Freedom from bondage
794
—
798
794
ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ ।
ಹೊನಲು ನೂರೀ ಬಾಳ ಕಡಲನುಬ್ಬಿಸಲಿ ॥
ತನುಬಂಧ ಕಳಚಿ, ಜೀವವಖಂಡಚೇತನದ ।
ಕುಣಿತದಲಿ ಕೂಡಿರಲಿ - ಮಂಕುತಿಮ್ಮ ॥ ೭೯೪ ॥
ನೂರಾರು ನದಿಗಳು ಬಂದು ಸೇರಿ ಕಡಲು ಉಬ್ಬುವಂತೆ, ಬಾಳಿನಲ್ಲಿ ಮನಸ್ಸಿನ ಕಡಲೂ ಸಹ ನೂರಾರು ಅನುಭವಗಳ ಮಹಾಪೂರದಿಂದ ಬೆಳೆಯಬೇಕು, ವಿಕಾಸಗೊಳ್ಳಬೇಕು. ದೇಹದ ವ್ಯಾಮೋಹವನ್ನು ತೊರೆದು ಪರಬ್ರಹ್ಮವಸ್ತುವಿನ ತಾಂಡವದೊಡಗೂಡಿ, ನಿನ್ನ ಆತ್ಮವೂ ಸಂಭ್ರಮಿಸಲಿ ಎಂದು ಒಂದು ಅದ್ಭುತವಿಚಾರವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
795
ಮೊಳೆವ ಸಸಿಯೊಳು ನಾನು, ತೊಳಗುವಿನನೊಳು ನಾನು ।
ಬೆಳೆವ ಶಿಶುವೊಳು ನಾನು, ಕೆಳೆನೋಟ ನಾನು ॥
ಕಳಕಳಿಸುವೆಲ್ಲಮುಂ ನಾನೆಂದು ಭಾವಿಸುತೆ ।
ಒಳಗೂಡು ವಿಶ್ವದಲಿ - ಮಂಕುತಿಮ್ಮ ॥ ೭೯೫ ॥
ಮೊಳೆಯುವ ಸಸಿಯಲ್ಲಿ ನಾನು, ಬೆಳಗುವ ಪ್ರಭೆಯಲ್ಲಿ ನಾನು ಬೆಳೆವ ಶಿಶುವಿನಲ್ಲಿ ನಾನು, ಸ್ನೇಹಭಾವದಲ್ಲಿ ನಾನು, ಜಗತ್ತಿನ ಎಲ್ಲ ಜನರ ಕಳಕಳಿಯಲ್ಲಿ ನಾನು, ನಾನೆಂಬ ಭಾವದಿಂದ ಜಗತ್ತಿನಲ್ಲಿ ನೀನು ಒಂದಾಗು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
796
ಸರಿ ಹದದ ಕಾಳು ತಿರೆಯಪ್ಪಿದೊಡೆ ಮೊಳೆಯುವುದು ।
ಹುರಿದೊಡದು ಮೊಳೆಯದರಳಹುದು ಬಾಯ್ಸವಿಗೆ ॥
ಪರಮತತ್ತ್ವಜ್ಞಾನಿಯೊಡರಿಸುವ ಕರುಮಗಳು ।
ಮರುಬೆಳೆಗೆ ಬಿತ್ತಲ್ಲ - ಮಂಕುತಿಮ್ಮ ॥ ೭೯೬ ॥
ಸರಿಯಾಗಿ ಹದವಾದ ಕಾಳು ಭೂಮಿಯ ಸಂಸರ್ಗದಿಂದ ಸಸಿಯಾಗಿ ಮೊಳೆಯುವುದು. ಆದರೆ ಅದೇ ಕಾಳನ್ನು ಹುರಿದುಬಿಟ್ಟರೆ ಅದು ಅರಳಾಗಿ ಬಾಯ ರುಚಿಗೆ ದಕ್ಕುತ್ತದೆ. ಪರಮತತ್ವವನ್ನು ಪ್ರತಿಪಾದಿಸುವ ಮತ್ತು ಅನುಸರಿಸುವ ತತ್ವಜ್ಞಾನಿಯ ಕರ್ಮಗಳು ಮುಕ್ತಿಗೆ ಹೊರತು ಮರು ಜನ್ಮಕ್ಕಲ್ಲ ಎಂದು ಜಗದ ಅಂಟು ಮತ್ತು ಅಂಟಿಲ್ಲದ ಸ್ಥಿತಿಗಳ ವಿಶ್ಲೇಷಣೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
797
ಸುಟ್ಟ ಹಗ್ಗದ ಬೂದಿ ರೂಪಮಾತ್ರದಿ ಹಗ್ಗ ।
ಗಟ್ಟಿ ಜಗವಂತು ತತ್ತ್ವಜ್ಞಾನ ಸೋಕೆ ॥
ತೊಟ್ಟಿಹುದು ಲೋಕರೂಪವ, ತಾತ್ತ್ವಿಕನ ವೃತ್ತಿ ।
ಕಟ್ಟದವನಾತ್ಮವನು - ಮಂಕುತಿಮ್ಮ ॥ ೭೯೭ ॥
ಒಂದು ಹಗ್ಗವನ್ನು ಸುಟ್ಟ ನಂತರ ಅದರ ಬೂದಿ ಹಗ್ಗದ ಆಕಾರದಲ್ಲಿ ಇದ್ದರೂ ಹಗ್ಗವಾಗಿರದೆ ಇರುವಂತೆ, ತತ್ವಜ್ಞಾನದ ಬೆಂಕಿಯ ಸ್ಪರ್ಶವಾದ ತತ್ವಶಾಸ್ತ್ರಜ್ಞನು ಲೌಕಿಕನಂತೆ ಕಂಡರೂ ಈ ಜಗತ್ತು ಅವನನ್ನು ತನ್ನತ್ತ ಸೆಳೆಯುವುದರಲ್ಲಿ ವಿಫಲವಾಗುತ್ತದೆ ಎಂದು ತತ್ವಜ್ಞಾನಿಯ ಪರಿಯನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
798
ನೈರಾಶ್ಯನಿರತಂಗೆ ದೇವತೆಗಳಿಂದೇನು? ।
ವೈರಾಗ್ಯಪಥಿಕಂಗೆ ನಷ್ಟಭಯವೇನು? ॥
ಪಾರಂಗತಂಗಂತರಾಳ ದೂರಗಳೇನು? ।
ಸ್ವೈರಪಥವಾತನದು - ಮಂಕುತಿಮ್ಮ ॥ ೭೯೮ ॥
ನಿರಾಶೆಯಿಂದ ಕೂಡಿದವನಿಗೆ ದೇವತೆಗಳಿಂದ ಏನಾಗಬೇಕು? ವೈರಾಗ್ಯದ ಹಾದಿಯಲ್ಲಿ ನಡೆಯುವವನಿಗೆ ನಷ್ಟದ ಭಯವೆಲ್ಲಿರುವುದು? ಅಂತರಂಗದಲ್ಲಿ ಪರತತ್ವವನ್ನು ಅನುಸಂಧಾನ ಮಾಡುವವಗೆ, ಯಾವ ದೂರವೂ ದೊಡ್ಡದಲ್ಲ. ಈ ಮೂರೂ ರೀತಿಯ ಜನರದು ‘ಸ್ವ-ಇಚ್ಚೆ’ ಯ ಹಾದಿ ಎಂದು ವಿಮರ್ಶೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.