದ ಸಮಯ ಕೂಡಿಬಂದಾಗ ತಿಳಿವು, ಒಳ್ಳೆಯತನವು, ವಿರಕ್ತಿ ಮತ್ತು ಮುಕ್ತಿಗಳೂ ಲಭ್ಯವಾಗುತ್ತದೆ ಎಂಬ ಅರಿವನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
781
ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? ।
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ ॥
ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ ।
ತಾಳುಮೆಯೆ ಪರಿಪಾಕ - ಮಂಕುತಿಮ್ಮ ॥ ೭೮೧ ॥
ಸೂರ್ಯೋದಯದ ಸಮಯಕ್ಕೆ ಕಾಳ ಬಿತ್ತಿದರೆ ಸಂಜೆಯ ವೇಳೆಗೆ ಅದು ಮೊಳೆತು ಪೈರಾಗುವುದೇ? ಎಲ್ಲಕ್ಕೂ ಸಮಯದ ಒಂದು ನಿಯಮವುಂಟು. ಅಡುಗೆ ಮಾಡುವಾಗ ಇಟ್ಟ ವಸ್ತುಗಳು ಕಾದು, ಬೆಂದು ಪಕ್ವವಾಗಲು ಒಂದು ಸಮಯದ ಮಿತಿ ಇದೆ ಅಲ್ಲವೇ? ಆತುರ ಪಟ್ಟರೆ ಅಡುಗೆ ಪಕ್ವವಾಗುವುದೇ ಹಾಗಾಗಿ ಜಗತ್ತಿನಲ್ಲಿ ನಾವು ಪಕ್ವವಾಗಬೇಕಾದರೆ ತಾಳ್ಮೆ ಬಹಳ ಮುಖ್ಯ ಎಂದು ಉಲ್ಲೇಖ ಮಾಡಿದ್ದಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ.
782
ಅಂದಿಗಂದಿನ ಕೆಲಸ, ಸಂದನಿತರಲಿ ತೃಪ್ತಿ ।
ಕುಂದದುಬ್ಬದ ಮನಸು ಬಂದುದೇನಿರಲಿ ॥
ಬಂಧು ಮತಿ ಲೋಕದಲಿ, ಮುನ್ ದೃಷ್ಟಿ ಪರಮದಲಿ ।
ಹೊಂದಿರಲಿವದು ಪುಣ್ಯ - ಮಂಕುತಿಮ್ಮ ॥ ೭೮೨ ॥
ಅಂದಿಗೆ ಅಂದಿನ ಕೆಲಸ, ಬಂದದ್ದರಲ್ಲಿ ಸಂತೃಪ್ತಿ. ಏನೇ ಸಿಕ್ಕರೂ, ಕಡಿಮೆ ಸಿಕ್ಕರೆ ಕೊರಗದೆ, ಸಿಕ್ಕರೆ ಗರ್ವಪಡದೆ, ಜಗತ್ತಿನ ಎಲ್ಲರೂ ನನ್ನ ಬಂಧುಗಳೇ ಎನ್ನುವಭಾವದಿಂದ, ಜಗತ್ತಿನ ಮೇಲೆ ಅಲ್ಲದೆ ಪರತತ್ವದ ದೃಷ್ಟಿ ಇತ್ತು ಪ್ರಯತ್ನ ಯಾರಿಗೆ ಮಾಡಲಾಗುತ್ತದೆಯೋ, ಅವರೇ ಪುಣ್ಯವಂತರು ಎಂದು ಉಲ್ಲೇಖಮಾಡಿದ್ದಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ.
783
ಬುದ್ಧಿಮಾತಿದು ನಿನಗೆ; ಸಿದ್ಧನಿರು ಸಕಲಕ್ಕಂ ।
ಎದ್ದು ಕುಣಿಯಲಿ ಕರ್ಮ; ದೈವ ನಿದ್ರಿಸಲಿ ॥
ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ ।
ಸಿದ್ಧನಾಗೆಲ್ಲಕಂ - ಮಂಕುತಿಮ್ಮ ॥ ೭೮೩ ॥
ನೀ ಮಾಡಿದ ಕರ್ಮಾನುಸಾರ ನಿನ್ನ ಜೀವನ ಎಷ್ಟೇ ಏರುಪೇರಾಗಲಿ ಅಥವಾ ದೈವದ ಸಹಾಯ ನಿನಗೆ ಇಲ್ಲದಿರಲಿ. ನಿನಗೆ ಇದು ಬುದ್ಧಿಮಾತು, ಕೇಳಿಕೋ ಎಲ್ಲಕ್ಕೂ ಸಿದ್ಧನಿರು. ಜಗತ್ತಿನಲ್ಲಿ ಪವಾಡಗಳು ಮತ್ತು ಅದ್ಭುತಗಳು ಅಪರೂಪವಲ್ಲ ಮತ್ತು ಪರಮಾತ್ಮನ ಶಕ್ತಿಗೆ ಮಿತಿಯೇ ಇಲ್ಲ, ಹಾಗಾಗಿ ನೀನು ಎಲ್ಲದಕ್ಕೂ ಸಿದ್ಧನಾಗಿರು ಎಂದು ಧೈರ್ಯದಿಂದ ಬದುಕಬೇಕಾದ ಮನಸ್ತತ್ವವನ್ನು ಹೇಗೆ ರೂಢಿಸಿಕೊಳ್ಳಬೇಕೆಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.