Kagga Logo

Coveted position

799

803

799

ಘೋರವನು ಮೋಹವನು ದೇವತೆಗಳಾಗಿಪರು ।
ಭೀರು ಯಾಚಕರಾಸ್ಥೆ ತಪ್ಪದಿರಲೆಂದು ॥
ಆರಿಂದಲೇಂ ಭೀತಿ, ಏಂ ಬಂದೊಡದ ಕೊಳುವ ।
ಪರಮಾರ್ಥಿಕನಿಗೆಲೊ? - ಮಂಕುತಿಮ್ಮ ॥ ೭೯೯ ॥

ಭಯಪಡುವ ಮತ್ತು ಯಾಚಕರಾದ ಜನರು ತಮ್ಮಲ್ಲಿ ಆಸ್ಥೆ ಮತ್ತು ಶ್ರದ್ಧೆಗಳನ್ನು ಎಲ್ಲಿ ಕಳೆದುಕೊಂಡುಬಿಡುವರೋ ಎಂದು ದೇವತೆಗಳು, ಭುವಿಯ ಮನುಜರಿಗೆ ಮೋಹವನ್ನು ಮತ್ತು ಆ ಮೋಹದಿಂದುಂಟಾಗುವ ಘೋರವಾದ ಕಷ್ಟಗಳನ್ನುನೀಡುತ್ತಾರೆ. ಆದರೆ ಏನೇ ಬಂದರೂ ತೆಗೆದುಕೊಳ್ಳುತ್ತೇನೆ, ಒಪ್ಪಿಕೊಳ್ಳುತ್ತೇನೆ ಮತ್ತು ತಡೆದುಕೊಳ್ಳುತ್ತೇನೆ ಎನ್ನುವ ಧೋರಣೆಯನ್ನು ಪಾಲಿಸುವ ಪಾರಮಾರ್ಥವನ್ನು ನಂಬಿಕೊಂಡವನಿಗೆ ಯಾರಿಂದಲೂ ಭೀತಿಯಿರುವುದಿಲ್ಲ ಎಂದು ವಿಮರ್ಶಿಸಿದ್ದಾರೆ ಮಾನ್ಯ ಗುಂಡಪ್ಪನವರು.

800

ಹಣ್ಣೇನು ಕಾಯೇನು ಹೊಟ್ಟೆ ತುಂಬಿರುವಂಗೆ? ।
ಪುಣ್ಯವೇಂ ಪಾಪವೇಂ ಪೂರ್ಣದರ್ಶನಿಗೆ? ॥
ಉನ್ನತ ಶಿಖರದಿಂ ತಿಟ್ಟೇನು ಕುಳಿಯೇನು? ।
ಪೂರ್ಣತೆಗೆ ಸೊಟ್ಟೇನು? - ಮಂಕುತಿಮ್ಮ ॥ ೮೦೦ ॥

ಹೊಟ್ಟೆ ತುಂಬಿ, ಬೇರೇನೂ ತಿನ್ನಲು ಇಷ್ಟಪಡದವನಿಗೆ ಹಣ್ಣಾದರೇನು? ಕಾಯಾದರೇನು? ಪರತತ್ವದ ಪೂರ್ಣ ದರ್ಶನವಾದವನಿಗೆ ಪಾಪವೇನು? ಪುಣ್ಯವೇನು? ಎತ್ತರದ ಬೆಟ್ಟದಲ್ಲಿ ನಿಂತು ನೋಡುವವನಿಗೆ ಕೆಳಗಿನ ಭೂಭಾಗದಲ್ಲಿರುವ ಹಳ್ಳ ದಿಣ್ಣೆಗಳು ಸಮನಾಗಿ ಕಾಣುವಂತೆ ಪೂರ್ಣತೆಯನ್ನು ಸಾಧಿಸಿದವನಿಗೆ ಯಾವುದೂ ಸೊಟ್ಟಗೆ ಕಾಣುವುದಿಲ್ಲ ಎಂದು ಹೇಳುತ್ತಾರೆ ಈ ಮುಕ್ತಕದಲ್ಲಿ.

801

ಕೋಡುಗಲ್ಲನು ಹತ್ತಿ ದೂರವನು ನೋಳ್ಪಂಗೆ ।
ಗೋಡೆಗೊತ್ತುಗಳೇನು? ಮೇಡು ಕುಳಿಯೇನು? ॥
ನೋಡು ನೀನುನ್ನತದಿ ಜನಜೀವಿತವ ।
ಮಾಡುದಾರದ ಮನವ - ಮಂಕುತಿಮ್ಮ ॥ ೮೦೧ ॥

ಎತ್ತರದ ಕೋಡುಗಲ್ಲನ್ನು ಹತ್ತಿ, ಅಲ್ಲಿಂದ ಕೆಳಗೆ ನೋಡುವವನಿಗೆ, ಕೆಳಗೆ ಕಟ್ಟಿರುವ ಗೋಡೆಗಳಾಗಲೀ, ಗೂಟಗಳಾಗಲೀ, ಗುಡ್ದಗಳಾಗಲೀ, ಹಳ್ಳಗಳಾಗಲೀ ಹೇಗೆ ಬಿಡಿಬಿಡಿಯಾಗಿ ಕಾಣುವುದಿಲ್ಲವೋ, ಹಾಗೆಯೇ ನೀನು ಅರಿವಿನ ಉನ್ನತದಿ ನಿಂತು ಉದಾರವಾದ ಮನಸ್ಸಿನಿಂದ ಜನರ ಜೀವಿತವ ನೋಡು ಎಂದು ಆದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು.

802

ಹರ್ಮ್ಯಾಗ್ರಕೇರಿ ಸೋಪಾನದಿನತೀತನಹೆ ।
ನಿರ್ಮಮತೆಗೇರಿ ಕರ್ಮಾತೀತನಪ್ಪೆ ॥
ಬ್ರಹ್ಮಪದದಿಂದ ಧರ್ಮಾಧರ್ಮಳ ನಿಯಮ ।
ನಿರ್ಮಾಲ್ಯವಾಗುವುದು - ಮಂಕುತಿಮ್ಮ ॥ ೮೦೨ ॥

ಉಪ್ಪರಿಗೆಯನ್ನು ಏರಿದಮೇಲೆ, ಅದನ್ನೇರಲು ಬಳಸಿದ ಮೆಟ್ಟಿಲುಗಳಿಗೆ ನೀನು ಅತೀತನಾಗುವೆ. ಮಮಕಾರವನ್ನು ತೊರೆದರೆ, ಕರ್ಮಕ್ಕೆ ಅತೀತನಾಗಿ ನಿಲ್ಲುವೆ. ಅದೇ ರೀತಿ ಬ್ರಹ್ಮಜ್ಞಾನದ ಉತ್ತುಂಗ ಸ್ಥಿತಿಗೆ ತಲುಪಿದ ನಂತರ ಧರ್ಮ ಮತ್ತು ಅಧರ್ಮದ ನಿಯಮಗಳಿಗೆಲ್ಲ ಅತೀತನಾಗುವೆ. ಹೀಗೆ ಮೇಲೇರಲು ಬಳಸಿದ, ಮೆಟ್ಟಿಲು, ಕರ್ಮಗಳು ಮತ್ತು ಧರ್ಮಾಧರ್ಮದ ನಿಯಮಗಳು, ಹಿಂದಿನ ದಿನ ದೇವರಿಗೆ ಅಲಂಕಾರಕ್ಕಾಗಿ ಇಡಲ್ಪಟ್ಟ ಹೂಗಳನ್ನು, ಮರುದಿನ ನೈರ್ಮಾಲ್ಯವೆಂದು ತೆಗೆದುಹಾಕುವಂತೆ, ಎಂದು ಒಂದು ಅದ್ಭುತವಿಚಾರವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

803

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ- ।
ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ॥
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗಿ ।
ಬಲ್ಲವನೆ ಮುಕ್ತನಲ - ಮಂಕುತಿಮ್ಮ ॥ ೮೦೩ ॥

ಎಲ್ಲರಲ್ಲಿ ತಾನು ಮತ್ತು ತನ್ನೊಳಗೆ ಎಲ್ಲರಿದ್ದಾರೆ ಎನ್ನುವಂತೆ ನಡೆದುಕೊಂಡು ಬದುಕಿನಲ್ಲಿ ನಗುತ, ಅಳುತ, ಲೋಕಕ್ಕೆ ಬೆಲ್ಲದಂತೆ ಇದ್ದರೂ ಒಳಗೆ ಕಲ್ಲಂತೆ ಇರಬಲ್ಲವನೇ ಮುಕ್ತ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.