Kagga Logo

Destruction of pride

659

662

659

ಎಂದೊ ನಿನಗೊಂದುದಿನ ಮೂಗು ಮುರಿಯುವುದು ದಿಟ ।
ವೃಂದಾರಕರು ಮತ್ಸರಿಸರೆ, ಗರ್ವಿತರ? ॥
ಸಂದರ್ಭಗಳನದಕೆ ಜೋಡಿಪನು ವಿಧಿರಾಯ ।
ಅಂದಿಕೊಳ್ಳನೆ ನಿನ್ನ? - ಮಂಕುತಿಮ್ಮ ॥ ೬೫೯ ॥

"ಮುಂದೆ ಎಂದಾದರೂ ಒಂದು ದಿನ ಖಂಡಿತ ನಿನಗೆ ಗರ್ವ ಭಂಗವಾಗುತ್ತದೆ. ನಿನ್ನ ಪ್ರತಿಷ್ಠೆ ಹೆಚ್ಚಾದರೆ ಆ ದೇವತೆಗಳು ನಿನ್ನ ನೋಡಿ ಈರ್ಷ್ಯೆಪಡುತ್ತಾರೆ ಮತ್ತು ವಿಧಿರಾಯ ನಿಮ್ಮ ಗರ್ವ ಭಂಗಕ್ಕೆ ಸರಿಯಾದ ಸಂದರ್ಭಗಳನ್ನು ಸೃಷ್ಟಿಸಿ ನಿನ್ನನ್ನು ಬಗ್ಗು ಬಡಿಯದೆ ಇರುವನೇ?" ಎಂದು ವಾಸ್ತವವಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದವರು ಅತಿಯಾಗಿ ತೋರುವ ಗರ್ವದ ಭಂಗ ಹೇಗಾಗುತ್ತದೆಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

660

ಗರುವಭಂಗವನಾಗಿಸಿದನು ಗರುಡಂಗೆ ಹರಿ ।
ಮುರಿಯಿಸಿದನಂತೆ ಫಲುಗುಣನ ಹೆಮ್ಮೆಯನು ॥
ಕರುಬುವಿಧಿಸೈರಿಸನು ದರ್ಪವನದಾರೊಳಂ ।
ಶಿರವ ಬಾಗಿಹುದೆ ಸಿರಿ - ಮಂಕುತಿಮ್ಮ ॥ ೬೬೦ ॥

ಗರುಡನ ತಾಯಿ ವಿನುತೆ, ತನ್ನ ಸವತಿ ಕದ್ರುವಿನೊಡನೆ ಪಂದ್ಯದಲ್ಲಿ ಸೋತು ಅವಳ ದಾಸ್ಯವನ್ನು ಸ್ವೀಕರಿಸುತ್ತಾಳೆ. ತಾಯನ್ನು ದಾಸ್ಯದಿಂದ ಬಿಡಿಸಲು ದೇವಲೋಕದಿಂದ ಅಮೃತವನ್ನು ತರಲು ಹೊರಟುದೇವತೆಗಳೊಡನೆ ಹೋರಾಡಿ, ಕಡೆಗೆ ದರ್ಪದಿಂದ ಇಂದ್ರನಮೇಲೆ ಯುದ್ಧಕ್ಕೆ ನಿಂತಾಗ, ಇಂದ್ರ ‘ಹರಿ’ಯ ಮೊರೆ ಹೋಗಲು, ಹರಿಯ ಪಾದದಡಿ ನಲುಗಿದ ಗರುಡನ ಗರ್ವ ಭಂಗವಾಗುತ್ತದೆಂದು ಭಾಗವತ ಪುರಾಣ ಹೇಳುತ್ತದೆ. ಅದೇ ರೀತಿ ಕುರುಕ್ಷೇತ್ರ ಯುದ್ಧದಲ್ಲಿ ವೀರಾವೇಶದಿಂದ ಹೋರಾಡುತ್ತಾ ತನಗೆ ಸಮಾನರಾರೂ ಇಲ್ಲವೆಂದು ಬೀಗುತ್ತಿದ್ದ ಅರ್ಜುನನಿಗೆ, ಕೇವಲ ಒಂದು ಹದ್ದಿನಿಂದ ಗರ್ವ ಭಂಗವಾಗುವಂತಹ ಪರಿಸ್ಥಿತಿಯನ್ನು ಉಂಟುಮಾಡುತ್ತಾನೆ ಶ್ರೀ ಕೃಷ್ಣ.

661

ಇಳೆಯಿಂದ ಮೊಳಕೆಯೊಗವಂದು ತಮಟೆಗಳಿಲ್ಲ ।
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ॥
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ ।
ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ ॥ ೬೬೧ ॥

"ಇಳೆಯಿಂದ ಕುಡಿಯೊಡೆದು ಮೊಳಕೆ ಭೂಮಿಯ ಪದರವನ್ನು ಸೀಳಿಕೊಂಡು ಬರುವಾಗ ಯಾವುದೇ ಅಬ್ಬರ ಆರ್ಭಟಗಳಿಲ್ಲದೆ ಬರುತ್ತದೆ. ಮರದಲ್ಲಿ ಕಾತ ಕಾಯಿ ಹಣ್ನಾಗುವಾಗ’ ನಾನು ಹಣ್ಣಾಗುತ್ತಿದ್ದೇನೆ ‘ ಎಂದು ತುತ್ತೂರಿ ಊದಿ ಮಾಗುವುದಿಲ್ಲ. ಜಗತ್ತಿಗೆ ಬೆಳಕನ್ನು ಈವ ಸೂರ್ಯ ಚಂದ್ರರೂ ಸಹ ಶಬ್ದವಿಲ್ಲದೆ ತಮ್ಮ ತಮ್ಮ ಕೆಲಸವನ್ನು ಮಾಡಿ ಹೋಗುತ್ತಾರೆ. ಹಾಗಿದ್ದಲ್ಲಿ ನೀನು ಯಾವ ಮಹಾ ಸಾಧನೆ ಮಾಡಿದ್ದೀಯೆ ಎಂದು ಜಂಬಕೊಚ್ಚಿಕೊಳ್ಳುತ್ತೀಯೆ? ನಿನ್ನ ತುಟಿಗಳನ್ನು ಹೊಲಿದಿಕೋ" ಎಂದು ಸಲಹೆಯನ್ನು ಇತ್ತಿದ್ದಾರೆ, ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

662

ಖದ್ಯೋತನಂತೆ ಬಿಡುಗೊಳದೆ ಧರ್ಮವ ಚರಿಸು ।
ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು ॥
ಗೆದ್ದುದೇನೆಂದು ಕೇಳದೆ, ನಿನ್ನ ಕೈಮೀರೆ ।
ಸದ್ದುಮಾಡದೆ ಮುಡುಗು - ಮಂಕುತಿಮ್ಮ ॥ ೬೬೨ ॥

ಒಂದು ಕ್ಷಣವೂ ಬಿಡುವಿಲ್ಲದೆ ಬೆಳಕ ನೀಡುವ ತನ್ನ ಧರ್ಮವನ್ನು ಆಚರಿಸುವ ಸೂರ್ಯನಂತೆ, ಬೆಳಕ ನೀಡುವ ಮಿಂಚ ಬಳ್ಳಿಗಳಂತೆ, ನೀನೂ ಸಹ ಜಗತ್ತಿನಲ್ಲಿ ನಿನಗೆ ವಿಧಿಸಿದ ಧರ್ಮವನ್ನು ಆಚರಿಸಲು ಪ್ರಯತ್ನಿಸು. ‘ ಇಂದರಿಂದ ಏನು ಪ್ರಯೋಜನ ಎಂದು ನಿನ್ನ ಸಾಧನೆಯ ಪ್ರಾಯೋಜಕತೆಯನ್ನು ಲೆಕ್ಕ ಹಾಕದೆ, ನಿನ್ನ ಕ್ಷಮತೆ ಅಥವಾ ಯೋಗ್ಯತೆ ಇರುವಷ್ಟು ನೀನು ನೀಡು. ನಿನ್ನ ಕೈ ಮೀರಿದರೆ ನಿ:ಶಬ್ದವಾಗಿ, ಸದ್ದಿಲ್ಲದೇ ಆ ಪರಮಾತ್ಮನಿಗೆ ಶರಣಾಗಿ ಬಿಡು ಎಂದು ಹಿತಬೋಧೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು.