Don't bend the self
649
—
653
649
ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು ।
ಮಗುವು ನೀಂ ಪೆತ್ತರ್ಗೆ, ಲೋಕಕೆ ಸ್ಪರ್ಧಿ ॥
ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ ।
ರಗಳೆಗಾರೆಗೆ ಬಿಡುವೊ? - ಮಂಕುತಿಮ್ಮ ॥ ೬೪೯ ॥
ಜಗದೊಳಿರುವ ಜನರೆಲ್ಲ ನನ್ನನ್ನು ಪ್ರೀತಿಸಿಬೇಕು, ಎಂದು ಅಪೇಕ್ಷೆಪಟ್ಟು, ಅದು ಆಗದಿದ್ದಾಗ ನೀನು ಕೊರಗಬೇಡ. ನಿನ್ನ ಹೆತ್ತವರಿಗೆ ನೀನು ಮಗು, ಆದರೆ ಲೋಕಕ್ಕೆ ಪ್ರತಿಸ್ಪರ್ಧಿ. ಹುಟ್ಟಿದವರಿಗೆಲ್ಲಾ ಅವರವರ ಬಾಳಿನ ಹೊರೆ ಇದ್ದೇ ಇರುತ್ತದೆ. ನಿನ್ನ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೂ ಬಿಡುವಿಲ್ಲ ಎಂದು ಪ್ರತಿಯೊಬ್ಬರೂ ಅವರವರ ಜೀವನದ ಹೊರೆಯನ್ನು ಅವರವರೇ ಹೊರಬೇಕಾದ ಅನಿವಾರ್ಯತೆಯನ್ನು ಸ್ಪಷ್ಟೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
650
ರಾಗಿಮುದ್ದೆಯ ನುಂಗಿ ನಲಿದು ಬಾಳ್ವಾತಂಗೆ ।
ಕಾಗೆ ಕದ್ದುಣುವ ಭಕ್ಷ್ಯವ ಕಂಡು ಕರುಬೆ? ॥
ನೀಗುವುದು ಹಸಿವನ್ ಉಣಿಸೆಂತಪ್ಪುದಾದೊಡಂ ।
ಬಾಗಿಸದಿರಾತ್ಮವನು - ಮಂಕುತಿಮ್ಮ ॥ ೬೫೦ ॥
ರಾಗಿ ಮುದ್ದೆಯ ತಿಂದು ಸಂತುಷ್ಟನಾಗಿ ನಲಿಯುವವನು, ಕಾಗೆ ಎಲ್ಲಿಂದಲೋ ಕದ್ದು ತಂದು ಉಣ್ಣುವ ಮೃಷ್ಟಾನ್ನ ಭೋಜನವನ್ನು ನೋಡಿ ಕರುಬುತ್ತಾನೆಯೇ? ಆಹಾರ ಎಂತಹದ್ದಾದರೂ ಅದು ಹಸಿವನ್ನು ಇಂಗಿಸುವುದು. ಅದನ್ನು ಕಷ್ಟಪಟ್ಟು ದುಡಿದು ಸಂಪಾದಿಸುವುದೇ ಮುಖ್ಯ. ಅದನ್ನು ಬಿಟ್ಟು ಮೃಷ್ಟಾನ್ನವನ್ನು ಪಡೆಯಲು ಆತ್ಮಾಭಿಮಾನವನ್ನು ಬಿಡಬೇಡ ಎಂದು ಬುದ್ಧಿವಾದದ ಕಿವಿಮಾತನ್ನು ನಮಗೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
651
ಮೌನದಿಂದಂಬಲಿಯನುಂಡು ತಣಿಯುವ ಮಾನಿ ।
ಶ್ವಾನನುಣುವೆಂಜಲೋಗರಕೆ ಕರುಬುವನೆ? ॥
ಜ್ಞಾನಿ ನಡೆವಂ ವಿಷಯ ತರತಮವಿವೇಕದಲಿ ।
ಮಾಣು ನೀಂ ತಲ್ಲಣವ - ಮಂಕುತಿಮ್ಮ ॥ ೬೫೧ ॥
ಮೌನದಿಂದ ಗಂಜಿಯನ್ನು ಕುಡಿದು ಸಂತುಷ್ಟಗೊಳ್ಳುವ ಮಾನಧನನಾದ ವ್ಯಕ್ತಿ, ಬೀದಿಯಲ್ಲಿ ಯಾರೋ ಬಿಸುಟ ಎಂಜಲೆಲೆಯಲ್ಲಿ ಮೃಷ್ಟಾನ್ನ ಭೋಜನವ ತಿನ್ನುವ ನಾಯಿಯನ್ನು ಕಂಡು ಕರುಬುವನೇನು? ಹೇಗೆ ಸರಿ ತಪ್ಪುಗಳನ್ನು ಅರಿತ ಜ್ಞಾನಿ ಬದುಕಿನಲ್ಲಿ ನಡೆದುಕೊಳ್ಳುತ್ತಾನೋ, ಹಾಗೆಯೇ ನೀನೂ ಸಹ ದೃಢಮನಸ್ಕನಾಗಿ, ತಲ್ಲಣವ ತೊರೆದು ನಡೆದುಕೋ ಎಂದು ನಮಗುಪದೇಶವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
652
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ॥
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ - ಮಂಕುತಿಮ್ಮ ॥ ೬೫೨ ॥
ಅನ್ನವನ್ನು ಪಡೆಯಬೇಕು ಎನ್ನುವ ತೀವ್ರತಮ ಬಯಕೆಗಿಂತ ಚಿನ್ನದಮೇಲಿನ ಆಸೆಯ ತೀವ್ರತೆ ಹೆಚ್ಚು, ಅದಕ್ಕಿಂತ ತೀವ್ರ ಹೆಣ್ಣುಗಂಡಿನ ಪರಸ್ಪರ ಆಕರ್ಷಣೆಯ ತೀವ್ರತೆ. ಇವೆಲ್ಲಕ್ಕಿಂತ ಮೀರಿದುದು ಮನ್ನಣೆಯ, ಪ್ರಚಾರದ ಆಸೆ. ಈ ಎಲ್ಲ ಆಸೆಗಳು ಆತ್ಮವನ್ನು ಕೊರಗಿಸಿ, ಸೊರಗಿಸಿ ತಿನ್ನುತ್ತವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
653
ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೊ ।
ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ ॥
ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು ।
ನೆನೆಯದಾತ್ಮದ ಸುಖವ - ಮಂಕುತಿಮ್ಮ ॥ ೬೫೩ ॥
ಮನೆ, ಮಠ, ಸಭೆ, ಸಂತೆ ಹೀಗೆ ಎಲ್ಲೇ, ಇದ್ದರೂ ‘ನನ್ನನ್ನು ಎಲ್ಲರೂ ಗುರುತಿಸಬೇಕು’ ಎನ್ನುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ಅಲ್ಲೆಲ್ಲೂ ಆಗದಿದ್ದರೆ ಯಾರೂ ಇರದ ಕಾಡಿನಲ್ಲಾಗಲೀ ಅಥವಾ ಸತ್ತು ಸ್ಮಶಾನ ಸೇರಿದಮೇಲಾಗಲೀ ಎಲ್ಲರೂ ತನ್ನನ್ನು, ಗುರುತಿಸಬೇಕು, ಹೊಗಳಬೇಕು ಎನ್ನುವ ಹಂಬಲ ಮತ್ತು ಬದುಕಿನ್ನುದ್ದಕ್ಕೂ ಅಂತಹ ಹೊಗಳಿಕೆಗೆ ಬಾಯ್ಬಿಡುತ್ತಾ, ಶಾಶ್ವತವಾಗಿ ಅನಂತವಾಗಿರುವ ಆತ್ಮದ ಸುಖ ಮತ್ತು ಉದ್ಧಾರಕ್ಕೆ ಯಾರೂ ಆಲೋಚಿಸುವುದಿಲ್ಲ ಎಂದು ಆತ್ಮೋದ್ಧಾರಕ್ಕೆ ಮಾರಕವಾದ ಮನ್ನಣೆಯ ಹಂಬಲದ ಬಗ್ಗೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.