Harmony
808
—
813
808
ಚಿರ ಶಿಕ್ಷೆಯಿಂ ನಿನಗೆ ಸರ್ವಾತ್ಮತಾಭ್ಯಾಸ ।
ಸರಳ ಸಹಜವದಹುದು ಮೂಗಿನುಸಿರವೊಲು ॥
ಪರನಿಯತಿಯಿರದು ಸ್ವತಸಿದ್ಧ ನಿಯತಿಯಿರೆ ।
ಹೊರಸಡಿಲಕೊಳಹಿಡಿತ - ಮಂಕುತಿಮ್ಮ ॥ ೮೦೮ ॥
ಕಾಣುವ ಎಲ್ಲೆಲ್ಲೂ ಮತ್ತು ಕಾಣುವ ಎಲ್ಲದರಲ್ಲೂ ಆ ಪರಬ್ರಹ್ಮವಸ್ತುವನ್ನೇ ಕಾಣುವ ಅಭ್ಯಾಸವಾಗಬೇಕಾದರೆ ಮನಸ್ಸು ಬುದ್ಧಿಗಳಿಗೆ ನಿರಂತರ ಶಿಕ್ಷಣವಾಗಬೇಕು. ಸಹಜವಾದ ನಮ್ಮ ಉಸಿರಾಟದಂತೆ ಆ ಭಾವ ನಮ್ಮಲ್ಲಿ ಮೂಡಬೇಕು. ಇದಕ್ಕೆ ಹೊರಗಿನ ನಿಯಮಗಳಾವುದೂ ಇರುವುದಿಲ್ಲ, ಅದು ಸ್ವತಃ ಅಭ್ಯಾಸದಿಂದ ತನ್ನಲ್ಲಿ ತಾನೇ ಕಂಡುಕೊಂಡ ಸತ್ಯವಾಗಬೇಕು. ಅಂತಹ ಸ್ಥಿತಿ ತಲುಪಲು ಹೊರಗೆ ಸಹಜವಾಗಿ ಎಲ್ಲರಂತೆಯೇ ಇದ್ದರೂ, ಒಳಗೆ ಮನಸ್ಸುಬುದ್ಧಿಗಳನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರಬೇಕು, ಎನ್ನುವುದೇ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.
809
ದ್ವೈತವೇನದ್ವೈತವೇನಾತ್ಮದರ್ಶನಿಗೆ? ।
ಶ್ರೌತಾದಿವಿಧಿಯೇನು? ತಪನಿಯಮವೇನು? ॥
ನೀತಿ ಸರ್ವಾತ್ಮಮತಿಯದರಿನಮಿತ ಪ್ರೀತಿ ।
ಭೀತಿಯಿಲ್ಲದನವನು - ಮಂಕುತಿಮ್ಮ ॥ ೮೦೯ ॥
ಆತ್ಮದರ್ಶನವಾದವನಿಗೆ ‘ದ್ವೈತ’ ಮತ್ತು ಅದ್ವೈತದಿಂದ ಏನಾಗಬೇಕು?. ಶ್ರುತಿಗಳು ವಿಧಿಸಿರುವ ನಿಯಮಗಳ ಪಾಲನೆ, ತಪಸ್ಸು ಮುಂತಾದವುಗಳನ್ನು ಅವನು ಮಾಡಬೇಕೆಂದಿಲ್ಲ. ಅವನಿಗೆ ಜಗತ್ತಿನಲ್ಲೆಲ್ಲಾ ಪರಮಾತ್ಮನ ಮತ್ತು ಪರತತ್ವದ ದರ್ಶನವಾಗುತ್ತಿರುವಾಗ ಅದರಿಂದ ಎಲ್ಲರಲ್ಲೂಅಮಿತವಾದ ಪ್ರೀತಿಯನ್ನು ಹೊಂದಿರುತ್ತಾನಾದ್ದರಿಂದ ಅವನು ನಿರ್ಭೀತನಾಗಿರುತ್ತಾನೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
810
ಬರಿಭಕ್ತಿ ಬರಿಕರ್ಮ ಬರಿತರ್ಕ ದೊರಕಿಸದು ।
ಪರಮಾತ್ಮ ದರ್ಶನವ; ಬೇಕದಕೆ ತಪಸು ॥
ಪರಿಪೂರ್ಣ ಜೀವನಾನುಭವತಾಪದಿ ಮತಿಯು ।
ಪರಿಪಕ್ವವಾಗಲದು - ಮಂಕುತಿಮ್ಮ ॥ ೮೧೦ ॥
ಕೇವಲ ಭಕ್ತಿ, ಕರ್ಮ ಅಥವಾ ತರ್ಕದಿಂದ ಪರಮಾತ್ಮ ದರ್ಶನವಾಗುವುದಿಲ್ಲ. ಅದಕ್ಕೆ ತಪಸ್ಸು ಬೇಕು, ಜೀವನದ ಪರಿಪೂರ್ಣ ಅನುಭವದ ಬೇಗೆಯಲ್ಲಿ ಬೆಂದು ಹೊರಬಂದರೆ ಆಗ ನಮ್ಮ ಬುದ್ಧಿ ಪಕ್ವವಾಗುತ್ತದೆ ಎಂದು, ಪರತತ್ವ ದರ್ಶನಕ್ಕೆ ಅಗತ್ಯವಾಗಿ ಆಗಬೇಕಾದ ಸಂಸ್ಕಾರದ ಬಗ್ಗೆ ನುಡಿದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
811
ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ- ।
ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ ॥
ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ ।
ಪರಮಜೀವನಯೋಗ - ಮಂಕುತಿಮ್ಮ ॥ ೮೧೧ ॥
ನಮ್ಮ ಹೊರಗಿನದನ್ನು ಹೊರೆಯೆಂದು ಭಾವಿಸದಂತೆ ನಮ್ಮ ಒಳಗನ್ನು ಸಿದ್ಧಗೊಳಿಸಿ, ನಮ್ಮ ಹೊರಗು ನಮ್ಮೊಳಗೆ ನುಗ್ಗಿ ಬಿಸಿಯನ್ನುಂಟು ಮಾಡದಂತೆ ನಮ್ಮಒಳಗನ್ನೂ ಅಳವಡಿಸಿಕೊಂಡು,ಇವೆರಡನ್ನೂ ಸರಿಸಮವಾಗಿ ಜೋಡಿಸಿಕೊಳ್ಳಲಾದರೆ ಅದೇ ಜೀವನದಲ್ಲಿ ಅದೇ ಅತ್ಯುತ್ತಮವಾದ ಯೋಗ ಎಂದು ಹೇಳಿದ್ದಾರೆ, ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
812
ಅಳಬೇಕು, ನಗಬೇಕು, ಸಮತೆ ಶಮವಿರಬೇಕು ।
ಹೊಳೆಯ ನೆರೆವೊಲು ಹೃದಯರಸ ಹರಿಯಬೇಕು ॥
ಅಲೆಯಿನಲುಗದ ಬಂಡೆಯವೊಲಾತ್ಮವಿರಬೇಕು ।
ತಿಳಿದವರ ಚರಿತವದು - ಮಂಕುತಿಮ್ಮ ॥ ೮೧೨ ॥
ಜಗತ್ತಿನಲ್ಲಿ ಬದುಕುವಾಗ ಎಲ್ಲರೊಡನೆ ಸೇರಿ ನಗಬೇಕು, ಸಮಯ ಬಂದಾಗ ಅಳಲೂ ಬೇಕು. ಆದರೆ ಅಂತರಂಗದಲ್ಲಿ ಶಮ, ಎಂದರೆ ನಿಗ್ರಹವಿರಬೇಕು. ಹೃದಯದ ಭಾವರಸವು, ಹೊಳೆಯ ನೆರೆಯಂತೆ ಹರಿಯಬೇಕು. ಆದರೆ ಆತ್ಮ ಆ ಭಾವರಸದ ಹೊಡೆತಕ್ಕೆ ಜಗ್ಗದೆ, ಬಂಡೆಯಂತೆ ದೃಢವಾಗಿ ಇರಬೇಕು. ಜಗತ್ತಿನಲ್ಲಿ, ‘ಅರಿತವರ ಮತ್ತು ಜ್ಞಾನಿ’ಗಳ ನಡವಳಿಕೆ ಆ ರೀತಿಯಿರುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
813
ಬಿಟ್ಟೆನೆಲ್ಲವನೆಂಬ ಹೃದಯಶೋಷಣೆ ಬೇಡ ।
ಕಟ್ಟಿಕೊಳ್ಳುವ ಶಿರಃಪೀಡೆಯುಂ ಬೇಡ ॥
ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು ।
ಮುಟ್ಟದಿಳೆಯಸಿ ನಿನ್ನ - ಮಂಕುತಿಮ್ಮ ॥ ೮೧೩ ॥
ನಾನು ಎಲ್ಲವನ್ನೂ ಬಿಟ್ಟಿದ್ದೇನೆ ಎಂದು ಹೃದಯ ಶೋಷಣೆಯನ್ನೂ ಮಾಡಿಕೊಳ್ಳಬೇಡ ಅಥವಾ ಎಲ್ಲವನ್ನೂ ಕಟ್ಟಿಕೊಂಡು ತಲೆನೋವನ್ನೂ ತಂದುಕೊಳ್ಳಬೇಡ. ‘ನಿರಹಂಕಾರ’ ದ ಕವಚವನ್ನು ತೊಟ್ಟುಬಿಡು. ಆಗ ಈ ಜಗತ್ತಿನ ಕತ್ತಿಯ ಅಲಗು ನಿನ್ನನ್ನು ಏನೂ ಮಾಡಲಾಗದು ಎಂದು ಘಾಸಿಗೊಳ್ಳದೆ ಬದುಕನ್ನು ಹೇಗೆ ಸಾಗಿಸಬೇಕು ಎನ್ನುವುದನ್ನು ಸೂಚಿಸಿದ್ದಾರೆ, ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.