Kagga Logo

Life is the soul of birth

804

807

804

ಶುಭವಾವುದಶುಭವಾವುದು ಲೋಕದಲಿ ನೋಡೆ? ।
ವಿಭಜಿಸಲ್ಕಾಗದನ್ಯೋನ್ಯಸಂಬಂಧ ॥
ಉಭಯವನು ಮೀರ್ದ ಸಾಮ್ಯದ ನೀತಿಯೊಂದಿಹುದು ।
ಅಭಯಪಥವದು ನಿನಗೆ - ಮಂಕುತಿಮ್ಮ ॥ ೮೦೪ ॥

ಹಾಗೆ ನೋಡಿದರೆ ಈ ಜಗತ್ತಿನಲ್ಲಿ ಶುಭ ಮತ್ತು ಅಶುಭ ಎನ್ನುವುದಾವುದು? ಇವೆರಡರನಡುವೆ ಒಂದು ಅನ್ಯೋನ್ಯ ಸಂಬಂಧವಿದೆ ಮತ್ತು ಶುಭಾಶುಭಗಳನ್ನು ಮೀರಿದಂತಹ ಮತ್ತು ಇವೆರಡನ್ನೂ ಸಮನ್ವಯಗೊಳಿಸುವ ಒಂದು ನೀತಿಯಿದೆ. ಆ ನೀತಿಯ ಪಥವನ್ನು ತುಳಿದರೆ ಅಲ್ಲಿ ನಮಗೆ ಅಭಯವೇ ಸಿಗುತ್ತದೆ ಎಂದು ಲೋಕದ ಮತ್ತು ಲೋಕಾತೀತವಾದ ವಿಚಾರವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

805

ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ ।
ಸರ್ವವನು ತನ್ನಾತ್ಮವೆಂದು ಬದುಕುವನು ॥
ನಿರ್ವಿಕಾರಾಂತರಂಗದಿ ಜಗವ ಧರಿಸುವನು ।
ಸರ್ವಮಂಗಳನವನು - ಮಂಕುತಿಮ್ಮ ॥ ೮೦೫ ॥

ಯಾವುದೇ ರೀತಿಯ ಮನೋವಿಕಾರಗಳಿಲ್ಲದೆ, ಜಗತ್ತಿನಲ್ಲಿ ಸಂಚರಿಸುವ ಚೇತನವೇ ತನ್ನ ಆತ್ಮವೆಂದು, ಜಗತ್ತನ್ನು ಧಾರಣೆಮಾಡಿದವನು, ಸಕಲ ರೀತಿಯಲ್ಲೂ ಮಂಗಳಮಯನಾಗಿರುತ್ತಾನೆ ಮತ್ತು ಅವನೇ ಸಾರ್ವಭೌಮನು ಎಂದು ಉಲ್ಲೇಖಮಾಡಿದ್ದಾರೆ, ಈ ಮುಕ್ತಕದಲ್ಲಿ.

806

ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ ।
ನಿರ್ವಿಕಾರದ ನಯನದಿಂ ನೋಳ್ಪುದಾರಿ ॥
ಸರ್ವಧರ್ಮಾಧಾರಿ, ನಿರ್ವಾಣಸಂಚಾರಿ ।
ಉರ್ವರೆಗೆ ಗುರುವವನು - ಮಂಕುತಿಮ್ಮ ॥ ೮೦೬ ॥

ಉಪಕಾರ ಮಾಡಿ ತಾನು ಮಾಡಿದೆನೆಂಬ ಗರ್ವ ಪಡದವನು, ಅಧಿಕಾರವಿದ್ದರೂ ದರ್ಪವನು ತೋರದವನು, ನಿರ್ವಿಕಾರದಿಂದ ಜಗವನ್ನು ನೋಡುವ ಉದಾರಿ, ಎಲ್ಲ ಧರ್ಮಗಳನ್ನೂ ಧರಿಸಿರುವವನು ಮತ್ತು ಮಾನಸಿಕವಾಗಿ ಪರತತ್ವದಲ್ಲಿ ನಿಂತು ನಿರ್ವಾಣದಲ್ಲಿರುವವನು ಈ ಜಗತ್ತಿಗೆ ಗುರುವಂತೆ ಇರುವನು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

807

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು ।
ಜಗದ ಬೀದಿಗಳೊಳು ನಿಜಾತ್ಮ ಯಾತ್ರೆಯನು ॥
ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು ।
ಬಗೆಯಲರಿತವನೆ ಸುಖಿ - ಮಂಕುತಿಮ್ಮ ॥ ೮೦೭ ॥

ಜಗತ್ತಿನ ಕಲ್ಯಾಣದೊಳು ಆತ್ಮ ಕಲ್ಯಾಣವನು, ಜಗತ್ತಿನ ಬೀದಿಗಳಲ್ಲಿ ನಿಜ ಆತ್ಮ ಯಾತ್ರೆಯನು, ಜಗತ್ತಿನ ಬದುಕಿನಲ್ಲಿ ವೈಯಕ್ತಿಕ ಬದುಕಿನ ಪರಿಪೂರ್ಣತೆಯನ್ನು ಕಾಣಬಲ್ಲವನೇ ಸುಖಿ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.