Kagga Logo

Humility only in name

654

658

654

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? ।
ಕಸದೊಳಗೆ ಕಸವಾಗಿ ಹೋಹನಲೆ ನೀನು? ॥
ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು ।
ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ॥ ೬೫೪ ॥

‘ ಹೆಸರನ್ನು ಗಳಿಸುವುದಕ್ಕೆ ಮತ್ತು ಗಳಿಸಿದ ಹೆಸರನ್ನು ಉಳಿಸಿಕೊಳ್ಳುವುದಕ್ಕೆ ನೀನು ಏತಕ್ಕ ದಣಿಯುತ್ತೀಯಾ? ಜಗತ್ತಿನ ಬೇರೆ ಕಸಗಳನತೆಯೇ ನೀನೂ ಸಹ ಕಸದಲ್ಲಿ ಕಸವಾಗಿ, ಮಣ್ಣಲ್ಲಿ ಮಣ್ಣಾಗಿ ಹೋಗುವವನು. ಜಗತ್ತಿನ ಜನರ ಮರೆವು ನನ್ನ ಹೆಸರನ್ನು ಮರೆಮಾಡಿಬಿಡಲಿ ಎಂದು ನೀನು ಪಾರ್ಥಿಸು. ಸತ್ತ ನಂತರವೂ ಹೆಸರನ್ನು ಉಳಿಸಿಕೊಳ್ಳುವ ಕೊರಗನ್ನು ನೀನು ಪಡಬೇಡ’ ಎಂದು ಖ್ಯಾತಿಯ ಮತ್ತು ಪ್ರಶಂಸೆಯ ಹಿಂದೆ ಓಡುವವರಿಗೆ ಒಂದು ಕಿವಿಮಾತನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

655

ಅಕ್ಕಿಯೊಳಗನ್ನವನು ಮೊದಲಾರು ಕಂಡವನು? ।
ಅಕ್ಕರದ ಬರಹಕ್ಕೆ ಮೊದಲಿಗನದಾರು? ॥
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ ।
ದಕ್ಕುವುದೆ ನಿನಗೆ ಜಸ? - ಮಂಕುತಿಮ್ಮ ॥ ೬೫೫ ॥

"ಇಂದು ಜಗತ್ತಿನ ಬಹುತೇಕ ಮಂದಿ ತಿನ್ನುವ ಅನ್ನವನ್ನು ಅಕ್ಕಿಯಿಂದ ಮಾಡಬಹುದು ಎಂದು ಕಂಡುಕೊಂಡಂತಹ ಮೊದಲ ಮಾನವನು ಯಾರು? ಅವನ ಹೆಸರೇ ಈ ಜಗತ್ತಿಗೆ ಗೊತ್ತೇ ಇಲ್ಲ!!!, ಅಲ್ಲವೇ? ನಾವಿಂದು ಬರೆಯುವ ಅಕ್ಷರಗಳನ್ನು ‘ಹೀಗೇ’ ಬರೆಯಬೇಕೆಂದು ಕಂಡುಹಿಡಿದವನು ಯಾರು ಎಂದು ನಮಗೆ ಗೊತ್ತಿಲ್ಲ. ಹೀಗೆ ಈ ಜಗತ್ತು, ಆದಿಯಲ್ಲಿ ಇಲ್ಲಿನ ವಸ್ತು ವಿಷಯಗಳನ್ನು ರೂಪಿಸಿದ ಆದಿ ಬಂಧುಗಳನ್ನೇ ಲೆಕ್ಕವಿರಿಸದೆ ಮರೆತುಹೋಗಿರುವಾಗ, ನೀನು ಯಾವ ಘನಕಾರ್ಯ ಮಾಡಿದ್ದೀಯೆ ಎಂದು ಯಶಸ್ಸನ್ನು ಅಪೇಕ್ಷೆಪಡುತ್ತಿದ್ದೀಯೆ? " ಎಂದು ಪ್ರಶ್ನಿಸುತ್ತಾ ಹೆಸರು ಪ್ರಖ್ಯಾತಿಗಳ ಹುಚ್ಚು ಹಿಡಿದವರಿಗೆ ಎಚ್ಚರಿಕೆಯ ಮಾತನ್ನು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

656

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ ।
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ ॥
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು ।
ಕಸಬೊರಕೆಯಾಗಿಳೆಗೆ - ಮಂಕುತಿಮ್ಮ ॥ ೬೫೬ ॥

ಹೆಸರು ಹೆಸರೆಂಬುದು ಅದು ಏನು? ಕೊಳೆಯಿಂದ ಕೂಡಿದ ಉಸಿರು. ಈ ಜಗತ್ತಿನೊಳಗೆ ನಿನಗೆ ಬಿರುದು ಬಾವುಲಿಗಳ ಮನ್ನಣೆ ಏಕೆ ಬೇಕು? ಹಸುಗೂಸಿನಂತೆ ಮುಗ್ದನಾಗು, ಸಾಧು ಭಾವದ ಹಸುವಿನಂತಾಗು, ಮುಂದೆ ಗಿಡವಾಗಿ ಹೆಮ್ಮರವಾಗಿ ಹೂ, ಹಣ್ಣು ಮತ್ತು ಸುಗಂಧವನ್ನು ನೀಡುವ ಪುಟ್ಟ ಸಸಿಯಾಗು, ನಿನ್ನ ಮನಸ್ಸಿನ ಕಲ್ಮಷಗಳನ್ನು ಗುಡಿಸಿಹಾಕಲು ನೀನೇ ಒಂದು ಪೊರಕೆಯಾಗು ಎಂದು ಈ ಜಗತ್ತಿನಲ್ಲಿ ಖ್ಯಾತಿಯ ಬಯಕೆಯನ್ನು ಹತ್ತಿಕ್ಕಿ ಸಹಜವಾಗಿ ಹೇಗೆ ಬಾಳಬೇಕೆಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

657

ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ ।
ಕರುಬಿ ಜನ ಕೆಸರುದಾರಿಯಲಿ ಸಾಗುವುದು ॥
ಬಿರುದ ಗಳಿಸಲಿಕೆಸಪ, ಹೆಸರ ಪಸರಿಸಲೆಸಪ ।
ದುರಿತಗಳ್ಗೆಣೆಯುಂಟೆ? - ಮಂಕುತಿಮ್ಮ ॥ ೬೫೭ ॥

ಜಗತ್ತಿನ ಜನರು ಕೆಟ್ಟ ದಾರಿಯಲ್ಲಿ ಹೋಗುವುದು ಕೇವಲ ಹಣವನ್ನು ಸಂಪಾದಿಸುವುದಕ್ಕೆ ಮಾತ್ರವಲ್ಲ, ಹೆಣ್ಣನ್ನು ಮೆಚ್ಚಿಸಲಿಕ್ಕಾಗಲೀ ಅಥವಾ ಪಡೆಯಲಿಕ್ಕಾಗಲೀ ಮಾತ್ರವಲ್ಲ. ಹೆಸರು ಗಳಿಸುವುದಕ್ಕೆ ಮತ್ತು ಆ ಗಳಿಸಿದ ಹೆಸರನ್ನು ಜಗತ್ತಿನ ನಾಲ್ಕೂ ಮೂಲೆಗಳಿಗೆ ಪ್ರಚಾರಮಾಡಿಕೊಳ್ಳಲಿಕ್ಕೆ ಇವನು ತುಳಿಯುವ ದುರ್ದಾರಿಗಳಿಗೆ, ಮಾಡುವ ಪಾಪಗಳಿಗೆ ಮಿತಿಯೇ ಇಲ್ಲ ಎಂದು ಇಂದಿಗೂ ಪ್ರಸ್ತುತವಾಗುವಂತೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

658

ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ॥
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- ।
ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ॥ ೬೫೮ ॥

ಬಡಗಿ, ರೈತ, ಕಮ್ಮಾರ, ಕುಂಬಾರ ಮುಂತಾದ ಕುಶಲ ಕರ್ಮಿಗಳೆಲ್ಲ ‘ಯೋಗ’ವನ್ನು ಕಲಿತವರೇನು? ಅವರ ಜೀವನವೆಲ್ಲ ಮೈಬಗ್ಗಿಸಿ ಮಾಡುವ ದುಡಿತಕ್ಕೆ ಮೀಸಲಾಗಿರುತ್ತದೆ. ಬಿಡುವಿಲ್ಲದ ಕೆಲಸಕಾರ್ಯಗಳ ಮಧ್ಯೆ ಅವರಿಗೆ ವ್ಯರ್ಥ ಹರಟೆಗೆ ಸಮಯವಿರುವುದಿಲ್ಲ. ಅವರು ಸದಾ ದುಡಿದು ತಿನ್ನುವವರಾದ್ದರಿಂದ, ಅವರಿಗೆ ಯಾರ ಹಂಗೂ ಇರುವುದಿಲ್ಲ. ಅಂತಹವರಿಗೆ ಬಾಳು ದುರ್ಗಮವೆನಿಸುವುದಿಲ್ಲ ಎಂದು ‘ಕಾಯಕ’ ದ ಮಹತ್ವವನ್ನು ಬಹಳ ಸುಂದರವಾಗಿ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.