Wise elder
679
—
683
679
ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ ।
ಹಸಿವನೊಂದುವನೆ ಹಿರಿಯನು? ನಲಿಯದಿಹನೆ? ॥
ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ- ।
ದೊಸೆದುನೋಳ್ಪನು ಜಾಣ - ಮಂಕುತಿಮ್ಮ ॥ ೬೭೯ ॥
ಮಕ್ಕಳು ಅವಲಕ್ಕಿ ಬೆಲ್ಲವನು ತಿನ್ನುವುದನ್ನು ನೋಡಿ ಮನೆಯ ಹಿರಿಯರು ತಮಗೂ ಹಸಿವಾಗಿದೆಯೆಂದು ಅದನ್ನು ಅಪೇಕ್ಷಿಸುವರೆ? ಆ ಮಕ್ಕಳು ತಿನ್ನುವುದನ್ನು ನೋಡಿ ತಾವು ಸಂತೋಷಪಡುತ್ತಾರೆ ಅಲ್ಲವೇ? ಹಾಗೆಯೇ ವಿಷಯಗಳ ಆಸಕ್ತಿಯಲ್ಲಿ ಮುಳುಗಿರುವ ಜಗತ್ತಿನ ಜನರನ್ನು ನೋಡಿ ಅವರಲ್ಲಿ ಅನಾದರತೋರದಿದ್ದರೂ ಅನಾಸಕ್ತಿಯನ್ನು ತೋರುವವನೆ ಜಾಣ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
680
ಉಂಡಾತನುಣುತಿರುವರನು ಕಾಣ್ಬ ನಲವಿಂದ ।
ಪಂಡಿತನು ವಿದ್ಯಾರ್ಥಿಗಳಿಗೊರೆವ ನಯದಿಂ ॥
ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ ।
ಕಂಡೆಲ್ಲರೊಳು ತನ್ನ - ಮಂಕುತಿಮ್ಮ ॥ ೬೮೦ ॥
ಊಟಮಾಡಿ ಹೊಟ್ಟೆ ತುಂಬಿದವನು ನಂತರ ಉಣ್ಣುವವರನ್ನು ‘ ನಿಧಾನವಾಗಿ ಆಗಲಿ’ ಸಾವಕಾಶ ತಿನ್ನಿ’ ಎನ್ನುವಂತಹ ಪ್ರೀತಿಯ ಮಾತನ್ನಾಡುವಂತೆ, ಒಬ್ಬ ನಿರಹಂಕಾರಿ ಪಂಡಿತನು ತನ್ನ ಶಿಷ್ಯರ ಜ್ಞಾನ ವೃದ್ಧಿಗಾಗಿ ನಲುಮೆಯಿಂದ, ತನ್ನ ಮಕ್ಕಳಂತೆ ಕಾಣುವಂತೆ, ಜ್ಞಾನಿಯಾದವನು ಲೋಕದ ಚರಾಚರಗಳಲ್ಲಿ ತನ್ನ ಪ್ರತಿಬಿಂಬವನ್ನೇ ಕಾಣುತ್ತಾ ಅರಿವಿಲ್ಲದ ಜನರಲ್ಲಿ ಅನಾದರ ತೋರದೆ ಅವರಲ್ಲಿ ಅರಿವನ್ನು ಮೂಡಿಸಲು ಮತ್ತು ಅವರನ್ನು ಔನ್ನತ್ಯಕ್ಕೆ ಕೊಂಡುಹೋಗಲು ಪ್ರಯತ್ನಿಸುತ್ತಾನೆ ಎಂದು ಸಜ್ಜನರ, ಸದ್ಗುರುಗಳ ಮತ್ತು ಸತ್ಪುರುಷರ ಲಕ್ಷಣವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
681
ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? ।
ಸಂದರ್ಭ ಬರಲಿ, ಬಂದಾಗಳಾ ಚಿಂತೆ ॥
ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು ।
ಇಂದಿಗಿಂದಿನ ಬದುಕು - ಮಂಕುತಿಮ್ಮ ॥ ೬೮೧ ॥
ಮುಂದೆ ಏನಾಗುವುದೋ ಹೇಗಾಗುವುದೋ ಎಂದು ಇಂದು ಚಿಂತಿಸಬೇಡ. ಆ ಸಂದರ್ಭ ಬಂದಾಗ ಆ ಚಿಂತೆ ಮಾಡು. ನಮಗೆ ನಮ್ಮ ಜೀವನದಲ್ಲಿ ನಡೆವುದೆಲ್ಲವನೂ ಹೊಂದಿಸುವವನು ಬೇರೆ ಯಾರೋ. ಹಾಗೆ ಹೊಂದಿಸುವವನು ನೀನು ಹೇಳಿದಂತೆ ಕೇಳುವ ನಿನ್ನ ಸೇವಕನಲ್ಲ. ಹಾಗಾಗಿ ಇಂದು ನೀ ಇಂದಿನ ಬದುಕನ್ನು ಬದುಕು ಎಂದು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಬಗೆಯನ್ನು ನಮಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
682
ದಿವಸದಿಮ್ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ ।
ಭವಿಷಿಯವ ಚಿಂತಿಸದೆ ಬದುಕ ನೂಕುತಿರು ॥
ವಿವರಗಳ ಜೋಡಿಸುವ ಯಜಮಾನ ಬೇರಿಹನು ।
ಸವೆಸು ನೀಂ ಜನುಮವನು - ಮಂಕುತಿಮ್ಮ ॥ ೬೮೨ ॥
ಮುಂದೇನಾಗುವುದೋ ಎಂದು ಚಿಂತಿಸದೆ ನಿತ್ಯದ ಬದುಕನ್ನು ಜೀವಿಸು. ನಮ್ಮ ಬದುಕಿನ ಅನುಕ್ಷಣವನ್ನೂ ಹೊಂದಿಸುವ ಜೋಡಿಸುವ ನಮ್ಮ ಯಜಮಾನ ಬೇರೆ ಇದ್ದಾನೆ. ಹಾಗಾಗಿ ಸುಮ್ಮನೆ ಬದುಕನ್ನು ಸವೆಸು ಎಂದು ಅನುದಿನವೂ ಚಿಂತೆಗಳ ಮಡುವಿನಲ್ಲಿ ಮುಳುಗಿರುವವರಿಗೆ ಒಂದು ಸಲಹೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
683
ರವಿ ನಿಲದೆ ಸುತ್ತುತಿರೆ ಕೊರಗು ಕಳವಳವೇಕೊ ।
ಸವೆಯಿಸುತಲೆಲ್ಲವನು ಕಡೆಗೊಯ್ವನವನು ॥
ಕವಳಿಸುವುದೆಲ್ಲವನು ಮರೆವು; ಬಾಳೊಲ್ ಅದೊಂದು ।
ಶಿವಕೃಪೆಯ ಲಕ್ಷಣವೊ - ಮಂಕುತಿಮ್ಮ ॥ ೬೮೩ ॥
ಕಾಲದ ಪ್ರವಾಹ ನಿರಂತರ. ಅದರಂತೆಯೇ ಸೂರ್ಯೋದಯ ಸೂರ್ಯಾಸ್ಥಮಾನಗಳು ಅವ್ಯಾಹತ ನಡೆಯುತ್ತಲೇ ಇರುವಾಗ, ಕಾಲ ಕಳೆದಂತೆ ಎಲ್ಲಕ್ಕೂ ಒಂದು ಅಂತ್ಯವಿರುತ್ತದೆ. ಕಳೆದುಹೋದ ವಿಷಯಗಳೆಲ್ಲ ನಮ್ಮ ನೆನಪಿನಿಂದ ಮರೆಯಾಗುತ್ತದೆ. ಕಡೆಗೆ ಎಲ್ಲವನ್ನೂ ಮರೆತುಹೋಗುವ ವರವನ್ನು ನಮಗೆ ಪರಮಾತ್ಮ ಕರುಣಿಸಿದ್ದಾನೆ ಎಂದು ಜೀವನದ ನಶ್ವರತೆಯನ್ನು ಅರುಹಿ ಮತ್ತು ಎಲ್ಲವೂ ತಾತ್ಕಾಲಿಕವಾಗಿರುವಾಗ ನಿನಗೆ ಚಿಂತೆ ಮಾಡಲು ಏನಾದರೂ ಕಾರಣವಿದೆಯೇ? ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.