Two accounts
663
—
668
663
ಎರಡುತೆರ ಮೌಲ್ಯಂಗಳೆಲ್ಲಕಂ ಲೋಕದಲಿ ।
ಪರಮಾರ್ಥಕೊಂದು, ಸಾಂಪ್ರತದರ್ಥಕೊಂದು ॥
ಪರಿಕಿಸೆರಡಂ ನೀನು; ಹೊರಬೆಲೆಯ ಗುಣಿಪಂದು ।
ಮರೆಯಬೇಡೊಳಬೆಲೆಯ - ಮಂಕುತಿಮ್ಮ ॥ ೬೬೩ ॥
ಈ ಲೋಕದಲ್ಲಿ ಎಲ್ಲಕ್ಕೂ ಎರಡು ಬಗೆಯ ಅರ್ಥವುಂಟು ಮತ್ತು ಎರಡು ಬಗೆಯ ಮೌಲ್ಯಗಳುಂಟು. ಇಹಕ್ಕೊಂದು ಅರ್ಥ ಮತ್ತು ಮೌಲ್ಯ ಮತ್ತು ಪರಕ್ಕೊಂದು ಅರ್ಥ ಮತ್ತು ಮೌಲ್ಯ. "ನೀನು ಇವೆರಡನ್ನೂ ಪರೀಕ್ಷಿಸಿ ನೋಡು. ಮೌಲ್ಯಗಳ ಲೆಕ್ಕಾಚಾರವನ್ನ್ಹು ಹಾಕುವಾಗ ಮೇಲೆ ತೋರುವ ಅರ್ಥ ಮತ್ತು ಮೌಲ್ಯದ ಜೊತೆಗೆ ಪರಮಾರ್ಥ ಮತ್ತು ಅಂತರ್ಮೌಲ್ಯಗಳನ್ನು ನೀ ಮರೆಯಬೇಡ’ ಎಂದು ನಮ್ಮನ್ನು ಎಚ್ಚರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
664
ನರನೊಂದುವೆವಹಾರಕೆರಡಾಯವೆಯ ಲೆಕ್ಕ ।
ಹೊರಗಣನುಭೋಗಕೊಂದೊಳನೀತಿಗೊಂದು ॥
ವರಮಾನ ದೇಹಕಾದೊಡೆ ಮಾನಸಕದೇನು? ।
ಪರಕಿಸಾ ಲೆಕ್ಕವನು - ಮಂಕುತಿಮ್ಮ ॥ ೬೬೪ ॥
ಮನುಷ್ಯರ ವ್ಯವಹಾರಕ್ಕೆ ಎರಡು ಆಯಾಮಗಳು ಇರುತ್ತವೆ. ಒಂದು ‘ಆಯ’ ಮತ್ತು ಎರಡನೆಯದು ‘ವ್ಯಯ’. ಅವನ ಅನುಭವವೆಲ್ಲಕ್ಕೂ ಎರಡು ಮುಖಗಳಿರುತ್ತದೆ. ಒಂದು ಬಾಹ್ಯಾನುಭವಕ್ಕೆ ಮತ್ತೊಂದು ಒಳಗಿನ ನೀತಿಗೊಂದು. ಎಲ್ಲ ಅನುಭವಗಳು ದೇಹಕ್ಕಾದರೆ ಮನಸ್ಸಿಗೇನು. ಅದನ್ನು ಕೊಂಚ ಪರೀಕ್ಷಿಸಿ ನೋಡಿಕೋ ಎಂದು ನಮಗೆ ನಿರ್ದೇಶಿಸುತ್ತಾ, ಅಂತರಂಗ ಮತ್ತು ಬಹಿರಂಗದ ಅನುಭವಗಳನ್ನು ಪಡೆದುಕೊಳ್ಳುವ ಬಗೆಯನ್ನು ತಿಳಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
665
ತನುವ ತಣಿಸುವ ತುತ್ತು ಮನಕೆ ನಂಜಾದೀತು ।
ಮನಮೋಹ ಜೀವಕ್ಕೆ ಗಾಳವಾದೀತು ॥
ಅನುಭವದ ಪರಿಣಾಮವೊಂದರಿಂದೊಂದಕ್ಕೆ ।
ಗಣಿಸಾತ್ಮಲಾಭವನು - ಮಂಕುತಿಮ್ಮ ॥ ೬೬೫ ॥
ದೇಹಕ್ಕೆ ಹಿತವೆನಿಸುವ ಮತ್ತು ನಾಲಿಗೆಗೆ ರುಚಿಯಾದ ಆಹಾರದ ತುತ್ತು ಮನಸ್ಸಿಗೆ ವಿಷವಾಗಬಹುದು. ಮನಸ್ಸಿನ ಮೋಹ ಆತ್ಮವನ್ನು ಬಂಧನಕ್ಕೆ ಸಿಲುಕಿಸುವ ಗಾಳವಾಗಬಹುದು. ನಮಗಾಗುವ ಒಂದು ಅನುಭವದ ಪರಿಣಾಮ ಬಹು ವಿಧದಲ್ಲಿ ನಮ್ಮ ಮೇಲೆ ಆಗುತ್ತದೆ. ಆದರೆ ಆ ಪರಿಣಾಮಗಳಲ್ಲಿ ಆತ್ಮಕ್ಕೇನು ಲಾಭವಾಯಿತು ಎಂದು ನೀನು ಎಚ್ಚರನಾಗಿರು ಎಂದು ಒಂದು ಸಂದೇಶವನ್ನು ಮತ್ತು ಎಚ್ಚರಿಕೆಯ ಮಾತನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
666
ನೂರಾರು ಸರಕುಗಳು ಜೀವಿತದ ಸಂತೆಯಲಿ ।
ಊರಿನವು, ಕೇರಿಯವು, ಮನೆಯವಾತ್ಮದವು ॥
ಬೇರೆ ಬೇರೆ ಪುರಳ್ಗೆ ಬೇರೆ ನೆಲೆ, ಬೇರೆ ಬೆಲೆ ।
ತಾರತಮ್ಯವೆ ತತ್ತ್ವ - ಮಂಕುತಿಮ್ಮ ॥ ೬೬೬ ॥
ಬದುಕಿನ ಸಂತೆಯಲ್ಲಿ ನೂರಾರು ವಸ್ತುಗಳು. ಕೆಲವು ನಮ್ಮ ಊರಿನವು, ಕೆಲವು, ನಮ್ಮ ಬೀದಿಯದ್ದು, ಕೆಲವು ನಮ್ಮ ಮನೆಯದ್ದು ಮತ್ತು ಕೆಲವು ಆತ್ಮದ್ದು. ಎಲ್ಲಕ್ಕೂ ಅದರದರದೇ ಸ್ಥಳ ಮತ್ತು ಅದರದರದೇ ಬೆಲೆ. ಈ ವಸ್ತುಗಳಲ್ಲಿ ತಾರತಮ್ಯವನ್ನು ಅರಿತು ನಮ್ಮ ಬದುಕಿನಲ್ಲಿ ಯಾವುದಕ್ಕೆ ಎಷ್ಟು ಬೆಲೆ ಕೊಡಬೇಕು, ಯಾವುದಕ್ಕೆ ಯಾವ ಸ್ಥಾನಕೊಡಬೇಕು ಎಂದು ಅರಿತು ಬದುಕುವುದೇ ಬದುಕಿನ ತತ್ವ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
667
ಮನೆಯ ಸುಡುತಿಹ ಬೆಂಕಿಯುರಿಯನಾರಿಸೆ ನುಗ್ಗು ।
ಮನವ ಸುಡುವುರಿಯಿಂದ ದೂರ ನೀಂ ನಿಲ್ಲು ॥
ತನುವಿಗುಪಕೃತಿಗೆಯ್ವ ಭರದಿ ನೀನಾತುಮದ ।
ಅನುನಯವ ಕೆಡಿಸದಿರು - ಮಂಕುತಿಮ್ಮ ॥ ೬೬೭ ॥
ಮನಗೆ ಬೆಂಕಿ ಹೊತ್ತಿಕೊಂಡರೆ, ಅದನ್ನು ಆರಿಸಲು ನುಗ್ಗು. ಆದರೆ ಮನಸ್ಸನ್ನು ಸುಡುವ ಬೆಂಕಿಯಿಂದ ದೂರ ಇರು. ದೇಹಕ್ಕೆ ಆನಂದವನ್ನು ನೀಡುವ ಅತಿಯಾದ ಆಸೆಯಿಂದ ಆತ್ಮವನ್ನು ಕಡೆಗಣಿಸಬೇಡ ಎಂದು ಒಂದು ಸೂಕ್ತ ತಿಳುವಳಿಕೆಯನ್ನು ನೀಡಿದ್ದಾರೆ, ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ .
668
ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ! ।
ಮುಡಿಪವರ ಮನಸೆಲ್ಲ ಕೈಯ ದುಡಿತಕ್ಕೆ ॥
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು ।
ಕಡಿದಲ್ಲವರ್ಗೆ ಬಾಳ್ - ಮಂಕುತಿಮ್ಮ ॥ ೬೬೮ ॥
ಬಡಗಿ, ರೈತ, ಕಮ್ಮಾರ, ಕುಂಬಾರ ಮುಂತಾದ ಕುಶಲ ಕರ್ಮಿಗಳೆಲ್ಲ ‘ಯೋಗ’ವನ್ನು ಕಲಿತವರೇನು? ಅವರ ಜೀವನವೆಲ್ಲ ಮೈಬಗ್ಗಿಸಿ ಮಾಡುವ ದುಡಿತಕ್ಕೆ ಮೀಸಲಾಗಿರುತ್ತದೆ. ಬಿಡುವಿಲ್ಲದ ಕೆಲಸಕಾರ್ಯಗಳ ಮಧ್ಯೆ ಅವರಿಗೆ ವ್ಯರ್ಥ ಹರಟೆಗೆ ಸಮಯವಿರುವುದಿಲ್ಲ. ಅವರು ಸದಾ ದುಡಿದು ತಿನ್ನುವವರಾದ್ದರಿಂದ, ಅವರಿಗೆ ಯಾರ ಹಂಗೂ ಇರುವುದಿಲ್ಲ. ಅಂತಹವರಿಗೆ ಬಾಳು ದುರ್ಗಮವೆನಿಸುವುದಿಲ್ಲ ಎಂದು ‘ಕಾಯಕ’ ದ ಮಹತ್ವವನ್ನು ಬಹಳ ಸುಂದರವಾಗಿ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.