Kagga Logo

Treatment of the self

643

648

643

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು ।
ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ॥
ಗೋಳ್ಕರದರೇನು ಫಲ? ಗುದ್ದಾಡಲೇನು ಫಲ? ।
ಪಲ್ಕಿರಿದು ತಾಳಿಕೊಳೊ- ಮಂಕುತಿಮ್ಮ ॥ ೬೪೩ ॥

ನಾವು ಒಪ್ಪಲಿ ಅಥವಾ ಒಪ್ಪದೆ ಇರಲಿ, ನಮ್ಮ ಬಾಳಿನಲ್ಲಿ ನೂರೆಂಟು ಎಡರು ತೊಡರುಗಳು, ಕಷ್ಟ ಆಯಾಸಗಳು ಬರುತ್ತವೆ. ಅವುಗಳನ್ನು ಸಹಿಸಲಾಗದೆ, ದುಃಖಪಡುವುದೋ ಅಥವಾ ವಿಷಮ ಸ್ಥಿತಿಗೆದುರಾಗಿ ಗುದ್ದಾಡುವುದೋ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ನಗುನಗುತ್ತಾ ಅದನ್ನು ತಾಳಿಕೊಳ್ಳುವುದ ಬಿಟ್ಟು ನಿನಗೆ ಬೇರೆ ದಾರಿಯೇ ಇಲ್ಲ ಎಂದು ಬದುಕಿನ ಅನಿವಾರ್ಯತೆಯನ್ನು, ಮಾನ್ಯ ಗುಂಡಪ್ಪನವರು ಅರುಹಿದ್ದಾರೆ ನಮಗೆ ಈ ಮುಕ್ತಕದಲ್ಲಿ.

644

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ।
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ॥
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ ।
ನರಳುವುದು ಬದುಕೇನೊ? - ಮಂಕುತಿಮ್ಮ ॥ ೬೪೪ ॥

ಮರದಿಂದ ಮರಕ್ಕೆ ಹಾರುವಾಗಲೋ ಅಥವಾ ಯಾವುದೋ ಬೇಲಿಯಲ್ಲಿ ನುಗ್ಗುವಾಗಲೋ ಮುಳ್ಳೋ ಕಲ್ಲೋ ತರಚಿ ಆದ ಒಂದು ಸಾಮಾನ್ಯ ಗಾಯವನ್ನು ಕೆರೆದು ದೊಡ್ಡ ಹುಣ್ಣಾಗಿಸಿ, ರಣವಾಗಿಸಿ ಅತಿಯಾದ ನೋವಿಂದ ಪರದಾಡುವ ‘ಕಪಿ’ ಯಂತೆ, ನೀನು ಯಾವುದೋ ಒಂದು ಕೊರತೆಯನ್ನು ಹಿಡಿದುಕೊಂಡು ಮತ್ತೆ ಮತ್ತೆ ಅದನ್ನೇ ನೆನೆದು, ಕನಲಿ ನಿನ್ನ ಕೊರತೆಗೆ ಜಗತ್ತನ್ನೇ ಕಾರಣವನ್ನಾಗಿಸಿ, ಎಲ್ಲರನ್ನೂ ದೂರಿ, ಮನಸ್ಸಿನಲ್ಲಿ ದುಮ್ಮಾನ ತುಂಬಿಕೊಂಡು ನರಕ ಯಾತನೆಯನ್ನು ಅನುಭವಿಸುವುದೂ ಒಂದು ಬಾಳೇ ? ಎಂದು ನಮ್ಮೆಲ್ಲರ ಸ್ಥಿತಿಯನ್ನು ಎತ್ತಿತೋರುವ ರೀತಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

645

ಚಿಂತೆಸಂತಾಪಗಳು ಮನಸಿಗೆ ವಿರೇಚಕವೊ ।
ಸಂತಸೋತ್ಸಾಹಗಳೆ ಪಥ್ಯದುಪಚಾರ ॥
ಇಂತುಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ ।
ಎಂತಾದೊಡಂತೆ ಸರಿ - ಮಂಕುತಿಮ್ಮ ॥ ೬೪೫ ॥

ಮನಸ್ಸಿನಲ್ಲಿ ಗೂಡು ಕಟ್ಟಿರುವ ನೋವು ಮತ್ತು ಹಿಂಸೆಗಳನ್ನು ಹೊರಹಾಕಲು ಚಿಂತೆ ಮತ್ತು ದುಃಖಗಳು ಸಹಾಯಮಾಡುತ್ತವೆ ಮತ್ತು ಅಂತಹ ಮನಸ್ಸನ್ನು ತಿಳಿಯಾಗಿಸಲು ಮದ್ದಿನಂತೆ ಸಂತಸ ಮತ್ತು ಉತ್ಸಾಹಗಳು ಇವೆ. ಹೀಗೆ ದುಃಖವನ್ನು ಹೊರಹಾಕುವುದೋ ಅಥವಾ ಸಂತಸವನ್ನು ಒಳಗೆ ತಂದುಕೊಳ್ಳುವುದೋ, ಹೇಗಾದರೂ ಸರಿ ಎರಡೂ ವಿಧಾನದಲ್ಲಿ ಚಿಕಿತ್ಸೆ ನಡೆದು ಆತ್ಮಕ್ಕೆ ಉಪಚಾರವಾಗಿ ಆತ್ಮ ಉದ್ಧಾರವಾದರೆ ಸರಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

646

ಶೀತವಾತಗಳಾಗೆ ದೇಹಕೌಷಧ ಪಥ್ಯ ।
ಚೇತ ಕೆರಳಿರೆ ಕಣ್ಣು ಕಿವಿಗಳಾತುರದಿಂ ॥
ಪ್ರೀತಿಯಿಂದದನೊಲಿಸಿ ನೀತಿಯಲಿ ಶಿಕ್ಷಿಸುವು- ।
ದಾತುಮದ ನೆಮ್ಮದಿಗೆ - ಮಂಕುತಿಮ್ಮ ॥ ೬೪೬ ॥

ಶೀತವೋ, ವಾತವೋ ಆಗಿ ದೇಹಾರೋಗ್ಯ ಕೆಟ್ಟರೆ ಪಥ್ಯ ಮಾಡಿ ಸರಿಪಡಿಸಿಕೊಳ್ಳಬಹುದು. ಆದರೆ ಈ ದೇಹಧಾರಣೆ ಮಾಡಿದ ಚೇತನಕ್ಕೆ ಕಿವಿ ಮತ್ತು ಕಣ್ಣುಗಳ ಮೂಲಕ ರೋಗಾಣುಗಳು ತಗುಲಿ ಆರೋಗ್ಯ ಕೆಟ್ಟರೆ, ಅದನ್ನು ಪ್ರೀತಿಯಿಂದ ಒಲಿಸಿಕೊಂಡು ನಿಯಮಿತವಾಗಿ ಶಿಕ್ಷಣ ನೀಡಿವುದು ಆತ್ಮಕ್ಕೆ ನೆಮ್ಮದಿಯನ್ನು ತರುತ್ತದೆ ಎಂದು ಅಂತರಂಗದ ಸಂಸ್ಕರಣದ ಮಾರ್ಗವನ್ನು ತೋರಿದ್ದಾರೆ ಮಾನ್ಯ ಗುಂದಪ್ಪನವರು ನಮಗೆ ಈ ಮುಕ್ತಕದಲ್ಲಿ.

647

ಮುಕ್ತಿಯೆಂಬುದು ಮನದ ಸಂಸ್ಥಿತಿಯೆ, ಬೇರಲ್ಲ ।
ರಕ್ತಿ ವಿಪರೀತವದಕಾಗದಿರೆ ಮುಕ್ತಿ ॥
ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ ।
ಶಕ್ತಿವಂತನೆ ಮುಕ್ತ - ಮಂಕುತಿಮ್ಮ ॥ ೬೪೭ ॥

ಮುಕ್ತಿಯೆಂಬುದು ಕೇವಲ ಮನಸ್ಸಿನ ಒಂದು ಭಾವವಷ್ಟೆ. ಮುಕ್ತಿಯೆಂದರೆ ಈ ಜಗತ್ತಿನಿಂದ, ಮುಕ್ತಿಯೆಂದಲ್ಲ. ಜಗತ್ತಿನೊಂದಿಗೆ ರಕ್ತಿ ಅಂದರೆ ಅಂಟು ಅಧಿಕವಾಗದಿದ್ದರೆ ಅಥವಾ ಅಂಟೀ ಅಂಟದ ಹಾಗೆ ಜೀವಿಸಲಾದರೆ ಅದೇ ಮುಕ್ತಿ. ಯುಕ್ತಿಯನ್ನು ಉಪಯೋಗಿಸಿ ಇಂದ್ರಿಯಗಳನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಪಡುತ್ತಾ ಮತ್ತು ಅದರ ಮೂಲಕ ಆತ್ಮ ಸಂಸ್ಕಾರಗೊಳ್ಳಲು ಪೂರಕವಾದ ಕೆಲಸ ಮಾಡಲು, ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವ್ಯಯಿಸುವವನೇ ಮುಕ್ತ ಎಂದು ಮುಕ್ತಿಗಾಗಿ ನಾವು ಮಾಡಬೇಕಾದ ಪ್ರಯತ್ನವನ್ನು ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

648

ತರಿದುಬಿಡು, ತೊರೆದುಬಿಡು, ತೊಡೆದುಬಿಡು ನೆನಹಿಂದ ।
ಕರೆಕರೆಯ ಬೇರುಗಳ, ಮನದ ಗಂಟುಗಳ ॥
ಉರಕೆ ಸೊಗಸೆನಿಸಿದಾ ಪ್ರೀತಿಹಾರಮುಮೊರ್ಮೆ ।
ಉರುಳಪ್ಪುದಾತ್ಮಕ್ಕೆ - ಮಂಕುತಿಮ್ಮ ॥ ೬೪೮ ॥

ಅಂತರಾತ್ಮಕ್ಕೆ ಮುಜುಗರ ಮಾಡುವಂತಹ ನೆನಪಿನ ಬೇರುಗಳನ್ನು ಮತ್ತು ಗಂಟುಗಳನ್ನು ಅಂತರಾಳದಿಂದ ಕತ್ತರಿಸಿಬಿಡು, ತೊರೆದುಬಿಡು, ಅಳಿಸಿಬಿಡು. ಏಕೆಂದರೆ ಹೃದಯಕ್ಕೆ ಹಿತವೆನಿಸುವಾ ಪ್ರೀತಿ ಪ್ರೇಮಗಳ ಮಾಲೆಯು ಆತ್ಮಕ್ಕೆ ಕೆಲವು ಬಾರಿ ನೇಣಿನಂತೆ ಆಗುವುದು ಎಂದು ಗತವನ್ನು ನೆನೆಯುವ, ಆ ನೆನಪಿನಲ್ಲಿ ಹಿಂಸೆಯನ್ನನುಭವಿಸುವ ನಮ್ಮ ಬದುಕಿನ ವಿಚಾರವನ್ನು ತಿಳಿಗೊಳಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.