Kagga Logo

The end is a blessing

669

674

669

ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ ।
ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ ॥
ಈಗಲೊ ಆಗಲೋ ಎಂದೊ ಮುಗಿವುಂಟೆಂಬ ।
ಭಾಗ್ಯವನು ನೆನೆದು ನಲಿ - ಮಂಕುತಿಮ್ಮ ॥ ೬೬೯ ॥

ಹೇಗೋ ಒಂದು ರೀತಿಯಲ್ಲಿ, ಹುಟ್ಟಿದ ನಮಗೆಲ್ಲಾ ಸಾವು ನಿಶ್ಚಿತ. ಈ ಜನುಮದಲ್ಲಿ ಹಿಂದಿನ ಜನುಮದ ನೆನಪಿಲ್ಲ. ಮುಂದಿನ ಜನುಮದಲ್ಲಿ ಇಂದಿನ ಜನುಮದ ನೆನಪಿರುವುದಿಲ್ಲ. ಅದೇ ನಮ್ಮ ಪುಣ್ಯ. ಕಡೆಗೂ ಒಂದು ದಿನ ಇದಕ್ಕೆಲ್ಲಾ ಅಂತ್ಯವಾಗುವುದು ಎಂಬ ಭಾಗ್ಯ ನಮಗೆ ಇದೆಯಲ್ಲಾ ಎಂದು ಸಂತಸಿಸಬೇಕು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

670

ಬರುವೆಲ್ಲ ಬೇನೆಗಂ ಮದ್ದನಾರಿರಿಸಿಹರು? ।
ನರರ ಕೀಳ್ತನಕೆಲ್ಲ ಪರಿಹಾರವೆಂತು? ॥
ಕಿರಿದು ಪಲ್ಲನು ತಾಳಿಕೊಳಲೆಬೇಕಷ್ಟಿಷ್ಟು ।
ಧರೆಯಂತರುಷ್ಣವನು - ಮಂಕುತಿಮ್ಮ ॥ ೬೭೦ ॥

ಹೊಸಹೊಸದಾಗಿ ಬರುವ ರೋಗಗಳಿಗೆಲ್ಲ ಔಷಧವನ್ನು ಯಾರು ಕಂಡುಹಿಡಿದಿದ್ದಾರೆ? ಅದೇ ರೀತಿ ಈ ಜಗತ್ತಿನ ಮನುಷ್ಯರು ಹೊಸಹೊಸದಾಗಿ ಕಲಿಯುವ ದುರ್ಬುದ್ಧಿಗೆ ಪರಿಹಾರವೆಲ್ಲಿದೆ?. ನಾವು ಈ ಜಗತ್ತಿನಲ್ಲಿರಬೇಕು ಎಂದರೆ ಇಂತಹ ಅಂತರಂಗದ ಬಿಸಿಯನ್ನು ತಾಳ್ಮೆಯಿಂದ ನಗುನಗುತ್ತಾ ಸಾಧ್ಯವಾದಷ್ಟು ತಡೆದುಕೊಳ್ಳಬೇಕು, ಬೇರೆ ದಾರಿಯಿಲ್ಲ ಎಂಬಂತೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

671

ತಿರಿದನ್ನವುಂಬಂಗೆ ಹುರುಡೇನು, ಹಟವೇನು ।
ತಿರುಪೆಯಿಡುವರು ಕುಪಿಸಿ ಬಿರುನುಡಿಯ ನುಡಿಯೆ ॥
ದುರದುರನೆ ನೋಡಿ ನೀನೆದುರುನುಡಿ ನುಡಿಯುವುದೆ? ।
ಗರುವವೇತಕೆ ನಿನಗೆ? - ಮಂಕುತಿಮ್ಮ ॥ ೬೭೧ ॥

ಭಿಕ್ಷೆ ಬೇಡಿ ತಿನ್ನುವವನಿಗೆ ಪೈಪೋಟಿ, ಹಠ ಇರಬಹುದೇ? ತಿರುಪೆ ನೀಡುವವನ ಮೇಲೆ ಕೋಪಿಸಿಕೊಂಡು ಅವನನ್ನು ಬಿರುಸಾದ ನುಡಿಗಳಿಂದ ನೀನು ನುಡಿಯಬಹುದೇ? ಬೇಡುವುದೇ ಭಿಕ್ಷೆಯಾದಮೇಲೆ ನಿನಗೆ ಗರ್ವವಿರಬಹುದೇ? ಎಂದು ಒಂದು ಗಹನವಾದ ವಿಚಾರವನ್ನು ನಮ್ಮ ಮುಂದೆ ಇಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.

672

ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ ।
ಸತ್ರದಲಿ ನೇಮದಿಂದಿರಲಿಕೆಡೆಯುಂಟು ॥
ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು- ।
ಪತ್ಯದವ ಮೆಚ್ಚುವನು - ಮಂಕುತಿಮ್ಮ ॥ ೬೭೨ ॥

ಈ ಜಗತ್ತು ಒಂದು ಧರ್ಮಛತ್ರವಿದ್ದಂತೆ. ಇಲ್ಲಿ ತಂಗಲು ಕೆಲವು ನಿಯಮಗಳನ್ನು ಪಾಲಿಸಬೇಕು. ನಿಯಮದ ಪ್ರಕಾರ ಅಲ್ಲಿದ್ದು, ಹೊರಡೆಂದಾಗ ಹೊರಟರೆ, ಅದರ ಮೇಲ್ವಿಚಾರಕ ಮೆಚ್ಚುವನು. ಇಲ್ಲದಿದ್ದರೆ ಬಲವಂತವಾಗಿ ಹೊರದಬ್ಬುವನು, ಎಂದು ಈ ಜಗತ್ತಿನಲ್ಲಿ ನಮ್ಮ ಬದುಕಿಗಿರುವ ನಿಯಮವನ್ನು, ಒಂದು ಉಪಮೆಯ ಆಧಾರದಿಂದ ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು.

673

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ।
ತಿಂದು ನಿನ್ನನ್ನಋಣ ತೀರುತಲೆ ಪಯಣ ॥
ಹಿಂದಾಗದೊಂದು ಚಣ, ಮುಂದಕುಂ ಕಾದಿರದು ।
ಸಂದ ಲೆಕ್ಕವದೆಲ್ಲ - ಮಂಕುತಿಮ್ಮ ॥ ೬೭೩ ॥

ನಮ್ಮ ಜೀವನದಲ್ಲಿ ನಾವು ಸೇವಿಸಬೇಕಾದ ಆಹಾರದ ಒಂದು ಅಗಳೂ ಅಧಿಕವಾಗದು ಅಥವಾ ಒಂದು ಅಗಳೂ ಕಡಿಮೆಯಾಗದು. ಹೀಗೆ ನಮ್ಮ ಅನ್ನದ ಋಣ ಈ ಜಗತ್ತಿನಲ್ಲಿ ಮುಗಿದೊಡನೆಯೇ ಇಲ್ಲಿಂದ ಪಯಣ ಬೆಳಸಬೇಕು. ನಮಗೆ ಎಷ್ಟು ದಿನ ಎಷ್ಟು ಗಂಟೆ ಮತ್ತು ಎಷ್ಟು ಕ್ಷಣ ಈ ಜಗತ್ತಿನಲ್ಲಿ ಇರಬೇಕೋ ಅದಕ್ಕಿಂತ ಒಂದು ಕ್ಷಣ ಕಡಿಮೆಯೋ ಅಥವಾ ಒಂದು ಕ್ಷಣ ಅಧಿಕವಾಗೋ ಇಲ್ಲಿ ಇರಲಾಗದು. ಲೆಕ್ಕ ಮುಗಿದ ಒಡನೆಯೇ ನಮ್ಮ ಇಹಲೋಕದ ಪ್ರಯಾಣ ಕೈಗೊಳ್ಳಬೇಕು ಎಂದು ಬದುಕಿನ ಅನಿವಾರ್ಯತೆಯನ್ನು ನಮಗೆ ಈ ಸಾಲುಗಳಲ್ಲಿ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.

674

ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ ।
ತೊಟ್ಟಲಿಗೆ ಹಬ್ಬ ಮಸಣವು ತೇಗುತಿರಲು ॥
ಹುಟ್ಟಿದವರೆಲ್ಲ ಸಾಯದೆ ನಿಲ್ತೆ, ಹೊಸತಾಗಿ ।
ಹುಟ್ಟುವರ್ಗೆಡೆಯೆಲ್ಲಿ? - ಮಂಕುತಿಮ್ಮ ॥ ೬೭೪ ॥

ಈ ಜಗತ್ತಿನಲ್ಲಿ ಹುಟ್ಟಿದವರಿಗಾಗಿ ಇರುವ ತೊಟ್ಟಿಲುಗಳು ಎಷ್ಟು ಇವೆಯೋ, ಸತ್ತವರಿಗಾಗಿ ಸ್ಮಶಾನಗಳೂ ಅಷ್ಟೇ ಇವೆ. ಸ್ಮಶಾನವು ಸತ್ತವರನ್ನು ಸ್ವೀಕರಿಸಿ ಹೇಗೆ ನುಂಗಿ ತೇಗುತ್ತದೆಯೋ ಹಾಗೆಯೇ ಹುಟ್ಟಿದವರನ್ನು ಸ್ವೀಕರಿಸಿ ಹಬ್ಬವನ್ನಾಚರಿಸುತ್ತವೆ ತೊಟ್ಟಿಲುಗಳು. ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲ ಸಾಯದೆ ಇಲ್ಲೇ ಉಳಿದುಬಿಟ್ಟರೆ ಹೊಸದಾಗಿ ಹುಟ್ಟುವವರಿಗೆ ಸ್ಥಳವೇ ಇಲ್ಲದಂತಾಗುತ್ತದೆ ಎಂದು ಹುಟ್ಟು ಸಾವುಗಳ ಅನಿವಾರ್ಯತೆಯನ್ನು ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.