Kagga Logo

Interests are limited

675

678

675

ಅಪರಿಮಿತವೇನಲ್ಲ ಜೀವನಕೆ ಲಭ್ಯ ಸುಖ ।
ಚಪಲದಿಂ ಕಣ್ಣನತ್ತಿತ್ತಲಲಸುತಿರೆ ॥
ಸ್ವಪರಿಸ್ಥಿತಿಯ ಧರ್ಮ ನಷ್ಟವಹುದೊಂದೆ ಫಲ ।
ವಿಫಲ ವಿಪರೀತಾಶೆ - ಮಂಕುತಿಮ್ಮ ॥ ೬೭೫ ॥

ಜೀವನದಲ್ಲಿ ಎಲ್ಲರಿಗೂ ಸುಖಪಡಲು ಸಾಧ್ಯವಿದೆ. ಆದರೆ ನಮಗೆ ಸುಖನೀಡುವ ಆ ‘ಸುಖ’ ಸಾಧನಗಳಿಗೆ ಮಿತಿಯಿದೆ. ನಾವು ಇರುವ ಪರಿಸ್ಥಿತಿಯ ಧರ್ಮದ ಚೌಕಟ್ಟನ್ನು ಮೀರಿ, ಚಪಲತೆ ಮತ್ತು ಅತಿ ಆಸೆಯಿಂದ, ಸುಖವನ್ನು ನಾನಾ ಕಡೆ ಅರಸಿದರೆ, ಅದು ಮರೀಚಿಕೆಯಂತೆ ಕೈಗೆ ಎಟುಕದೆ, ಸಂದ ಸುಖವನ್ನೂ ಅನುಭವಿಸಲಾಗದೆ, ವಿಪರೀತ ಆಸೆಯಿಂದ ಕೇವಲ ವೈಫಲ್ಯವನ್ನು ಅನುಭವಿಸಬೇಕಾಗುತ್ತದೆ ಎಂದು ಸುಖವನ್ನು ಅನುಭವಿಸದೆ, ಅರಸುವುದರಲ್ಲೇ ವ್ಯರ್ಥ ಕಾಲಯಾಪನೆ ಮಾಡುವವರಿಗೆ ಒಂದು ಕಿವಿಮಾತನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

676

ಸ್ವಾರಸ್ಯವಮಿತಮಾರಿಗುಮಿರದು ಜೀವನದಿ ।
ಪಾರದಿರ್ಕೆಯ ನೆನೆದು ನೆಡೆಯಲದು ಸಫಲ ॥
ಸಾರಂಗಳ್ ಎಲ್ಲ ಪಣ್ಗಳವುಮ್ ಒಂದರೊಳಿರವು ।
ಆರೋಗಿಸಿರುವುದನು - ಮಂಕುತಿಮ್ಮ ॥ ೬೭೬ ॥

ಎಲ್ಲ ಹಣ್ಣುಗಳ ಸಾರ, ಸತ್ವ ಮತ್ತು ರುಚಿ ಒಂದೇ ಹಣ್ಣಿನಲ್ಲಿ ಇರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಮಗೆ ಜಗತ್ತಿನ ಎಲ್ಲ ಸುಖಗಳ ಅನುಭವವೂ ಒಂದೇ ಸಲ ಲಭ್ಯವಾಗಲು ಸಾಧ್ಯವಿಲ್ಲ. ಯಾರಿಗೂ ಅ’ಮಿತ’ವಾದ, ‘ಪಾರ’ವಿಲ್ಲದ ಸ್ವಾರಸ್ಯ, ಸುಖ ಬದುಕಿನಲ್ಲಿ ಇರುವುದಿಲ್ಲ. ಪ್ರತಿಯೊಬ್ಬರ ಸುಖಕ್ಕೂ ಒಂದು ಮಿತಿಯಿರುತ್ತದೆ. ನಮಗೆ ಸಿಗುವ ಮತ್ತು ನಾವು ಅನುಭವಿಸಲಾಗುವ ಸಂತೋಷ ಮತ್ತು ಸುಖಗಳ ಮಿತಿಯನ್ನು ಅರಿತು ಅನುಭವಿಸಿ ಬಾಳಿದರೆ ಬದುಕು ಸಫಲವಾಗುತ್ತದೆ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

677

ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು ।
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ ॥
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ।
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ॥ ೬೭೭ ॥

ನೀನು ಎಷ್ಟು ಆಹಾರವನ್ನು ತಿಂದರೂ, ಅದರಿಂದ ದೇಹಕ್ಕೆ ಪುಷ್ಟಿಸಿಗುವುದು, ನಿನ್ನ ದೇಹ ಜೀರ್ಣಿಸಿಕೊಳ್ಳುವಷ್ಟು ಮಾತ್ರ. ಅಧಿಕವಾಗಿ ತಿಂದದ್ದೆಲ್ಲ ಜೀರ್ಣವಾಗದೆ, ಮಲರೂಪದಲ್ಲಿ ಕಸವಾಗಿ ಹೊರಬರುತ್ತದೆ. ಎಷ್ಟು ಸಂಪತ್ತನ್ನು ಗಳಿಸಿದರೂ ಹಸಿವಾದಾಗ ನೀನು ಸೇವಿಸಲಾಗುವುದು ಕೇವಲ ಒಂದು ಮುಷ್ಠಿ ಅನ್ನ ತಾನೆ? ಎಂದು ಕೇಳುತ್ತಾ ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ಳುವಂತೆ ನಮಗೆ ಸೂಚನೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

678

ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ ।
ನಿನ್ನ ಮಮತೆಯ ನೂಲ ವಿಧಿಯ ಪರಿದಂದು ॥
ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು ।
ಛಿನ್ನವಾದಂದೆ ಸೊಗ - ಮಂಕುತಿಮ್ಮ ॥ ೬೭೮ ॥

ಆ ವಿಧಿಯ ನೆರವಿನಿಂದ ಆತ್ಮೋದ್ಧಾರಕ್ಕೆ ಅಡ್ಡಿಯಾಗಿರುವ, ಈ ಜಗತ್ತಿನ ಮೇಲಿನ ಮಮಕಾರ ಮೋಹಗಳ ಪಾಶದ ಕೊಂಡಿಗಳು ಎಂದು ಕಳಚಿಕೊಂಡು, ಕತ್ತರಿಸಿ ಹೋಗಿ ನಾಶವಾಗುತ್ತವೆಯೋ ಅಂದೇ ‘ಧನ್ಯ’ತಮವಾದಂತಹ ಮತ್ತು ‘ಪುಣ್ಯ’ತಮವಾದ ಘಳಿಗೆ ಮತ್ತು ಅದೇ ನಮಗೆ ಲಭಿಸುವ ಜೀವನದ ನಿಜವಾದ ಸೊಗಸು ಎಂದು ಈ ಜಗತ್ತಿನೊಂದಿಗೆ ನಮಗಿರುವ ಮೋಹ ಮತ್ತು ನಿರ್ಮೋಹದ ವಿಚಾರವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.