Birds' oath
639
—
642
639
ಮುಗ್ಧನಾಗದೆ ಭುಜಿಸು ಭುಜಿಸಲಿಹುದನು ಜಗದಿ ।
ಮಾಧ್ವೀಕ ಭಯವಿರದು ಜಾಗರೂಕನಿಗೆ ॥
ದೃಗ್ದೃಶ್ಯಚಿತ್ರಪ್ರಪಂಚದಲಿ ಸೇರಿ ನೀಂ ।
ಮುಗ್ಧನಾಗದೆ ಸುಖಿಸು - ಮಂಕುತಿಮ್ಮ ॥ ೬೩೯ ॥
ಈ ಜಗತ್ತಿನಲ್ಲಿ ಅನುಭವಿಸಬೇಕಾದ್ದನ್ನು ಮೋಹವಿಲ್ಲದೆ ಅನುಭವಿಸು. ಮೋಹವಿಲ್ಲದವನಿಗೆ ಅಹಂಕಾರವು ಬಂದು ಅಂಟಿಕೊಳ್ಳುವ ಭಯವಿರದು.ಚಿತ್ರಕಾರನೂ ಚಿತ್ರವೂ ಎರಡೂ ಒಂದೇ ಆಗಿರುವ ಈ ಪ್ರಪಂಚದಲ್ಲಿ ನೀನೂ ಸಹ ಒಂದಾಗಿ ಈ ಜಗತ್ತಿಗೆ ಅಂಟದೆ ಮೋಹವನ್ನು ತೊರೆದು ಸುಖದಿಂದಿರು, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
640
ತಿರುಕ ನೀನೀ ಬ್ರಹ್ಮಪುರಿಯೊಳದ ಮರೆಯದಿರು ।
ಸಿರಿಯಿರ್ದೊಡೇನು? ಪರಿಜನವಿರ್ದೊಡೇನು? ॥
ತೊರೆದೆಲ್ಲ ಡಂಭಗಳ ನೀನೆ ನಿನ್ನಾಳಾಗು ।
ಪರದೇಶಿವೊಲು ಬಾಳು - ಮಂಕುತಿಮ್ಮ ॥ ೬೪೦ ॥
ಈ ಜಗತ್ತಿನಲ್ಲಿ ನೀನು ಕೇವಲ ಒಬ್ಬ ಭಿಕ್ಷುಕ. ಅದನ್ನು ಮರೆಯಬೇಡ. ಹಣ ಬಲ ಮತ್ತು ಜನ ಬಲವಿದ್ದರೆ ಏನು ಪ್ರಯೋಜನ. ಅದರಿಂದ ಮನದಲ್ಲಿ ಉಂಟಾಗುವ ಎಲ್ಲ ಡಂಬಾಚಾರ ಬೂಟಾಟಿಕೆಗಳನ್ನು ಬಿಟ್ಟು ಎಲ್ಲಿಂದಲೋ ಬಂದ ನೀನು, ನಿನ್ನ ಆತ್ಮಕ್ಕೆ ನೀನೇ ಸೇವಕನಾಗು. ಈ ಜಗತ್ತಿನಲ್ಲಿ ನೀನು ಪರಕೀಯ, ಪರದೇಶಿ. ಹಾಗೆಯೇ ಬಾಳು ಎಂದು ಬದುಕಿಗೆ ನಾವು ಎಷ್ಟರಮಟ್ಟಿಗೆ ಅಂಟಿಕೊಳ್ಳಬೇಕು ಎನ್ನುವದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
641
ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ? ।
ಮೀನು ನೀರೊಳು ನುಸುಳೆ ಪಥನಿಯಮವಿಹುದೆ? ॥
ಏನೊ ಜಿವವನೆಳೆವುದೇನೊ ನೂಕುವುದದನು ।
ನೀನೊಂದು ಗಾಳಿಪಟ - ಮಂಕುತಿಮ್ಮ ॥ ೬೪೧ ॥
ಆಕಾಶದಲ್ಲಿ ಹಾರುವ ಪಕ್ಷಿಯ ಚಲನಕ್ಕೆ ಒಂದು ನಿರ್ದಿಷ್ಟ ಪಥವಿಲ್ಲ, ಎಂದರೆ ಒಂದು ಮಾರ್ಗವಿಲ್ಲ. ಹಾಗೆಯೇ ಕಡಲಿನಲ್ಲಿರುವ ಮೀನು ಚಲಿಸಲು ಒಂದು ನಿಗದಿತ ಹಾದಿ ಇಲ್ಲ. ಆಯಾಯಾ ದೇಹಗಳನ್ನು ಧರಿಸಿದ ಜೀವವನ್ನು ಒಂದು ಶಕ್ತಿ ಎಳೆಯುತ್ತಾ ನೂಕುತ್ತಾ ಮುಂದಕ್ಕೆ ಮತ್ತು ಹಿಂದಕ್ಕೆ ತಳ್ಳುತ್ತಿರುತ್ತದೆ. ಹಾಗೆಯೇ ನಮ್ಮ ಜೀವನವೂ ಒಂದು ಗಾಳಿಪಟವಿದ್ದಂತೆ. ಕೈಯಲ್ಲಿ ದಾರ ಹಿಡಿದು ಗಾಳಿಪಟವನ್ನು ಹಾರಿಬಿಟ್ಟರೂ ಅದು ಹಾರುವುದು ನಭದಲ್ಲಿನ ಗಾಳಿಯ ಚಲನೆಯನುಸಾರವಾಗಿ. ಹಾಗಾಗಿ ವಿಧಿಯೆಂಬ ಗಾಳಿಯ ಹೊಯ್ದಾಟದ ಅನುಸಾರವಾಗಿ ಹಾರಾಡುವ ಬದುಕನ್ನು ಹೊಂದಿರುವ ನೀನೂ ಒಂದು ಗಾಳಿಪಟದ ರೀತಿ ಎಂದು ನಮ್ಮ ಬದುಕಿನ ಪರಿಯನ್ನು ವಿಶ್ಲೇಷಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
642
ದಾರಿಗುರಿಗಳ ಗೊತ್ತು ಕಾಗೆಗುಂಟೇನಯ್ಯ ।
ಆರ ಮನೆ ಸಂಡಿಗೆಯೊ, ಚುಂಡಿಲಿಯೊ, ಹುಳುವೋ ॥
ಆರ ಪಿಂಡವೊ, ಏನೊ, ಎಂತೊ ಆ ಬಾಳ ಗತಿ! ।
ಮೀರಿದವನೇಂ ನೀನು? - ಮಂಕುತಿಮ್ಮ ॥ ೬೪೨ ॥
ಕೆಲವರಿಗೆ ಮಾತ್ರ ತಾವು ಮಾಡಬೇಕಾದ ಕೆಲಸದ ಸೂಕ್ತತೆ,ಪ್ರಸ್ತುತತೆ ಅಥವಾ ಅಪ್ರಸ್ತುತತೆಯ ಪೂರ್ವ ಪರಿಚಯ, ಮಾಡುವ ವಿಧಾನ, ಮಾಡುವ ಅಥವಾ ಬಿಡುವ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ. ಅವರು ಪುಣ್ಯವಂತರು. ಮಿಕ್ಕೆಲ್ಲರಿಗೂ ಅದಿಲ್ಲದೆ ಮನಸ್ಸಿಗೆ ಬರುವ ಚಿತ್ರ ವಿಚಿತ್ರ ವಿಚಾರಗಳ ಧಾರಾಪ್ರವಾಹಕ್ಕನುಗುಣವಾಗಿ ಅವರ ಕೆಲಸ ಕಾರ್ಯಕೆಲಸಗಳಿರುತ್ತವೆ. ಒಂದು ನಿರ್ಧಿಷ್ಟವಾದ ದಿಕ್ಕು ಅಥವಾ ದಿಶೆ ಇರುವುದಿಲ್ಲ. ತಾವು ಏತಕ್ಕಾಗಿ ಆ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವುದರ ಅರಿವಿಲ್ಲದೆಯೇ ಸುಖಾಸುಮ್ಮನೆ ಮಾಡುತ್ತಾ ಹೋಗುತ್ತಾರೆ. ಮಾನ್ಯ ಗುಂಡಪ್ಪನವರು ‘ ಮೀರಿದವನೇಂ ನೀನು’ ಎಂದು ಕೇಳುವಂತೆ ನಾವು ಈ ರೀತಿಯ ಬದುಕನ್ನು ಮೀರಲಾಗುವುದಿಲ್ಲ.